Revised Common Lectionary (Semicontinuous)
ರಚನೆಗಾರ: ದಾವೀದ.
68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
2 ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
ನಿನ್ನ ಶತ್ರುಗಳು ನಾಶವಾಗಲಿ.
3 ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
4 ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
ಆತನ ಹೆಸರನ್ನು ಕೊಂಡಾಡಿರಿ!
5 ದೇವರು ತನ್ನ ಪವಿತ್ರ ಆಲಯದಲ್ಲಿ,
ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
6 ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.
7 ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
8 ಭೂಮಿಯೇ ಕಂಪಿಸಿತು.
ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
9 ದೇವರೇ, ನೀನು ಮಳೆ ಸುರಿಸಿ,
ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
19 ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮನ್ನು ರಕ್ಷಿಸುವವನು ಆತನೇ.
20 ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.
9 ದುಷ್ಟರು ತಂದೆಯಿಲ್ಲದ ಮಗುವನ್ನು ಅದರ ತಾಯಿಯಿಂದ ಕಿತ್ತುಕೊಳ್ಳುವರು.
ಬಡವರ ಮಗುವನ್ನು ಸಾಲಕ್ಕೆ ಒತ್ತೆಯಾಗಿಟ್ಟುಕೊಳ್ಳುವರು.
10 ಬಡವರು ಬಟ್ಟೆಗಳಿಲ್ಲದೆ ಬೆತ್ತಲೆಯಾಗಿ ದುಡಿಯುವರು.
ಅವರು ಹಸಿವೆಯಿಂದಲೇ ದುಷ್ಟರ ಸಿವುಡುಗಳನ್ನು ಹೊರುವರು.
11 ಬಡವರು ಆಲೀವ್ ಎಣ್ಣೆಯ ಗಾಣವಾಡಿಸುವರು;
ದಾಹದಿಂದಲೇ ದ್ರಾಕ್ಷಿಅಲೆಯಲ್ಲಿ ತುಳಿದು ರಸ ತೆಗೆಯುವರು.
12 ಸಾಯುತ್ತಿರುವ ಜನರ ನರಳಾಟವು ಪಟ್ಟಣದಲ್ಲಿ ಕೇಳಿಬರುತ್ತಿದೆ.
ಗಾಯಗೊಂಡಿರುವವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ, ಆದರೆ ದೇವರು ಕೇಳಿಸಿಕೊಳ್ಳುವುದಿಲ್ಲ.
13 “ಬೆಳಕಿಗೆ ವಿರೋಧವಾಗಿ ದಂಗೆ ಎದ್ದಿರುವ ಜನರಿದ್ದಾರೆ.
ಅವರಿಗೆ ಹಗಲಿನ ಮಾರ್ಗಗಳ ಪರಿಚಯವಿಲ್ಲ.
ಅವರು ಅದರ ಮಾರ್ಗಗಳಲ್ಲಿ ಇರುವುದಿಲ್ಲ.
14 ಕೊಲೆಗಾರನು ಮುಂಜಾನೆಯಲ್ಲಿ ಎದ್ದು ದಿಕ್ಕಿಲ್ಲದ ಬಡವರನ್ನು ಕೊಲ್ಲುವನು;
ರಾತ್ರಿಯಲ್ಲಿ ಕಳವು ಮಾಡುವನು.
15 ವ್ಯಭಿಚಾರಿಯು ರಾತ್ರಿಗಾಗಿಯೇ ಕಾಯುತ್ತಿರುತ್ತಾನೆ.
‘ಯಾರ ಕಣ್ಣಿಗೂ ಬೀಳಬಾರದು’ ಎಂದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
16 ದುಷ್ಟರು ರಾತ್ರಿಯ ಕತ್ತಲಲ್ಲಿ ಮನೆಗಳಿಗೆ ಕನ್ನ ಕೊರೆಯುವರು;
ಹಗಲಲ್ಲಿ ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದು ಬೆಳಕಿಗೆ ಮರೆಯಾಗಿರುವರು.
17 ಆ ದುಷ್ಟರಿಗೆ ಕತ್ತಲೆಯು ಮುಂಜಾನೆಯಂತಿರುವುದು.
