Revised Common Lectionary (Semicontinuous)
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
13 ಜ್ಞಾನಿಯಾದ ಮಗನು ತನ್ನ ತಂದೆಯ ಮಾತುಗಳನ್ನು ಎಚ್ಚರಿಕೆಯಿಂದ ಕೇಳುತ್ತಾನೆ. ಆದರೆ ದುರಾಭಿಮಾನಿಯು ಕೇಳುವುದಿಲ್ಲ.
2 ಒಳ್ಳೆಯವರು ತಮ್ಮ ಮಾತುಗಳಿಗೆ ಪ್ರತಿಫಲ ಹೊಂದುವರು. ಕೆಡುಕರು ಯಾವಾಗಲೂ ಕೆಟ್ಟದ್ದನ್ನು ಮಾಡಬಯಸುತ್ತಾರೆ.
3 ಎಚ್ಚರಿಕೆಯಿಂದ ಮಾತಾಡುವವನು ತನ್ನ ಜೀವವನ್ನು ಕಾಪಾಡಿಕೊಳ್ಳುವನು. ಯೋಚಿಸದೆ ಮಾತಾಡುವವನು ನಾಶವಾಗುವನು.
4 ಸೋಮಾರಿಯ ಆಸೆಗಳೆಲ್ಲಾ ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ. ಕಷ್ಟಪಟ್ಟು ದುಡಿಯುವವನು ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವನು.
5 ಶಿಷ್ಟರು ಸುಳ್ಳನ್ನು ದ್ವೇಷಿಸುತ್ತಾರೆ. ದುಷ್ಟರು ನಾಚಿಕೆಕರವಾದ ಕೆಲಸ ಮಾಡುವರು.
6 ನೀತಿಯು ಯಥಾರ್ಥವಂತನನ್ನು ಕಾಪಾಡುವುದು. ಕೆಡುಕತನವು ಪಾಪವನ್ನು ಪ್ರೀತಿಸುವವನನ್ನು ಸೋಲಿಸುವುದು.
7 ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು.
8 ಐಶ್ವರ್ಯವಂತರು ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಈಡುಕೊಡಬೇಕಾಗುವುದು. ಆದರೆ ಬಡವನಿಗೆ ಅಂಥಾ ಯಾವ ಬೆದರಿಕೆಗಳೂ ಇರುವುದಿಲ್ಲ.
9 ಶಿಷ್ಟನು ಪ್ರಕಾಶಮಾನವಾದ ಬೆಳಕಿನಂತಿರುವನು. ದುಷ್ಟನಾದರೋ ನಂದಿಹೋಗುತ್ತಿರುವ ಬೆಳಕಿನಂತಿರುವನು.
10 ದುರಾಭಿಮಾನವು ಕೇವಲ ಜಗಳಕ್ಕೆ ಕಾರಣ. ಬುದ್ಧಿವಾದವನ್ನು ಕೇಳುವವರು ವಿವೇಕಿಗಳಾಗಿದ್ದಾರೆ.
11 ಮೋಸದಿಂದ ಸಂಪಾದಿಸಿದ ಹಣವು ಕ್ಷಯಿಸಿ ಹೋಗುವುದು. ದುಡಿದು ಸಂಪಾದಿಸಿದ ಹಣ ಹೆಚ್ಚುತ್ತಾ ಹೋಗುವುದು.
12 ನಿರೀಕ್ಷೆಯು ನೆರವೇರದಿದ್ದರೆ ಹೃದಯವು ವ್ಯಸನವಾಗಿರುವುದು. ಬಯಸಿದ್ದು ನೆರವೇರಿದರೆ ಆನಂದವು ತುಂಬಿಕೊಳ್ಳುವುದು.
ಆದಾಮ ಮತ್ತು ಕ್ರಿಸ್ತನು
12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಆ ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ. 13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ. 14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಆ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು.
ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು. 15 ಆದರೆ ದೇವರ ಉಚಿತ ಕೊಡುಗೆಯು ಆದಾಮನ ಪಾಪದಂತಿಲ್ಲ. ಆ ಒಬ್ಬನು ಮಾಡಿದ ಪಾಪದ ದೆಸೆಯಿಂದಾಗಿ ಅನೇಕ ಜನರು ಸತ್ತರು. ಆದರೆ ಜನರು ದೇವರಿಂದ ಪಡೆದುಕೊಂಡ ಕೃಪೆಯು ಅದಕ್ಕಿಂತ ಬಹು ದೊಡ್ಡದಾಗಿದೆ. ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯ ಮೂಲಕ ದೇವರು ಉಚಿತವಾಗಿ ಕೊಡುವ “ಜೀವ”ವನ್ನು ಅನೇಕ ಜನರು ಹೊಂದಿಕೊಂಡರು. 16 ಆದಾಮನು ಒಮ್ಮೆ ಪಾಪಮಾಡಿದ ಮೇಲೆ ಅವನಿಗೆ ಅಪರಾಧಿ ಎಂದು ತೀರ್ಪು ನೀಡಲಾಯಿತು. ಆದರೆ ದೇವರ ಉಚಿತವಾದ ಕೊಡುಗೆ ಅದಕ್ಕೆ ತದ್ವಿರುದ್ಧವಾಗಿದೆ. ಅನೇಕ ಪಾಪಗಳ ದೆಸೆಯಿಂದ ದೇವರ ಉಚಿತವಾದ ಕೊಡುಗೆ ಬಂದಿತು. ಆ ಉಚಿತ ಕೊಡುಗೆ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಒಬ್ಬನು ಪಾಪ ಮಾಡಿದನು, ಆ ಒಬ್ಬನ ದೆಸೆಯಿಂದ ಮರಣವು ಎಲ್ಲಾ ಜನರ ಮೇಲೆ ಆಳ್ವಿಕೆ ನಡೆಸಿತು. ಆದರೆ ಈಗ ಕೆಲವು ಜನರು ದೇವರ ಪೂರ್ಣ ಕೃಪೆಯನ್ನು ಮತ್ತು ನೀತಿವಂತರನ್ನಾಗಿ ಮಾಡುವ ಆತನ ಉಚಿತವಾದ ಮಹಾ ಕೊಡುಗೆಯನ್ನು ಸ್ವೀಕರಿಸಿಕೊಳ್ಳುವರು. ನಿಶ್ಚಯವಾಗಿಯು ಅವರು ಯೇಸು ಕ್ರಿಸ್ತನೆಂಬ ಆ ಒಬ್ಬ ಪುರುಷನ ಮೂಲಕ, ನಿಜವಾದ ಜೀವವನ್ನು ಹೊಂದಿಕೊಳ್ಳುವರು ಮತ್ತು ಆಳುವರು.
18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಆ ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ. 19 ಒಬ್ಬನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಜನರು ಪಾಪಿಗಳಾದರು. ಆದರೆ ಅದೇ ರೀತಿಯಲ್ಲಿ, ಒಬ್ಬನು ದೇವರಿಗೆ ವಿಧೇಯನಾದ್ದರಿಂದ ಎಲ್ಲರೂ ನೀತಿವಂತರಾಗುವರು. 20 ಧರ್ಮಶಾಸ್ತ್ರ ಬಂದದ್ದರಿಂದ ಜನರಲ್ಲಿ ಹೆಚ್ಚು ಪಾಪಗಳು ಕಂಡುಬಂದವು. ಆದರೆ ಜನರು ಹೆಚ್ಚು ಪಾಪಗಳನ್ನು ಮಾಡಿದಾಗ, ದೇವರು ಅವರಿಗೆ ಹೆಚ್ಚು ಕೃಪೆಯನ್ನು ದಯಪಾಲಿಸಿದನು. 21 ಒಂದು ಕಾಲದಲ್ಲಿ ಪಾಪವು ಮರಣದ ಮೂಲಕ ನಮ್ಮ ಮೇಲೆ ಆಳ್ವಿಕೆ ನಡೆಸಿತು. ಆದರೆ ದೇವರು ಜನರನ್ನು ನೀತಿವಂತರನ್ನಾಗಿ ಮಾಡಬೇಕೆಂದು ತನ್ನ ಕೃಪೆಯನ್ನು ಹೆಚ್ಚಾಗಿ ಅನುಗ್ರಹಿಸಿದನು. ಈ ಕೃಪೆಯು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ನಿತ್ಯಜೀವವನ್ನು ತರುತ್ತದೆ.
ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು
6 ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? 2 ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ?
Kannada Holy Bible: Easy-to-Read Version. All rights reserved. © 1997 Bible League International