Revised Common Lectionary (Semicontinuous)
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
8 ಎಲ್ಲಾ ಜನರಿಗೆ ಕಾಣುವಂತೆ ಇದನ್ನು ಹಲಗೆಯ ಮೇಲೆ ಬರೆ; ಪುಸ್ತಕದಲ್ಲೂ ಬರೆ. ಕೊನೆಯ ದಿವಸಗಳಿಗಾಗಿ ಇದನ್ನು ಬರೆ. ಬಹುಕಾಲದ ನಂತರ ಇದು ಸಂಭವಿಸುವದು.
9 ಈ ಜನರು ಹೆತ್ತವರಿಗೆ ವಿಧೇಯರಾಗದ ಮಕ್ಕಳಂತಿದ್ದಾರೆ. ಅವರು ಸುಳ್ಳಾಡಿಕೊಂಡು ಯೆಹೋವನ ಬೋಧನೆಯನ್ನು ನಿರಾಕರಿಸುತ್ತಾರೆ. 10 ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ. 11 ಸತ್ಯವಾಗಿ ನಡೆಯುವ ವಿಷಯಗಳನ್ನು ನೀವು ದರ್ಶನದಲ್ಲಿ ನೋಡಬೇಡಿ. ನಮ್ಮ ದಾರಿಯಿಂದ ತೊಲಗಿರಿ. ಇಸ್ರೇಲಿನ ಪರಿಶುದ್ಧನ ಬಗ್ಗೆ ನಮಗೆ ಹೇಳುವುದನ್ನು ನಿಲ್ಲಿಸಿಬಿಡಿರಿ” ಎಂದು ಹೇಳುವರು.
ಯೆಹೂದಕ್ಕೆ ಸಹಾಯವು ಯೆಹೋವನಿಂದಲೇ ಬರುವದು
12 ಇಸ್ರೇಲಿನ ಪರಿಶುದ್ಧನು ಹೇಳುವುದೇನೆಂದರೆ, “ಯೆಹೋವನಿಂದ ಬರುವ ಸಂದೇಶವನ್ನು ಅಂಗೀಕರಿಸಲು ನೀವು ನಿರಾಕರಿಸುತ್ತೀರಿ. ನೀವು ನಿಮ್ಮ ಯುದ್ಧಗಳಿಂದಲೂ ಸುಳ್ಳಾಡುವದರಿಂದಲೂ ನಿಮಗೆ ಸಹಾಯ ಸಿಗುವದೆಂದು ಭರವಸೆಯಿಂದಿದ್ದೀರಿ. 13 ನೀವು ತಪ್ಪಿತಸ್ಥರಾಗಿದ್ದೀರಿ. ನೀವು ಬಿರುಕು ಬಿಟ್ಟಿರುವ ಎತ್ತರದ ಗೋಡೆಯಂತಿದ್ದೀರಿ. ಆ ಗೋಡೆಯು ಇದ್ದಕ್ಕಿದ್ದಂತೆ ನೆಲಕ್ಕುರುಳಿ ಚೂರುಚೂರಾಗುವದು. ಒಳ್ಳೆಯ ಸಮಯವು ಬರುತ್ತಿದೆ. 14 ಒಂದು ದೊಡ್ಡ ಆವೆಮಣ್ಣಿನ ಭರಣಿ ನಚ್ಚುನೂರಾಗಿ ಹೋಗುವಂತೆ ನೀವಿದ್ದೀರಿ. ಅದರ ತುಂಡುಗಳಿಂದ ಏನೂ ಪ್ರಯೋಜನವಿಲ್ಲ. ಆ ಭರಣಿಯ ಚೂರಿನಿಂದ ಸುಡುವ ಕಲ್ಲಿದ್ದಲನ್ನು ಹೊರತೆಗೆಯಲು ಅಥವಾ ಅದರಿಂದ ನೀರು ಸೇದಲು ಆಗುವದಿಲ್ಲ.”
15 ನನ್ನ ಒಡೆಯನೂ ದೇವರೂ ಇಸ್ರೇಲಿನ ಪರಿಶುದ್ಧನೂ ಹೇಳುವುದೇನೆಂದರೆ, “ನೀವು ನನ್ನ ಕಡೆಗೆ ತಿರುಗಿಕೊಳ್ಳುವುದಾದರೆ ನೀವು ರಕ್ಷಿಸಲ್ಪಡುವಿರಿ. ನೀವು ತಾಳ್ಮೆಯಿಂದ ನನ್ನ ಮೇಲೆ ಭರವಸೆಯಿಟ್ಟರೆ, ನೀವು ಬಲವನ್ನು ಹೊಂದುವಿರಿ.”
ಆದರೆ ಹಾಗೆ ಮಾಡಲು ನಿಮಗೆ ಇಷ್ಟವಿಲ್ಲ. 16 ನೀವು, “ನಮಗೆ ಸಹಾಯ ಬೇಡ. ಓಡಿಹೋಗಲು ಕುದುರೆಗಳು ಬೇಕು” ಎಂದು ಹೇಳುವಿರಿ. ಅದು ಸರಿಯಾದ ಮಾತು. ನೀವು ಕುದುರೆಗಳ ಮೂಲಕವೇ ಓಡುವಿರಿ. ಆದರೆ ಶತ್ರುಗಳು ನಿಮ್ಮನ್ನು ಹಿಂದಟ್ಟುವರು. ಅವರು ನಿಮ್ಮ ಕುದುರೆಗಳಿಗಿಂತ ವೇಗಶಾಲಿಗಳಾಗಿದ್ದಾರೆ. 17 ಶತ್ರುವಿನಲ್ಲಿ ಒಬ್ಬನು ಬೆದರಿಸಿದರೆ ನಿಮ್ಮಲ್ಲಿರುವ ಸಾವಿರ ಮಂದಿ ಓಡುವರು. ಐದು ಮಂದಿ ವೈರಿಗಳು ಬೆದರಿಕೆ ಹಾಕಿದರೆ ನೀವೆಲ್ಲರೂ ಅವರ ಮುಂದಿನಿಂದ ಓಡಿಹೋಗುವಿರಿ. ಕೊನೆಗೆ ನಿಮ್ಮ ಸೈನ್ಯದಲ್ಲಿ ಉಳಿಯುವ ವಸ್ತು ಯಾವದೆಂದರೆ ಬೆಟ್ಟದ ಮೇಲೆ ನೆಟ್ಟಿರುವ ನಿಮ್ಮ ಧ್ವಜಸ್ತಂಭವೊಂದೇ.
16 “ಜನರು ನಿಮ್ಮ ನಂಬಿಕೆಯನ್ನು ನಾಶಮಾಡಲಾಗದಂತೆ ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 2 ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ. 3 ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು. 4 ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ.
ಪವಿತ್ರಾತ್ಮನ ಕಾರ್ಯ
“ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು.
Kannada Holy Bible: Easy-to-Read Version. All rights reserved. © 1997 Bible League International