ಕಾರ್ಗತ್ತಲೆಯ ಭೀಕರತೆಗಳು ಅವರ ಸ್ನೇಹಿತರಾಗಿವೆ.
18 “ನೀವು ಹೇಳುವುದೇನೆಂದರೆ, ‘ಪ್ರವಾಹವು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ನಾಶನವು ದುಷ್ಟರನ್ನು ಕೊಚ್ಚಿಕೊಂಡು ಹೋಗುವುದು.
ಅವರ ಜಮೀನು ಶಾಪಗ್ರಸ್ತವಾಗಿದೆ.
ಆದ್ದರಿಂದ ಅವರು ದ್ರಾಕ್ಷಿಹಣ್ಣುಗಳನ್ನು ತಮ್ಮ ತೋಟಗಳಿಂದ ಸಂಗ್ರಹಿಸಲಾರರು.
19 ಬರಗಾಲವೂ ಬಿಸಿಲೂ ಹಿಮದ ನೀರನ್ನು ಹೀರುವಂತೆ
ಪಾತಾಳವು ದುಷ್ಟರನ್ನು ಎಳೆದುಕೊಳ್ಳುವುದು.
20 ಸತ್ತುಹೋದ ದುಷ್ಟನನ್ನು ಅವನ ತಾಯಿಯೂ ಮರೆತುಬಿಡುವಳು.
ದುಷ್ಟನ ದೇಹವನ್ನು ಹುಳಗಳು ತಿಂದುಬಿಡುತ್ತವೆ.
ಅವನನ್ನು ಇನ್ನೆಂದಿಗೂ ಜ್ಞಾಪಿಸಿಕೊಳ್ಳುವುದಿಲ್ಲ.
ದುಷ್ಟನು ಬಿದ್ದುಹೋದ ಮರದಂತೆ ನಾಶವಾಗುವನು.
21 ದುಷ್ಟರು ಬಂಜೆಯರಿಗೆ ಕೇಡು ಮಾಡುವರು;
ವಿಧವೆಯರಿಗೆ ಕರುಣೆ ತೋರರು.
22 ಆದರೆ ದೇವರು ತನ್ನ ಶಕ್ತಿಯಿಂದ ಬಲಿಷ್ಠರನ್ನು ನಾಶಮಾಡುವನು;
ದುಷ್ಟರು ಜೀವನದಲ್ಲಿ ಬೇರೂರಿಕೊಂಡಿದ್ದರೂ ತಮ್ಮ ಭವಿಷ್ಯತ್ತನ್ನು ತಿಳಿಯದವರಾಗಿದ್ದಾರೆ.
23 ತಾವು ಸುರಕ್ಷಿತವಾಗಿದ್ದೇವೆಂದು ದುಷ್ಟರು ಹೇಳುವುದು ಕೇವಲ ಅಲ್ಪಕಾಲದವರಗಷ್ಟೇ.
ಯಾಕೆಂದರೆ ದೇವರು ಅವರನ್ನು ಗಮನಿಸುತ್ತಲೇ ಇರುವನು.
24 ದುಷ್ಟರು ಸ್ವಲ್ಪಕಾಲ ಅಭಿವೃದ್ಧಿಗೊಂಡರೂ
ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಎಲ್ಲರಂತೆ ಇಲ್ಲವಾಗುವರು.’
25 “ಇದು ನಿಜವಲ್ಲದಿದ್ದರೆ,
ನಾನು ಸುಳ್ಳು ಹೇಳಿರುವುದಾಗಿ ಯಾರು ನಿರೂಪಿಸಬಲ್ಲರು?
ನನ್ನ ಮಾತುಗಳು ತಪ್ಪಾದವುಗಳೆಂದು ಯಾರು ತೋರಿಸಬಲ್ಲರು?”
ಪೇತ್ರನ ತಪ್ಪನ್ನು ಪೌಲನು ತೋರಿಸಿದನು
11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.
Kannada Holy Bible: Easy-to-Read Version. All rights reserved. © 1997 Bible League International