Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 121

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

ಯೆಹೆಜ್ಕೇಲ 1:1-25

ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು

1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.

ಯೆಹೋವನ ರಥ—ದೇವರ ಸಿಂಹಾಸನ

ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.

10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.

ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.

15-16 ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು. 17 ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು. ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ.

18 ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು.

19 ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು. 20 ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು. 21 ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು.

22 ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸ್ವಚ್ಫವಾಗಿತ್ತು. 23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.

24 ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾರ್ಶ್ವಗಳಲ್ಲಿ ಕೆಳಗಿಳಿಸುತ್ತಿದ್ದವು.

25 ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು.

ಅಪೊಸ್ತಲರ ಕಾರ್ಯಗಳು 9:19-31

19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.

ಸೌಲನು ದಮಸ್ಕದಲ್ಲಿ ಬೋಧಿಸುವನು

ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು. 20 ಅವನು ತಡಮಾಡದೆ ಸಭಾಮಂದಿರಗಳಿಗೆ ಹೋಗಿ “ಯೇಸುವೇ ದೇವಕುಮಾರ”ನೆಂದು ಬೋಧಿಸತೊಡಗಿದನು.

21 ಸೌಲನ ಮಾತನ್ನು ಕೇಳಿದ ಜನರೆಲ್ಲರೂ ವಿಸ್ಮಯಗೊಂಡು, “ಜೆರುಸಲೇಮಿನಲ್ಲಿದ್ದವನು ಈ ಮನುಷ್ಯನೇ. ಈ ಹೆಸರಿನಲ್ಲಿ (ಯೇಸುವಿನ) ನಂಬಿಕೆ ಇಡುವ ಜನರನ್ನು ನಾಶಮಾಡಲು ಇವನು ಪ್ರಯತ್ನಿಸುತ್ತಿದ್ದನು! ಯೇಸುವಿನ ಶಿಷ್ಯರನ್ನು ಬಂಧಿಸಿ ಜೆರುಸಲೇಮಿನಲ್ಲಿರುವ ಮಹಾಯಾಜಕರ ಬಳಿಗೆ ಕೊಂಡೊಯ್ಯಲು ಇವನು ಇಲ್ಲಿಗೂ ಬಂದಿದ್ದಾನೆ” ಎಂದು ಹೇಳಿದರು.

22 ಆದರೆ ಸೌಲನು ಹೆಚ್ಚುಹೆಚ್ಚು ಪ್ರಬಲವಾಗಿ ಯೇಸುವೇ ಕ್ರಿಸ್ತನೆಂದು ನಿರೂಪಿಸಿದನು. ಅವನ ಆಧಾರಗಳು ಬಹು ಬಲವಾಗಿದ್ದ ಕಾರಣ ದಮಸ್ಕದ ಯೆಹೂದ್ಯರು ಅವನೊಂದಿಗೆ ವಾದ ಮಾಡಲಿಲ್ಲ.

ಸೌಲನು ಯೆಹೂದ್ಯರಿಂದ ತಪ್ಪಿಸಿಕೊಳ್ಳುವನು

23 ಅನೇಕ ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಸಂಚುಮಾಡಿದರು. 24 ಯೆಹೂದ್ಯರು ಸೌಲನಿಗಾಗಿ ಎದುರುನೋಡುತ್ತಾ ನಗರದ ದ್ವಾರಗಳನ್ನು ಹಗಲಿರುಳು ಕಾಯುತ್ತಿದ್ದರು. ಆದರೆ ಅವರ ಯೋಜನೆ ಸೌಲನಿಗೆ ತಿಳಿಯಿತು. 25 ಒಂದು ರಾತ್ರಿ, ಸೌಲನ ಕೆಲವು ಶಿಷ್ಯರು ಅವನನ್ನು ಪಟ್ಟಣದಿಂದ ಹೊರಗೆ ಕಳುಹಿಸುವುದಕ್ಕಾಗಿ ಅವನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ, ನಗರದ ಕೋಟೆಯ ಸಂದಿನ ಮೂಲಕ ಅವನನ್ನು ಕೆಳಗಿಳಿಸಿದರು.

