Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ಯೆಶಾಯ 43:8-15

“ಕಣ್ಣಿದ್ದೂ ಕುರುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಕಿವಿಯಿದ್ದೂ ಕಿವುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಎಲ್ಲಾ ಜನಾಂಗದವರೂ ಎಲ್ಲಾ ಜನರೂ ಒಟ್ಟುಗೂಡಬೇಕು. ಅವರ ಸುಳ್ಳುದೇವರಲ್ಲಿ ಒಬ್ಬನು ಆದಿಯಲ್ಲಿ ಸಂಭವಿಸಿದ್ದನ್ನು ಹೇಳುವದಾಗಿದ್ದರೆ ತನ್ನ ಸಾಕ್ಷಿಗಳನ್ನು ಕರೆದು ತರಲಿ. ಆ ಸಾಕ್ಷಿಗಳು ಸತ್ಯವನ್ನಾಡಲಿ. ಆಗ ಅವರು ಸತ್ಯವಂತರೋ ಇಲ್ಲವೋ ಎಂದು ಗೊತ್ತಾಗುವದು.”

10 ಯೆಹೋವನು ಹೇಳುವುದೇನೆಂದರೆ: “ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನು ಆರಿಸಿಕೊಂಡ ಸೇವಕನು ನೀನೇ. ಜನರು ನನ್ನನ್ನು ನಂಬುವಂತೆ ನಾನು ನಿಮ್ಮನ್ನು ಆರಿಸಿಕೊಂಡೆನು. ನಾನು ನಿಜ ದೇವರು ಎಂದು ನೀವು ತಿಳಿಯಬೇಕೆಂದು ನಿಮ್ಮನ್ನು ಆರಿಸಿಕೊಂಡೆನು. ನಾನೇ ನಿಜವಾದ ದೇವರು. ನನಗಿಂತ ಮೊದಲು ಯಾರೂ ಇರಲಿಲ್ಲ, ಇನ್ನು ಮುಂದೆಯೂ ನನ್ನ ಹೊರತು ಯಾವ ದೇವರೂ ಇರುವದಿಲ್ಲ. 11 ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ! 12 ನಾನೇ ನಿಮ್ಮೊಂದಿಗೆ ಮಾತನಾಡಿದೆನು. ನಾನೇ ನಿಮ್ಮನ್ನು ರಕ್ಷಿಸಿದೆನು. ನಾನು ಆ ವಿಷಯಗಳನ್ನು ನಿಮಗೆ ತಿಳಿಸಿದೆನು. ನಿಮ್ಮೊಂದಿಗೆ ಇದ್ದಾತನು ಅಪರಿಚಿತನಾಗಿರಲಿಲ್ಲ. ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನೇ ನಿಮ್ಮ ದೇವರು.” (ಯೆಹೋವನು ತಾನೇ ಈ ವಿಷಯಗಳನ್ನು ಹೇಳಿದ್ದಾನೆ.) 13 “ನಾನು ಯಾವಾಗಲೂ ದೇವರಾಗಿದ್ದೇನೆ. ನನ್ನ ಕಾರ್ಯವನ್ನು ತಡೆಯಲು ಯಾರಿಗೆ ಸಾಧ್ಯ? ನನ್ನ ಬಲವಾದ ಹಸ್ತದಿಂದ ಯಾರು ಬಿಡಿಸಬಲ್ಲರು?”

14 ಇಸ್ರೇಲರ ಪರಿಶುದ್ಧನೇ, ನಿಮ್ಮನ್ನು ರಕ್ಷಿಸುವಾತನು. ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೋಸ್ಕರ ಬಾಬಿಲೋನಿಗೆ ಸೈನ್ಯವನ್ನು ಕಳುಹಿಸುವೆನು. ಎಷ್ಟೋ ಮಂದಿ ಸೆರೆಹಿಡಿಯಲ್ಪಡುವರು. ಕಲ್ದೀಯ ಜನರು ಅವರ ಹಡಗುಗಳಿಂದಲೇ ಒಯ್ಯಲ್ಪಡುವರು. (ಅವರು ಆ ಹಡಗುಗಳ ಬಗ್ಗೆ ಬಹು ಹೆಮ್ಮೆಯಿಂದಿದ್ದಾರೆ.) 15 ನಾನೇ ನಿಮ್ಮ ಪರಿಶುದ್ಧನಾದ ಯೆಹೋವನು. ನಾನು ಇಸ್ರೇಲನ್ನು ಸೃಷ್ಟಿಸಿದೆನು; ನಾನೇ ನಿಮ್ಮ ಅರಸನು.”

ಫಿಲಿಪ್ಪಿಯವರಿಗೆ 2:25-3:1

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.

ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ

ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International