Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 92:1-4

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.

ಕೀರ್ತನೆಗಳು 92:12-15

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

ಜ್ಞಾನೋಕ್ತಿಗಳು 15:1-9

15 ಸಮಾಧಾನದ ಉತ್ತರ ಕೋಪವನ್ನು ಕಡಿಮೆ ಮಾಡುವುದು; ಒರಟು ಉತ್ತರ ಕೋಪವನ್ನು ಹೆಚ್ಚಿಸುವುದು.

ಜ್ಞಾನಿಯ ಮಾತನ್ನು ಜನರು ಕೇಳಬಯಸುತ್ತಾರೆ. ಮೂಢನು ಕೇವಲ ಮೂರ್ಖತನವನ್ನೇ ಮಾತಾಡುವನು.

ಯೆಹೋವನ ದೃಷ್ಟಿಗೆ ಪ್ರತಿಯೊಂದೂ ಕಾಣುತ್ತದೆ. ಆತನು ಕೆಡುಕರನ್ನೂ ಒಳ್ಳೆಯವರನ್ನೂ ಗಮನಿಸುತ್ತಿದ್ದಾನೆ.

ಹಿತನುಡಿಗಳು ಜೀವವುಳ್ಳ ಮರದಂತಿವೆ. ಸುಳ್ಳು ಮಾತುಗಳು ಮನುಷ್ಯನ ಆತ್ಮವನ್ನು ಜಜ್ಜಿಹಾಕುತ್ತವೆ.

ಮೂರ್ಖನು ತಂದೆಯ ಬುದ್ಧಿಮಾತನ್ನು ತಿರಸ್ಕರಿಸುವನು. ಬುದ್ಧಿಮಾತನ್ನು ಸ್ವೀಕರಿಸಿಕೊಳ್ಳುವವನು ಜ್ಞಾನಿಯಾಗುತ್ತಾನೆ.

ಒಳ್ಳೆಯವರ ಮನೆಗಳಲ್ಲಿ ಬಹಳ ಐಶ್ವರ್ಯವಿರುತ್ತದೆ. ಕೆಡುಕರ ಸಂಪಾದನೆಯಾದರೋ ಆಪತ್ತನ್ನು ಬರಮಾಡುತ್ತದೆ.

ಜ್ಞಾನಿಯ ಮಾತುಗಳು ತಿಳುವಳಿಕೆಯನ್ನು ಹರಡುತ್ತವೆ. ಮೂಢರ ಮಾತುಗಳು ಕೇಳಲು ಯೋಗ್ಯವಲ್ಲ.

ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.

ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.

1 ಥೆಸಲೋನಿಕದವರಿಗೆ 4:13-18

ಪ್ರಭುವಿನ ಬರುವಿಕೆ

13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.

15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International