Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 147:12-20

12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
    ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
    ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
    ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
    ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
    ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
    ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
    ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.

19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
    ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
    ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.

ಯೆಹೋವನಿಗೆ ಸ್ತೋತ್ರವಾಗಲಿ!

1 ಪೂರ್ವಕಾಲವೃತ್ತಾಂತ 28:1-10

ದೇವಾಲಯದ ನಕ್ಷೆ

28 ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.

ಎಲ್ಲರೂ ಸೇರಿಬಂದಾಗ ದಾವೀದನು ನಿಂತು ಹೇಳಿದ್ದೇನೆಂದರೆ, “ನನ್ನ ಜನರೇ, ನನ್ನ ಸಹೋದರರೇ, ನನ್ನ ಮಾತುಗಳನ್ನು ಕೇಳಿರಿ. ನಮ್ಮ ದೇವರ ಒಡಂಬಡಿಕೆಯ ಪೆಟ್ಟಿಗೆಗೋಸ್ಕರ ಒಂದು ಯೋಗ್ಯಸ್ಥಳವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆ ಸ್ಥಳವು ದೇವರ ಪಾದಪೀಠವಾಗಬೇಕು. ಅದಕ್ಕಾಗಿ ನಾನು ದೇವರಿಗೆ ಆಲಯವನ್ನು ಕಟ್ಟಿಸಲು ಯೋಜನೆಯನ್ನು ಹಾಕಿದೆನು. ಆದರೆ ದೇವರು ನನಗೆ, ‘ದಾವೀದನೇ, ನೀನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. ಯಾಕೆಂದರೆ ನೀನೊಬ್ಬ ರಣವೀರನಾಗಿದ್ದುದರಿಂದ ಎಷ್ಟೋ ಮಂದಿಯನ್ನು ಕೊಂದು ಅವರ ರಕ್ತಸುರಿಸಿರುವೆ’ ಎಂದು ಹೇಳಿದನು.

“ಇಸ್ರೇಲರ ದೇವರಾದ ಯೆಹೋವನು ಇಸ್ರೇಲರ ಹನ್ನೆರಡು ಕುಲಗಳನ್ನು ಮುನ್ನಡೆಸಲು ಯೆಹೂದ ಕುಲವನ್ನು ಆರಿಸಿಕೊಂಡಿದ್ದಾನೆ. ಆ ಕುಲದಿಂದ ದೇವರು ನನ್ನ ತಂದೆಯ ಕುಟುಂಬವನ್ನು ಆರಿಸಿದ್ದಾನೆ; ಆ ಕುಟುಂಬದಿಂದ ದೇವರು ಇಸ್ರೇಲರ ಅರಸನನ್ನಾಗಿ ನನ್ನನ್ನು ಆರಿಸಿಕೊಂಡಿದ್ದಾನೆ. ಯೆಹೋವನು ನನಗೆ ಅನೇಕ ಮಕ್ಕಳನ್ನು ಕೊಟ್ಟನು. ಆ ಮಕ್ಕಳಲ್ಲಿ ಯೆಹೋವನು ಸೊಲೊಮೋನನನ್ನು ನನ್ನ ನಂತರ ಇಸ್ರೇಲರ ಅರಸನನ್ನಾಗಿ ಆರಿಸಿಕೊಂಡಿದ್ದಾನೆ. ಆದರೆ ನಿಜವಾಗಿಯೂ, ಇಸ್ರೇಲ್, ದೇವರಾದ ಯೆಹೋವನ ರಾಜ್ಯವಾಗಿದೆ. ಯೆಹೋವನು ನನಗೆ, ‘ದಾವೀದನೇ, ನಿನ್ನ ಮಗನಾದ ಸೊಲೊಮೋನನು ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಕಟ್ಟುವನು. ಯಾಕೆಂದರೆ ಸೊಲೊಮೋನನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನಗೆ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ಸೊಲೊಮೋನನು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯನಾಗಿದ್ದಾನೆ. ಅವನು ಹೀಗೆಯೇ ಮುಂದುವರಿದರೆ ನಾನು ಅವನ ರಾಜ್ಯವನ್ನು ಶಾಶ್ವತವಾಗಿ ಬಲಗೊಳಿಸುವೆನು’” ಎಂದು ಹೇಳಿದನು.

“ನಾನು ದೇವರ ಸನ್ನಿಧಾನದಲ್ಲಿಯೂ ಎಲ್ಲಾ ಇಸ್ರೇಲರ ಮುಂದೆಯೂ ನಿಮಗಿದನ್ನು ಹೇಳುತ್ತಿದ್ದೇನೆ. ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನೀವು ಉತ್ತಮವಾದ ಈ ದೇಶವನ್ನು ಅನುಭವಿಸುವಿರಿ; ನಿಮ್ಮ ಸಂತತಿಯವರೂ ಇದರ ಸುಖವನ್ನು ಅನುಭವಿಸುವಂತೆ ಮಾಡುವಿರಿ.

“ನನ್ನ ಮಗನಾದ ಸೊಲೊಮೋನನೇ, ನಿನ್ನ ತಂದೆಯ ದೇವರನ್ನು ನೀನು ಚೆನ್ನಾಗಿ ಅರಿತುಕೋ. ನೀನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ನಿನ್ನ ದೇವರನ್ನು ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ನೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ಪ್ರಾರ್ಥನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬಿಟ್ಟರೆ ಆತನು ನಿನ್ನನ್ನು ಬಿಟ್ಟುಹೋಗುವನು. 10 ಸೊಲೊಮೋನನೇ, ಆತನ ಪವಿತ್ರ ದೇವಾಲಯವನ್ನು ಕಟ್ಟಲು ದೇವರು ನಿನ್ನನ್ನು ಆರಿಸಿಕೊಂಡಿರುತ್ತಾನೆಂಬುದನ್ನು ನೀನು ತಿಳಿಯಬೇಕು. ಆದ್ದರಿಂದ ನೀನು ಬಲಗೊಂಡು ಕಾರ್ಯವನ್ನು ಸಂಪೂರ್ಣಗೊಳಿಸು.”

1 ಕೊರಿಂಥದವರಿಗೆ 3:10-17

10 ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12 ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13 ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14 ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15 ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು.

16 ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17 ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International