Revised Common Lectionary (Semicontinuous)
135 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
2 ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
3 ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.
4 ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
ಇಸ್ರೇಲ್, ಆತನಿಗೆ ಸೇರಿದ್ದು.
5 ಯೆಹೋವನು ಮಹೋನ್ನತನೆಂದೂ
ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
6 ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
7 ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
ಮಿಂಚನ್ನೂ ಮಳೆಯನ್ನೂ ಬರಮಾಡುವನು;
ಗಾಳಿಯನ್ನು ಬೀಸಮಾಡುವನು.
8 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
9 ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.
13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.
19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!
ಯೆಹೋವನಿಗೆ ಸ್ತೋತ್ರವಾಗಲಿ!
ಜೆರುಸಲೇಮ್ ದಂಡಿಸಲ್ಪಡುವುದು
12 ಆಗ ಯೆಹೋವನ ನುಡಿ ನನಗೆ ಬಂತು. ಆತನು ಹೀಗೆ ಹೇಳಿದನು, 13 “ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ. 14 ಆ ದೇಶದಲ್ಲಿ ನೋಹ, ದಾನಿಯೇಲ, ಯೋಬ ಜೀವಿಸಿದ್ದರೂ ಆ ಮೂವರು ತಮ್ಮ ಸತ್ಕಾರ್ಯಗಳಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ಇಡೀ ದೇಶವನ್ನು ರಕ್ಷಿಸಲಾಗುತ್ತಿರಲಿಲ್ಲ.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
15 ದೇವರು ಹೇಳಿದ್ದೇನೆಂದರೆ: “ಒಂದುವೇಳೆ, ನಾನು ಕ್ರೂರಪ್ರಾಣಿಗಳನ್ನು ದೇಶದೊಳಗೆ ಕಳುಹಿಸಿ ಜನರನ್ನು ಕೊಂದರೆ, ಅವುಗಳ ದೆಸೆಯಿಂದ ಯಾವನೂ ದೇಶದಲ್ಲಿ ಪ್ರಯಾಣಮಾಡಲಾಗುತ್ತಿರಲಿಲ್ಲ. 16 ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
17 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ಅವರ ವಿರುದ್ಧ ಹೋರಾಡಲು ನಾನು ಶತ್ರುಸೈನ್ಯವೊಂದನ್ನು ಕಳುಹಿಸಿದರೆ, ಎಲ್ಲಾ ಜನರು ಮತ್ತು ಎಲ್ಲಾ ಪ್ರಾಣಿಗಳು ನಾಶವಾಗುತ್ತಿದ್ದವು. 18 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
19 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ, 20 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
21 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಭಯಂಕರವಾದ ನಾಲ್ಕು ದಂಡನೆಗಳನ್ನು ನಾನು ಜೆರುಸಲೇಮ್ ಪಟ್ಟಣದ ಮೇಲೆ ಕಳುಹಿಸುವೆನು. ಆದ್ದರಿಂದ ಜೆರುಸಲೇಮಿಗೆ ಇನ್ನೂ ಎಷ್ಟು ಹೆಚ್ಚಾಗಿ ಕಷ್ಟಕರವಾಗಬಹುದೆಂದು ಯೋಚಿಸಿರಿ. ನಾನು ಆ ನಗರದ ವಿರುದ್ಧವಾಗಿ ಶತ್ರು ಸೈನಿಕರನ್ನು, ಹಸಿವೆ, ರೋಗ ಮತ್ತು ಕ್ರೂರಜಂತುಗಳನ್ನು ಕಳುಹಿಸುತ್ತೇನೆ. ದೇಶದಲ್ಲಿರುವ ಎಲ್ಲಾ ಜನರನ್ನೂ ಪಶುಗಳನ್ನೂ ನಿರ್ಮೂಲ ಮಾಡುವೆನು. 22 ಆದರೆ ಆಶ್ಚರ್ಯಕರವಾಗಿ, ಕೆಲವರು ಅದರಲ್ಲಿ ಉಳಿದುಕೊಳ್ಳುವರು, ಪುತ್ರಪುತ್ರಿಯರನ್ನು ನಿಮ್ಮ ಬಳಿಗೆ ಜೀವಂತವಾಗಿ ತರಲಾಗುವುದು. ಆ ಜನರು ಎಷ್ಟು ದುಷ್ಟರೆಂಬುದನ್ನು ಸ್ವತಃ ನೀವೇ ಅರ್ಥಮಾಡಿಕೊಳ್ಳುವಿರಿ. ನಾನು ಜೆರುಸಲೇಮಿನ ಮೇಲೆ ಬರಮಾಡಿದ ಇಡೀ ಆಪತ್ತಿನ ಬಗ್ಗೆ ನೀವು ಬಹಳವಾಗಿ ನೊಂದುಕೊಳ್ಳುವಿರಿ. 23 ಅವರು ಜೀವಿಸುವ ರೀತಿ, ದುಷ್ಟತನವನ್ನು ನಡಿಸುವ ರೀತಿಯನ್ನು ನೀವು ನೋಡುವಿರಿ. ಆಗ ನಾನು ಯಾಕೆ ಅವರನ್ನು ಶಿಕ್ಷಿಸುತ್ತೇನೆಂದು ನಿಮಗೆ ಗೊತ್ತಾಗುವದು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ
(ಮತ್ತಾಯ 15:21-28)
24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.
27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.
28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.
29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.
30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.
Kannada Holy Bible: Easy-to-Read Version. All rights reserved. © 1997 Bible League International