Revised Common Lectionary (Semicontinuous)
135 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
2 ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
3 ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.
4 ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
ಇಸ್ರೇಲ್, ಆತನಿಗೆ ಸೇರಿದ್ದು.
5 ಯೆಹೋವನು ಮಹೋನ್ನತನೆಂದೂ
ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
6 ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
7 ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
ಮಿಂಚನ್ನೂ ಮಳೆಯನ್ನೂ ಬರಮಾಡುವನು;
ಗಾಳಿಯನ್ನು ಬೀಸಮಾಡುವನು.
8 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
9 ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.
13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.
19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!
ಯೆಹೋವನಿಗೆ ಸ್ತೋತ್ರವಾಗಲಿ!
ದೇವಾಲಯದಲ್ಲಿನ ಪಾಪಕೃತ್ಯಗಳು
8 ಒಂದು ದಿವಸ ನಾನು ನನ್ನ ಮನೆಯಲ್ಲಿ ಕುಳಿತುಕೊಂಡಿದ್ದೆನು. ಯೆಹೂದದ ನಾಯಕರು ನನ್ನ ಮುಂದೆ ಕುಳಿತಿದ್ದರು. ಇದು ಸೆರೆಹಿಡಿದ ಆರನೇ ವರ್ಷದ, ಆರನೆಯ ತಿಂಗಳಿನ, ಐದನೇ ದಿವಸವಾಗಿತ್ತು. ಫಕ್ಕನೆ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ನಾನು ಪರವಶನಾದೆನು. 2 ಮನುಷ್ಯನಂತೆ ಕಾಣುತ್ತಿದ್ದ ರೂಪವೊಂದನ್ನು ನಾನು ನೋಡಿದೆನು. ಅದರ ಸೊಂಟದಿಂದಿಡಿದು ಕೆಳಭಾಗದವರೆಗೆ ಬೆಂಕಿಯಂತೆ ಕಾಣುತ್ತಿತ್ತು. ಸೊಂಟದಿಂದ ಮೇಲ್ಭಾಗದವರೆಗೆ ಕಾದಲೋಹದಂತೆ ಹೊಳೆಯುತ್ತಿತ್ತು. 3 ಆಗ ಅದು ಕೈಯಂತಿದ್ದ ಒಂದನ್ನು ಚಾಚಿ ನನ್ನ ತಲೆಯ ಕೂದಲನ್ನು ಹಿಡಿದುಕೊಂಡಿತು. ಬಳಿಕ ಆತ್ಮವು ನನ್ನನ್ನು ಮೇಲಕ್ಕೆ ಎತ್ತಿ ದಿವ್ಯದರ್ಶನದಲ್ಲಿ ಜೆರುಸಲೇಮಿಗೆ ಕೊಂಡೊಯ್ಯಿತು. ಅದು ನನ್ನನ್ನು ಒಳದ್ವಾರಕ್ಕೆ ಕೊಂಡೊಯ್ಯಿತು. ಇದು ಉತ್ತರ ದಿಕ್ಕಿನಲ್ಲಿತ್ತು. ದೇವರನ್ನು ಸಿಟ್ಟಿಗೆಬ್ಬಿಸುವ ವಿಗ್ರಹವು ಈ ದ್ವಾರದ ಬಳಿ ಇತ್ತು. 4 ಇಸ್ರೇಲಿನ ದೇವರ ಮಹಿಮೆಯು ಅಲ್ಲಿ ಇತ್ತು. ಆ ಮಹಿಮೆ ನಾನು ಕೆಬಾರ್ ಕಾಲುವೆಯ ಪಕ್ಕದ ಕಣಿವೆಯಲ್ಲಿ ಕಂಡ ದರ್ಶನದಂತಿತ್ತು.
5 ದೇವರು ನನ್ನೊಂದಿಗೆ ಮಾತನಾಡುತ್ತಾ, “ನರಪುತ್ರನೇ, ಉತ್ತರ ದಿಕ್ಕಿಗೆ ನೋಡು” ಎಂದು ಹೇಳಿದನು. ನಾನು ಉತ್ತರ ದಿಕ್ಕಿಗೆ ನೋಡಿದಾಗ, ದೇವರನ್ನು ರೋಷಗೊಳಿಸುವ ವಿಗ್ರಹವು ಯಜ್ಞವೇದಿಕೆಯ ದ್ವಾರದ ಉತ್ತರ ದಿಕ್ಕಿನಲ್ಲಿರುವ ಪ್ರವೇಶದ ಸ್ಥಳದಲ್ಲಿ ಇತ್ತು.
