Revised Common Lectionary (Semicontinuous)
ಯೆಹೋವನು ಯೆರೆಮೀಯನನ್ನು ಕರೆದನು
4 ಯೆರೆಮೀಯನಿಗೆ ಯೆಹೋವನ ಈ ಸಂದೇಶ ಬಂದಿತು:
5 “ನಾನು ನಿನ್ನನ್ನು ನಿನ್ನ ತಾಯಿಯ ಗರ್ಭದಲ್ಲಿ ರೂಪಿಸುವ ಮುಂಚೆಯೇ
ನಿನ್ನನ್ನು ಬಲ್ಲವನಾಗಿದ್ದೆನು.
ನೀನು ಹುಟ್ಟುವದಕ್ಕಿಂತ ಮುಂಚೆಯೇ
ನಾನು ನಿನ್ನನ್ನು ಒಂದು ವಿಶೇಷವಾದ ಕೆಲಸಕ್ಕೆ
ಅಂದರೆ ಜನಾಂಗಗಳಿಗೆ ಪ್ರವಾದಿಯನ್ನಾಗಿ ಆರಿಸಿಕೊಂಡಿದ್ದೆನು.”
6 ಆಗ ಯೆರೆಮೀಯನೆಂಬ ನಾನು, “ಸರ್ವಶಕ್ತನಾದ ಯೆಹೋವನೇ, ಹೇಗೆ ಮಾತನಾಡಬೇಕೆಂಬುದೇ ನನಗೆ ತಿಳಿಯದು. ನಾನು ಕೇವಲ ಹುಡುಗನಷ್ಟೇ” ಎಂದು ಹೇಳಿದೆ.
7 ಆದರೆ ಯೆಹೋವನು ನನಗೆ,
“ನಾನು ಕೇವಲ ಹುಡುಗನೆಂದು ಹೇಳಬೇಡ,
ನಾನು ಕಳುಹಿಸುವ ಸ್ಥಳಗಳಿಗೆ ನೀನು ಹೋಗಬೇಕು.
ನಾನು ಹೇಳು ಅಂದದ್ದನ್ನೆಲ್ಲ ನೀನು ಹೇಳಬೇಕು.
8 ಯಾರಿಗೂ ನೀನು ಹೆದರಬೇಡ, ನಾನೇ ನಿನ್ನ ಜೊತೆ ಇದ್ದೇನೆ.
ನಾನು ನಿನ್ನನ್ನು ಕಾಪಾಡುತ್ತೇನೆ.
ಈ ಮಾತನ್ನು ಯೆಹೋವನಾದ ನಾನೇ ಹೇಳುತ್ತಿದ್ದೇನೆ” ಎಂದನು.
9 ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ,
“ಯೆರೆಮೀಯನೇ, ಇಗೋ, ನಾನು ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಡುತ್ತಿದ್ದೇನೆ.
10 ಕಿತ್ತುಹಾಕಲು, ಕೆಡವಲು, ನಾಶಪಡಿಸಲು, ಹಾಳುಮಾಡಲು,
ಕಟ್ಟಲು, ನೆಡಲು, ಜನಾಂಗಗಳ ಮೇಲೂ ರಾಜ್ಯಗಳ ಮೇಲೂ
ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
ಪ್ರೀತಿ
13 ನಾನು ಮನುಷ್ಯರ ಭಾಷೆಗಳನ್ನಲ್ಲದೆ ದೇವದೂತರ ಭಾಷೆಗಳನ್ನು ಮಾತಾಡಬಹುದು. ಆದರೆ ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ, ನಾನು ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ತಾಳ. 2 ಪ್ರವಾದಿಸುವ ವರ ನನಗಿರಬಹುದು; ದೇವರ ರಹಸ್ಯ ಸಂಗತಿಗಳನ್ನೆಲ್ಲಾ ಮತ್ತು ಜ್ಞಾನವನ್ನೆಲ್ಲಾ ನಾನು ಅರ್ಥಮಾಡಿಕೊಂಡಿರಬಹುದು ಮತ್ತು ಬೆಟ್ಟಗಳನ್ನು ಚಲಿಸಬಲ್ಲಂಥ ಮಹಾನಂಬಿಕೆ ನನಗಿರಬಹುದು. ಇವುಗಳೆಲ್ಲಾ ನನ್ನಲ್ಲಿ ಇದ್ದರೂ ಪ್ರೀತಿಯು ಇಲ್ಲದಿದ್ದರೆ, ನಾನು ನಿಷ್ಪ್ರಯೋಜಕನಾಗಿದ್ದೇನೆ. 3 ನಾನು ನನ್ನಲ್ಲಿರುವ ಪ್ರತಿಯೊಂದನ್ನು ಜನರ ಊಟಕ್ಕಾಗಿ ಕೊಟ್ಟುಬಿಡಬಹುದು. ಹೆಮ್ಮೆಪಡುವುದಕ್ಕಾಗಿ ನಾನು ನನ್ನ ದೇಹವನ್ನೇ ಸಜೀವದಹನವನ್ನಾಗಿ ಒಪ್ಪಿಸಿಕೊಡಬಹುದು. ಆದರೆ ಈ ಕಾರ್ಯಗಳನ್ನೆಲ್ಲ ಮಾಡಿದರೂ ಪ್ರೀತಿಯು ಇಲ್ಲದಿದ್ದರೆ ನನಗೇನೂ ಪ್ರಯೋಜನವಿಲ್ಲ.
