Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 96

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

1 ರಾಜರುಗಳು 16:29-34

ಇಸ್ರೇಲಿನ ರಾಜನಾದ ಅಹಾಬ

29 ಆಸನು ಯೆಹೂದದ ರಾಜನಾಗಿದ್ದ ಮೂವತ್ತೆಂಟನೇ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರೇಲಿನ ರಾಜನಾದನು. ಅಹಾಬನು ಇಸ್ರೇಲನ್ನು ಸಮಾರ್ಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು. 30 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಾಬನು ಮಾಡಿದನು. ಅವನಿಗಿಂತಲೂ ಮುಂಚೆ ಇದ್ದ ರಾಜರುಗಳಲ್ಲೆಲ್ಲಾ ಅಹಾಬನೇ ಅತ್ಯಂತ ಕೆಟ್ಟವನು. 31 ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು. 32 ಬಾಳನನ್ನು ಪೂಜಿಸಲು ಅಹಾಬನು ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. 33 ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.

34 ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು.[a]

2 ಕೊರಿಂಥದವರಿಗೆ 11:1-6

ಪೌಲನು ಮತ್ತು ಸುಳ್ಳು ಅಪೊಸ್ತಲರು

11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ. ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ. ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ. ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.

ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ. ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International