6 ಆಗ ದೇವರು ನನಗೆ, “ನರಪುತ್ರನೇ, ನನ್ನನ್ನು ನನ್ನ ಆಲಯದಿಂದ ಓಡಿಸಲು ಇಲ್ಲಿ ಇಸ್ರೇಲರು ಮಾಡುತ್ತಿರುವ ಭಯಂಕರವಾದ ಕೃತ್ಯಗಳು ನಿನಗೆ ಕಾಣುತ್ತಿಲ್ಲವೇ? ಆದರೆ ಇದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯಗಳನ್ನು ನೀನು ನೋಡುವೆ” ಎಂದು ಹೇಳಿದನು.
7 ಬಳಿಕ ಆತನು ನನ್ನನ್ನು ಅಂಗಳದ ದ್ವಾರಕ್ಕೆ ತಂದನು. ನಾನು ಗೋಡೆಯಲ್ಲಿದ್ದ ಒಂದು ರಂಧ್ರವನ್ನು ಕಂಡೆನು. 8 ಆಗ ದೇವರು ನನಗೆ, “ನರಪುತ್ರನೇ, ಗೋಡೆಯ ರಂಧ್ರವನ್ನು ಅಗೆದು ದೊಡ್ಡದನ್ನಾಗಿ ಮಾಡು” ಎಂದು ಹೇಳಿದನು. ನಾನು ಗೋಡೆಯನ್ನು ಅಗೆದೆನು. ಆಗ ಬಾಗಿಲೊಂದು ನನಗೆ ಕಾಣಿಸಿತು.
9 ಆಗ ದೇವರು ನನಗೆ, “ಜನರು ಇಲ್ಲಿ ಮಾಡುತ್ತಿರುವ ಅಸಹ್ಯವಾದ ದುಷ್ಕೃತ್ಯಗಳನ್ನು ಹೋಗಿ ನೋಡು” ಎಂದು ಹೇಳಿದನು. 10 ನಾನು ಒಳಗೆ ಹೋದಾಗ, ಗೋಡೆಗಳ ಮೇಲೆಲ್ಲಾ ಕೆತ್ತಲ್ಪಟ್ಟಿದ್ದ ಎಲ್ಲಾ ಬಗೆಯ ಕ್ರಿಮಿಕೀಟಗಳನ್ನು ಮತ್ತು ಅಸಹ್ಯಕರವಾದ ಪ್ರಾಣಿಗಳ ವಿಗ್ರಹಗಳನ್ನು ಕಂಡೆನು.
11 ನಾನು ಅಲ್ಲಿ ಶಾಫಾನನ ಮಗನಾದ ಯಾಜನ್ಯನು ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಈ ಚಿತ್ರಗಳ ಮತ್ತು ವಿಗ್ರಹಗಳ ಮುಂದೆ ನಿಂತಿರುವುದನ್ನು ಕಂಡೆನು. ಪ್ರತಿಯೊಬ್ಬನು ಒಂದು ಧೂಪಾರತಿಯನ್ನು ಹಿಡಿದುಕೊಂಡಿದ್ದನು. ಆ ಧೂಪದ ಹೊಗೆಯು ಆಕಾಶದವರೆಗೂ ಏರಿ ಹೋಗುತ್ತಿತ್ತು. 12 ಆಗ ದೇವರು ನನಗೆ, “ನರಪುತ್ರನೇ, ಇಸ್ರೇಲಿನ ಹಿರಿಯರು ಕತ್ತಲೆಯಲ್ಲಿ ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ವಿಶೇಷ ಕೋಣಿಯಿದೆ. ಅದರೊಳಗೆ ಅವರ ದೇವರ ವಿಗ್ರಹಗಳನ್ನಿಟ್ಟುಕೊಂಡಿದ್ದಾರೆ. ಅವರು, ‘ಯೆಹೋವನು ನಮ್ಮನ್ನು ನೋಡುವದಿಲ್ಲ. ಆತನು ಈ ದೇಶವನ್ನು ತೊರೆದುಬಿಟ್ಟಿದ್ದಾನೆ’ ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದಾರೆ” ಎಂದನು. 13 ಬಳಿಕ ದೇವರು ನನಗೆ, “ನೀನು ನನ್ನೊಂದಿಗೆ ಬಂದರೆ, ಜನರು ಮಾಡುವ ಇನ್ನೂ ಭಯಂಕರ ಸಂಗತಿಗಳನ್ನು ನೀನು ನೋಡುವೆ” ಎಂದು ಹೇಳಿದನು.