4 ಪ್ರೀತಿಯು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಅಸೂಯೆಪಡುವುದಿಲ್ಲ; ಹೊಗಳಿಕೊಳ್ಳುವುದಿಲ್ಲ; ಗರ್ವಪಡುವುದಿಲ್ಲ. 5 ಪ್ರೀತಿಯು ನಾಚಿಕೆಕರವಾದ ರೀತಿಯಲ್ಲಿ ವರ್ತಿಸುವುದಿಲ್ಲ; ಸ್ವಾರ್ಥಿಯಲ್ಲ ಮತ್ತು ಬೇಗನೆ ಕೋಪಗೊಳ್ಳುವುದಿಲ್ಲ; ತನಗಾದ ಅಪಕಾರಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ. 6 ಪ್ರೀತಿಯು ಕೆಟ್ಟದ್ದರ ಬಗ್ಗೆ ಸಂತೋಷಪಡದೆ ಸತ್ಯದ ಬಗ್ಗೆ ಸಂತೋಷಪಡುತ್ತದೆ. 7 ಪ್ರೀತಿಯು ಎಲ್ಲವನ್ನು ತಾಳ್ಮೆಯಿಂದ ಸ್ವೀಕರಿಸಿಕೊಳ್ಳುತ್ತದೆ; ಯಾವಾಗಲೂ ನಂಬುತ್ತದೆ; ಯಾವಾಗಲೂ ನಿರೀಕ್ಷಿಸುತ್ತದೆ; ಯಾವಾಗಲೂ ದೃಢವಾಗಿರುತ್ತದೆ.
8 ಪ್ರೀತಿಯು ಎಂದಿಗೂ ಕೊನೆಗೊಳ್ಳುವುದಿಲ್ಲ. ಪ್ರವಾದಿಸುವ ವರಗಳಿವೆ, ಆದರೆ ಅವು ಕೊನೆಗೊಳ್ಳುತ್ತವೆ. ವಿವಿಧ ಭಾಷೆಗಳಲ್ಲಿ ಮಾತಾಡುವ ವರಗಳಿವೆ, ಆದರೆ ಆ ವರಗಳು ಕೊನೆಗೊಳ್ಳುತ್ತವೆ. ಜ್ಞಾನವೆಂಬ ವರವೂ ಇದೆ, ಆದರೆ ಅದೂ ಕೊನೆಗೊಳ್ಳುವುದು. 9 ಏಕೆಂದರೆ ನಮಗಿರುವ ಈ ಜ್ಞಾನವು ಮತ್ತು ಈ ಪ್ರವಾದನೆಗಳು ಸಂಪೂರ್ಣವಾದುವುಗಳಲ್ಲ. 10 ಆದರೆ ಸಂಪೂರ್ಣತೆಯು ಬಂದಾಗ ಸಂಪೂರ್ಣವಲ್ಲದವುಗಳು ಕೊನೆಗೊಳ್ಳುತ್ತವೆ.
11 ನಾನು ಬಾಲಕನಾಗಿದ್ದಾಗ ಬಾಲಕನಂತೆ ಮಾತಾಡಿದೆನು, ಆಲೋಚಿಸಿದೆನು, ಯೋಜನೆಗಳನ್ನು ಮಾಡಿದೆನು. ಆದರೆ ನಾನು ಪ್ರಾಯಸ್ಥನಾದ ಮೇಲೆ ಬಾಲ್ಯದ ನಡವಳಿಕೆಯನ್ನು ಬಿಟ್ಟುಬಿಟ್ಟೆನು. 12 ನಮಗೂ ಸಹ ಇದು ಅನ್ವಯಿಸುತ್ತದೆ. ಕನ್ನಡಿಯಲ್ಲಿ ಕೇವಲ ಪ್ರತಿಬಿಂಬ ಕಾಣುವಂತೆ ಈಗ ನಾವು ನೋಡುತ್ತಿದ್ದೇವೆ. ಆದರೆ ಮುಂದಿನ ಕಾಲದಲ್ಲಿ ನಾವು ಮುಖಾಮುಖಿಯಾಗಿ ಕಾಣುತ್ತೇವೆ. ಈಗ ನನಗೆ ತಿಳಿದಿರುವುದು ಕೇವಲ ಒಂದು ಭಾಗವಷ್ಟೆ, ಆದರೆ ಆ ಕಾಲದಲ್ಲಿ ದೇವರು ನನ್ನನ್ನು ತಿಳಿದಿರುವಂತೆ ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು. 13 ಆದ್ದರಿಂದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಶಾಶ್ವತವಾದವುಗಳಾಗಿವೆ. ಆದರೆ ಇವುಗಳಲ್ಲಿ ಅತ್ಯುನ್ನತವಾದದ್ದು ಪ್ರೀತಿಯೇ.
21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.
22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.
23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.
25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.
27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.
28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International