Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 12:2-6

ದೇವರು ನನ್ನನ್ನು ರಕ್ಷಿಸುತ್ತಾನೆ.
    ಆತನಲ್ಲಿ ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡೆನು. ಆತನು ನನ್ನನ್ನು ರಕ್ಷಿಸುತ್ತಾನೆ.
ಯೆಹೋವನೇ ನನ್ನ ಬಲವು.
    ಆತನು ನನ್ನನ್ನು ರಕ್ಷಿಸುತ್ತಾನೆ. ನಾನು ಆತನಿಗೆ ಸ್ತೋತ್ರಗಾನ ಹಾಡುವೆನು.”

ರಕ್ಷಣೆಯೆಂಬ ಬುಗ್ಗೆಯಿಂದ ನೀರನ್ನು ತೆಗೆದುಕೊ.
    ಆಗ ನೀನು ಸಂತೋಷಗೊಳ್ಳುವೆ.
ಆಗ ನೀನು, “ಯೆಹೋವನಿಗೆ ಸ್ತೋತ್ರವಾಗಲಿ, ಆತನ ಹೆಸರಿನ ಮಹತ್ವವನ್ನು ವರ್ಣಿಸಿರಿ!
    ಆತನು ಜನಾಂಗಗಳಲ್ಲಿ ಮಾಡಿದ ಕಾರ್ಯಗಳನ್ನು ಸಾರಿರಿ.
    ಆತನ ಹೆಸರು ಮಹೋನ್ನತವೆಂದು ಜ್ಞಾಪಕಪಡಿಸಿರಿ!” ಎಂದು ಹೇಳುವೆ.
ಯೆಹೋವನಿಗೆ ಸ್ತೋತ್ರಗಾನ ಹಾಡಿರಿ.
    ಯಾಕೆಂದರೆ ಆತನು ಮಹಾಕಾರ್ಯಗಳನ್ನು ನಡೆಸಿದ್ದಾನೆ.
ದೇವರ ಬಗ್ಗೆ ಎಲ್ಲರಿಗೂ ಪ್ರಕಟಿಸಿರಿ. ಇಡೀ ಲೋಕಕ್ಕೆ ಸಾರಿರಿ.
    ಎಲ್ಲಾ ಜನರು ಇದನ್ನು ತಿಳಿಯಲಿ.
ಚೀಯೋನಿನ ನಿವಾಸಿಗಳೇ, ಇದರ ವಿಷಯವಾಗಿ ಹರ್ಷಧ್ವನಿ ಮಾಡಿರಿ.
    ಇಸ್ರೇಲರ ಪರಿಶುದ್ಧನು ನಿಮ್ಮೊಂದಿಗೆ ಬಲವಾಗಿದ್ದಾನೆ.
    ಆದ್ದರಿಂದ ಹರ್ಷಿಸಿರಿ.

ಆಮೋಸ 6:1-8

ಇಸ್ರೇಲರ ಸುಭಿಕ್ಷೆ ತೆಗೆಯಲ್ಪಡುವದು

ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ
    ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು.
ನೀವು ವಿಶೇಷವಾದ ದೇಶದ ವಿಶೇಷ ನಾಯಕರು.
    ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.
ಹೋಗಿ ಕಲ್ನೆಯ ಕಡೆಗೆ ದಿಟ್ಟಿಸಿರಿ.
    ಅಲ್ಲಿಂದ ದೊಡ್ಡ ಪಟ್ಟಣವಾದ ಹಾಮಾತಿಗೆ ಹೋಗಿರಿ.
    ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಹೋಗಿರಿ.
ಆ ಜನಾಂಗಗಳಿಗಿಂತ ನೀವು ಉತ್ತಮರೋ? ಇಲ್ಲ.
    ಅವರ ರಾಜ್ಯವು ನಿಮಗಿಂತ ವಿಸ್ತಾರವಾಗಿದೆ.
ಶಿಕ್ಷಿಸಲ್ಪಡುವ ದಿವಸದ ಕಡೆಗೆ ನೀವು ಧಾವಿಸುತ್ತಿದ್ದೀರಿ.
    ಅಕ್ರಮ ಆಳ್ವಿಕೆಯನ್ನು ನೀವು ಹತ್ತಿರಕ್ಕೆ ಬರಮಾಡಿಕೊಳ್ಳುತ್ತಾ ಇದ್ದೀರಿ.
ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ,
    ದಂತದ ಮಂಚದಲ್ಲಿ ಮಲಗುವಿರಿ;
ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ.
    ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ;
    ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.
ಅಂದವಾದ ಪಾತ್ರೆಗಳಲ್ಲಿ ದ್ರಾಕ್ಷಾರಸ ಕುಡಿಯುವಿರಿ.
    ಉತ್ತಮವಾದ ಸುಗಂಧತೈಲವನ್ನು ಉಪಯೋಗಿಸುವಿರಿ.
ಯೋಸೇಫನ ಕುಟುಂಬದ
    ನಾಶನದ ಬಗ್ಗೆಯೂ ನೀವು ಬೇಸರಗೊಳ್ಳಲಿಲ್ಲ.

ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆ ಒಯ್ಯಲ್ಪಡುವವರಲ್ಲಿ ಮೊದಲಿಗರಾಗುವರು. ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು:

“ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ.
    ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ.
ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ
    ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”

2 ಕೊರಿಂಥದವರಿಗೆ 8:1-15

ಕ್ರೈಸ್ತರ ಕೊಡುವಿಕೆ

ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ. ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು. ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು. ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.

ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ. ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.

ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.

10 ನಾನು ನಿಮಗೆ ಹೇಳುವುದೇನೆಂದರೆ: ಕಳೆದ ವರ್ಷ ಕೊಡುವುದರಲ್ಲಿ ನೀವೇ ಮೊದಲಿಗರಾಗಿದ್ದಿರಿ ಮತ್ತು ಮೊಟ್ಟಮೊದಲನೆಯದಾಗಿ ಕೊಟ್ಟವರು ನೀವೇ. 11 ಆದ್ದರಿಂದ ನೀವು ಆರಂಭಿಸಿದ ಕಾರ್ಯವನ್ನು ಈಗ ಪೂರ್ಣಗೊಳಿಸಿರಿ. ಆಗ, ನಿಮ್ಮ ಕಾರ್ಯ ಮತ್ತು ನಿಮ್ಮ ಸಿದ್ಧಮನಸ್ಸು ಸರಿಸಮಾನವಾಗಿರುವುದು. ನಿಮ್ಮಲ್ಲಿರುವುದನ್ನು ಕೊಡಿರಿ. 12 ನೀವು ಕೊಡಬೇಕೆಂದು ಕೊಟ್ಟರೆ ನಿಮ್ಮ ದಾನವು ಸ್ವೀಕೃತವಾಗುವುದು. ನಿಮ್ಮ ದಾನದ ಮೌಲ್ಯಮಾಪನವು ನೀವು ಏನನ್ನು ಹೊಂದಿದ್ದೀರಿ ಎಂಬುದರ ಮೇಲೆಯೇ ಹೊರತು ನೀವು ಏನನ್ನು ಹೊಂದಿಲ್ಲ ಎಂಬುದರ ಮೇಲೆ ಆಧಾರಗೊಂಡಿಲ್ಲ. 13 ಇತರ ಜನರು ಸುಖವಾಗಿರುವಾಗ ನೀವು ಕಷ್ಟದಿಂದಿರುವುದು ನಮಗೆ ಇಷ್ಟವಿಲ್ಲ. ಪ್ರತಿಯೊಂದರಲ್ಲಿಯೂ ಸಮಾನತೆ ಇರಬೇಕೆಂಬುದೇ ನಮ್ಮ ಬಯಕೆ. 14 ಈಗ ನಿಮ್ಮಲ್ಲಿ ಬೇಕಾದಷ್ಟಿದೆ. ನಿಮ್ಮ ಈ ಸಮೃದ್ಧಿಯು ಇತರ ಜನರ ಕೊರತೆಯನ್ನು ನೀಗಿಸುವುದು. ಬಳಿಕ, ಅವರು ಸಮೃದ್ಧರಾಗಿರುವಾಗ ನಿಮ್ಮ ಕೊರತೆಯನ್ನು ನೀಗಿಸುವರು. ಹೀಗೆ ಎಲ್ಲರೂ ಸಮಾನರಾಗಿರುವರು. 15 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದಾಗುವುದು,

“ಬಹಳವಾಗಿ ಶೇಖರಿಸಿಕೊಂಡವನಿಗೆ ಏನೂ ಹೆಚ್ಚಾಗಲಿಲ್ಲ,
ಸ್ವಲ್ಪ ಶೇಖರಿಸಿಕೊಂಡವನಿಗೆ ಏನೂ ಕಡಿಮೆಯಾಗಲಿಲ್ಲ.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International