14 ಆಗ ದೇವರು ನನ್ನನ್ನು ಯೆಹೋವನಾಲಯದ ಉತ್ತರ ದ್ವಾರದ ಪ್ರವೇಶ ಸ್ಥಳಕ್ಕೆ ನಡೆಸಿದನು. ಅಲ್ಲಿ ಹೆಂಗಸರು ಕುಳಿತುಕೊಂಡು ರೋಧಿಸುವುದನ್ನು ನೋಡಿದೆನು. ಅವರು ತಮ್ಮೂಜ್ ಎಂಬ ಸುಳ್ಳುದೇವತೆಗೋಸ್ಕರ ದುಃಖಪಡುತ್ತಿದ್ದರು.
15 ದೇವರು ನನಗೆ, “ನರಪುತ್ರನೇ, ಈ ದುರಾಚಾರಗಳನ್ನು ನೋಡಿದ್ದೀಯಾ? ನನ್ನೊಂದಿಗೆ ಬಾ, ಇವುಗಳಿಗಿಂತ ಇನ್ನೂ ಹೆಚ್ಚಿನ ಭಯಂಕರ ಸಂಗತಿಗಳನ್ನು ನಿನಗೆ ತೋರಿಸುವೆನು” ಎಂದನು. 16 ದೇವರು ನನ್ನನ್ನು ಯೆಹೋವನಾಲಯದ ಒಳಗಿನ ಅಂಗಳಕ್ಕೆ ಕರಕೊಂಡು ಹೋದನು. ಯೆಹೋವನಾಲಯದ ಪ್ರವೇಶ ಸ್ಥಳದಲ್ಲಿ ಮಂಟಪಕ್ಕೂ ಯಜ್ಞವೇದಿಕೆಗೂ ನಡುವೆ ಪವಿತ್ರ ಸ್ಥಳದ ಕಡೆಗೆ ಬೆನ್ನು ಮಾಡಿಕೊಂಡಿದ್ದ ಇಪ್ಪತ್ತೈದು ಮಂದಿ ಇದ್ದರು. ಪೂರ್ವಕ್ಕೆ ಮುಖಮಾಡಿಕೊಂಡಿದ್ದ ಅವರು ಸೂರ್ಯನನ್ನು ಪೂಜಿಸುತ್ತಿದ್ದರು.
17 ಆಗ ದೇವರು ನನಗೆ, “ನರಪುತ್ರನೇ, ಅವರು ಮಾಡುತ್ತಿರುವುದು ನಿನಗೆ ಕಾಣುತ್ತಿದೆಯೋ? ಯೆಹೂದದ ಜನರಿಗೆ ತಾವು ಮಾಡುತ್ತಿರುವ ಈ ಭಯಂಕರ ಕೃತ್ಯಗಳು ಸಾಕಾಗಿಲ್ಲ. ಇಡೀ ದೇಶವು ದುಷ್ಟತನದಿಂದ ತುಂಬಿಹೋಗಿದೆ. ಅವರು ನನ್ನನ್ನು ಇನ್ನೂ ಹೆಚ್ಚಿಗೆ ಕೋಪಗೊಳಿಸುತ್ತಿದ್ದಾರೆ. ವಿಗ್ರಹಾರಾಧನೆಯ ಪ್ರತೀಕವಾಗಿ ತಮ್ಮ ಮೂಗುಗಳಿಗೆ ಎಳೆಯ ಕೊಂಬೆಗಳನ್ನು ಸೋಕಿಸುತ್ತಾರೆ. 18 ಅವರಿಗೆ ನಾನು ನನ್ನ ರೌದ್ರವನ್ನು ತೋರಿಸುವೆನು. ಅವರಿಗೆ ನಾನು ಕರುಣೆಯನ್ನು ಎಂದಿಗೂ ತೋರಿಸುವುದಿಲ್ಲ. ಅವರಿಗಾಗಿ ನಾನು ದುಃಖಿಸುವುದೂ ಇಲ್ಲ. ಅವರು ನನ್ನನ್ನು ಕೂಗುವರು, ಆದರೆ ನಾನು ಅವರಿಗೆ ಕಿವಿಗೊಡುವುದಿಲ್ಲ.”
ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ
26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.
27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:
“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)
34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.
36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.
Kannada Holy Bible: Easy-to-Read Version. All rights reserved. © 1997 Bible League International