Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 96

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

1 ರಾಜರುಗಳು 12:20-33

20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು.

21 ರೆಹಬ್ಬಾಮನು ಜೆರುಸಲೇಮಿಗೆ ಹಿಂದಿರುಗಿ ಹೋದನು. ಅವನು ಯೆಹೂದದ ಕುಟುಂಬಗಳನ್ನು ಮತ್ತು ಬೆನ್ಯಾಮೀನ್ ಕುಟುಂಬಗಳನ್ನು ಒಟ್ಟಾಗಿ ಸೇರಿಸಿದನು. ಅವರಲ್ಲಿ ಒಂದು ಲಕ್ಷದ ಎಂಭತ್ತು ಸಾವಿರ ಸೈನಿಕರಿದ್ದರು. ರೆಹಬ್ಬಾಮನು ಇಸ್ರೇಲಿನ ಜನರ ವಿರುದ್ಧ ಯುದ್ಧಮಾಡಲು ಅಪೇಕ್ಷಿಸಿದನು. ಅವನು ತನ್ನ ರಾಜ್ಯವನ್ನು ಪುನರ್‌ಸ್ಥಾಪಿಸಬೇಕೆಂದಿದ್ದನು. 22 ಆದರೆ ಯೆಹೋವನು ದೇವರ ಮನುಷ್ಯನೊಬ್ಬನೊಡನೆ ಮಾತನಾಡಿದನು. ಅವನ ಹೆಸರು ಶೆಮಾಯ. ಯೆಹೋವನು, 23 “ಯೆಹೂದದ ರಾಜನೂ ಸೊಲೊಮೋನನ ಮಗನೂ ಆದ ರೆಹಬ್ಬಾಮನೊಂದಿಗೆ, ಯೆಹೂದ ಮತ್ತು ಬೆನ್ಯಾಮೀನ್ ಜನರೆಲ್ಲರೊಂದಿಗೆ ಮಾತನಾಡು. 24 ನೀನು ಅವರಿಗೆ, ‘ನಿಮ್ಮ ಸೋದರರಾದ ಇಸ್ರೇಲರ ವಿರುದ್ಧ ನೀವು ಯುದ್ಧಕ್ಕೆ ಹೋಗಲೇಬಾರದೆಂದು ಯೆಹೋವನು ಹೇಳುತ್ತಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ಮನೆಗೆ ಹೋಗಬೇಕು. ಈ ಸಂಗತಿಗಳೆಲ್ಲ ಸಂಭವಿಸುವಂತೆ ನಾನೇ ಮಾಡಿದೆನು’ ಎಂದು ಹೇಳು” ಎಂಬುದಾಗಿ ತಿಳಿಸಿದನು. ಆದ್ದರಿಂದ ರೆಹಬ್ಬಾಮನ ಸೈನ್ಯದಲ್ಲಿನ ಜನರೆಲ್ಲರೂ ಯೆಹೋವನ ಆಜ್ಞೆಯನ್ನು ಅನುಸರಿಸಿದರು. ಅವರು ತಮ್ಮ ಮನೆಗಳಿಗೆ ಹೋದರು.

25 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಶೆಕೆಮ್ ನಗರವಿತ್ತು. ಯಾರೊಬ್ಬಾಮನು ಶೆಕೆಮನ್ನು ಒಂದು ಬಲಾಢ್ಯ ನಗರವನ್ನಾಗಿಸಿಕೊಂಡು ಅಲ್ಲಿ ನೆಲೆಸಿದನು. ತರುವಾಯ ಅವನು ಪೆನೂವೇಲ್ ನಗರಕ್ಕೆ ಹೋಗಿ ಅದನ್ನು ಬಲಪಡಿಸಿದನು.

26-27 ಯಾರೊಬ್ಬಾಮನು ತನ್ನಲ್ಲೇ, “ಜನರು ಜೆರುಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಹೋಗುವುದನ್ನೇ ಮುಂದುವರಿಸಿದರೆ, ಆಗ ಅವರು ದಾವೀದನ ಕುಟುಂಬವೇ ನಮ್ಮನ್ನು ಆಳಲಿ ಎಂದು ಅಪೇಕ್ಷೆಪಡಬಹುದು. ಜನರು ಯೆಹೂದದ ರಾಜನಾದ ರೆಹಬ್ಬಾಮನನ್ನೇ ಮತ್ತೆ ಅನುಸರಿಸಬಹುದು. ನಂತರ ಅವರು ನನ್ನನ್ನು ಕೊಂದುಬಿಡಬಹುದು.” ಅಂದುಕೊಂಡನು. 28 ಬಳಿಕ ರಾಜನು ಈಗ ತಾನೇನು ಮಾಡಬೇಕೆಂದು ತನ್ನ ಸಲಹೆಗಾರರನ್ನು ಕೇಳಿದನು. ಅವರು ತಮ್ಮ ಸಲಹೆಯನ್ನು ಅವನಿಗೆ ನೀಡಿದರು. ಯಾರೊಬ್ಬಾಮನು ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ನೀವು ಆರಾಧಿಸಲು ಜೆರುಸಲೇಮಿಗೆ ಹೋಗಲೇಬಾರದು. ಇಸ್ರೇಲರೇ, ನಿಮ್ಮನ್ನು ಈಜಿಪ್ಟಿನಿಂದ ಹೊರತಂದ ದೇವರುಗಳು ಇಲ್ಲಿವೆ” ಎಂದು ಹೇಳಿದನು. 29 ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು. 30 ಆದರೆ ಇದು ಮಹಾ ಪಾಪವಾಗಿತ್ತು. ಇಸ್ರೇಲಿನ ಜನರು ಕರುಗಳನ್ನು ಆರಾಧಿಸಲು ಬೇತೇಲ್ ಮತ್ತು ದಾನ್ ನಗರಗಳಿಗೆ ಪ್ರಯಾಣ ಮಾಡಿದರು.

31 ಯಾರೊಬ್ಬಾಮನು ಎತ್ತರದ ಸ್ಥಳಗಳಲ್ಲಿ ಆಲಯಗಳನ್ನು ನಿರ್ಮಿಸಿದನು. ಅವನು ಇಸ್ರೇಲಿನ ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಂಡನು. (ಅವನು ಲೇವಿಯರ ಕುಲವೊಂದರಿಂದಲೇ ಯಾಜಕರನ್ನು ಆರಿಸಿಕೊಳ್ಳಲಿಲ್ಲ.) 32 ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್‌ನಲ್ಲಿಯೇ ಆರಿಸಿಕೊಂಡನು. 33 ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು.

2 ಕೊರಿಂಥದವರಿಗೆ 5:11-17

ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ

11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ. 14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.

16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International