ಜೆರುಸಲೇಮಿನಲ್ಲಿ ಸೌಲನು

26 ಬಳಿಕ ಸೌಲನು ಜೆರುಸಲೇಮಿಗೆ ಹೋದನು. ಅವನು ವಿಶ್ವಾಸಿಗಳ ಸಮುದಾಯವನ್ನು ಸೇರಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವರೆಲ್ಲರೂ ಅವನಿಗೆ ಭಯಪಟ್ಟರು. ಸೌಲನು ನಿಜವಾಗಿ ಯೇಸುವಿನ ಶಿಷ್ಯನೆಂದು ಅವರು ನಂಬಲಿಲ್ಲ. 27 ಆದರೆ ಬಾರ್ನಬನು ಸೌಲನನ್ನು ಸ್ವೀಕರಿಸಿಕೊಂಡು ಅಪೊಸ್ತಲರ ಬಳಿಗೆ ಕರೆದುಕೊಂಡು ಬಂದನು. ಸೌಲನು ದಮಸ್ಕದ ದಾರಿಯಲ್ಲಿ ಪ್ರಭುವನ್ನು ನೋಡಿರುವುದನ್ನೂ ಪ್ರಭುವು ಸೌಲನೊಂದಿಗೆ ಮಾತಾಡಿದ್ದನ್ನೂ ಬಾರ್ನಬನು ಅವರಿಗೆ ವಿವರಿಸಿದನು. ಅಲ್ಲದೆ ಸೌಲನು ದಮಸ್ಕದಲ್ಲಿ ಜನರಿಗೆ ಪ್ರಭುವಿನ ವಿಷಯದಲ್ಲಿ ನಿರ್ಭಯವಾಗಿ ಬೋಧಿಸಿದ್ದನ್ನೂ ಅವರಿಗೆ ತಿಳಿಸಿದನು.

28 ಅಂದಿನಿಂದ ಸೌಲನು ವಿಶ್ವಾಸಿಗಳೊಂದಿಗೆ ಇದ್ದನು. ಅವನು ಪ್ರಭುವಿನ ವಿಷಯವನ್ನು ಜೆರುಸಲೇಮಿನಲ್ಲಿ ನಿರ್ಭಯವಾಗಿ ಬೋಧಿಸಿದನು. 29 ಗ್ರೀಕ್ ಮಾತಾಡುತ್ತಿದ್ದ ಯೆಹೂದ್ಯರೊಂದಿಗೆ ಸೌಲನು ಪದೇಪದೇ ವಾದಮಾಡಿದನು. ಆದರೆ ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. 30 ಇದರ ಬಗ್ಗೆ ಸಹೋದರರಿಗೆ ತಿಳಿದಾಗ ಅವರು ಸೌಲನನ್ನು ಸೆಜರೇಯ ಪಟ್ಟಣಕ್ಕೆ ಕೊಂಡೊಯ್ದು ಅಲ್ಲಿಂದ ತಾರ್ಸಸ್ ಪಟ್ಟಣಕ್ಕೆ ಕಳುಹಿಸಿದರು.

31 ಇಂತಿರಲು, ಜುದೇಯ, ಗಲಿಲಾಯ ಮತ್ತು ಸಮಾರ್ಯ ಪ್ರದೇಶಗಳಲ್ಲಿ ಇದ್ದ ಸಭೆಗಳಲ್ಲಿ ಶಾಂತಿ ನೆಲೆಸಿತು. ಪವಿತ್ರಾತ್ಮನ ಸಹಾಯದಿಂದ ಸಭೆಗಳು ಬಲವಾಗತೊಡಗಿದವು. ವಿಶ್ವಾಸಿಗಳು ತಾವು ಪ್ರಭುವನ್ನು ಗೌರವಿಸುವುದಾಗಿ ತಮ್ಮ ಜೀವಿತಗಳ ಮೂಲಕ ತೋರಿಸಿಕೊಟ್ಟರು. ಇದರಿಂದ ವಿಶ್ವಾಸಿಗಳ ಸಭೆಯು ಹೆಚ್ಚುಹೆಚ್ಚು ಬೆಳೆಯತೊಡಗಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International