Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 22:1-15

ರಚನೆಗಾರ: ದಾವೀದ.

22 ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ?
    ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ!
    ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು,
    ಆದರೂ ನೀನು ನನಗೆ ಉತ್ತರಿಸಲಿಲ್ಲ.
ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.

ದೇವರೇ, ಪರಿಶುದ್ಧನು ನೀನೇ.
    ನೀನು ರಾಜನಂತೆ ಕುಳಿತಿರುವೆ.
    ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು.
    ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ.
    ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ?
    ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು.
    ಅವರು ಓರೇ ತುಟಿಮಾಡಿ ತಲೆಯಾಡಿಸುತ್ತಾ,
“ಯೆಹೋವನಿಗೆ ಮೊರೆಯಿಡು,
    ಆತನು ನಿನ್ನನ್ನು ರಕ್ಷಿಸಬಹುದು.
    ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಎಂದು ಹೇಳುತ್ತಾರೆ.

ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
    ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
10 ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ.
    ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.

11 ಹೀಗಿರಲು, ನನ್ನನ್ನು ತೊರೆಯಬೇಡ!
    ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
12 ಜನರು ನನ್ನನ್ನು ಸುತ್ತುಗಟ್ಟಿದ್ದಾರೆ;
    ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
13 ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ
    ಅವರ ಬಾಯಿಗಳು ಅಗಲವಾಗಿ ತೆರೆದಿವೆ.

14 ನೆಲದ ಮೇಲೆ ಸುರಿದ ನೀರಿನಂತೆ
    ನನ್ನ ಬಲವು ಇಲ್ಲವಾಗಿದೆ;
ನನ್ನ ಮೂಳೆಗಳೆಲ್ಲಾ ಸಡಿಲಗೊಂಡಿವೆ;
    ಹೃದಯವು ಮೇಣದಂತೆ ಕರಗಿಹೋಗಿದೆ.
15 ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ.
    ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ.
    ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.

ಯೋಬನು 17

17 “ನನ್ನ ಆತ್ಮವು ಒಡೆದುಹೋಗಿದೆ;
    ನನ್ನ ಜೀವಿತವು ಮುಗಿದುಹೋಗಿದೆ;
    ಸಮಾಧಿಯು ನನಗೋಸ್ಕರ ಕಾಯುತ್ತಿದೆ.
ಜನರು ನನ್ನ ಸುತ್ತಲೂ ನಿಂತುಕೊಂಡು ನನ್ನನ್ನು ನೋಡಿ ನಗುತ್ತಿದ್ದಾರೆ.
    ಅವರು ನನ್ನ ಕಣ್ಣೆದುರಿನಲ್ಲೇ ಗೇಲಿ ಮಾಡುತ್ತಾ ಅವಮಾನ ಮಾಡುತ್ತಿದ್ದಾರೆ.

“ದೇವರೇ, ಕೃಪೆ ತೋರಿ ನಾನು ನಿರಪರಾಧಿಯೆಂಬುದಕ್ಕೆ ನೀನೇ ನನಗೆ ಜಾಮೀನಾಗು.
    ನಾನು ನಿರಪರಾಧಿ ಎಂಬುದಕ್ಕೆ ಜಾಮೀನಾಗಲು ಯಾರೂ ಒಪ್ಪುತ್ತಿಲ್ಲ.
ನೀನು ನನ್ನ ಸ್ನೇಹಿತರ ಮನಸ್ಸುಗಳನ್ನು ಮುಚ್ಚಿಬಿಟ್ಟಿರುವೆ;
    ಅವರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ.
    ಅವರಿಗೆ ಜಯವಾಗದಂತೆ ನೋಡಿಕೊ.
‘ಮನುಷ್ಯನು ತನ್ನ ಸ್ನೇಹಿತರಿಗೆ ಸಹಾಯಮಾಡಲು ತನ್ನ ಮಕ್ಕಳನ್ನೇ ಅಲಕ್ಷಿಸುತ್ತಾನೆ’[a]
    ಎಂಬ ಗಾದೆಯಿದೆ.
    ಆದರೆ ಈಗ ನನ್ನ ಸ್ನೇಹಿತರು ನನಗೆ ವಿರೋಧವಾಗಿ ಎದ್ದಿದ್ದಾರೆ.
ದೇವರು ನನ್ನ ಹೆಸರನ್ನು ಪ್ರತಿಯೊಬ್ಬರಿಗೂ ಕೆಟ್ಟಪದವನ್ನಾಗಿ ಮಾಡಿದ್ದಾನೆ.
    ಜನರು ನನ್ನ ಮುಖಕ್ಕೆ ಉಗುಳುತ್ತಿದ್ದಾರೆ.
ನನ್ನ ಕಣ್ಣುಗಳು ಕುರುಡಾಗಿವೆ, ನಾನು ಬಹು ದುಃಖಿತನಾಗಿದ್ದೇನೆ.
    ಅತ್ಯಧಿಕವಾದ ನೋವಿನಲ್ಲಿದ್ದೇನೆ; ನನ್ನ ದೇಹವು ನೆರಳಿನಂತೆ ಬಹು ತೆಳ್ಳಗಾಗಿದೆ.
ನೀತಿವಂತರು ಇದನ್ನು ಕಂಡು ಗಲಿಬಿಲಿಗೊಂಡಿದ್ದಾರೆ.
    ನಿರಪರಾಧಿಗಳು ದೇವದೂಷಕರ ವಿಷಯದಲ್ಲಿ ಗಲಿಬಿಲಿಗೊಂಡಿದ್ದಾರೆ.
ನೀತಿವಂತರು ಸನ್ಮಾರ್ಗದಲ್ಲಿ ಜೀವಿಸುವರು.
    ನಿರಪರಾಧಿಗಳು ಸದ್ಗುಣದಲ್ಲಿ ಬಲವಾಗುತ್ತಲೇ ಇರುವರು.

10 “ಆದರೆ ನೀವೆಲ್ಲರೂ ಬನ್ನಿರಿ, ನನ್ನ ತಪ್ಪನ್ನು ತೋರಿಸಿರಿ.
    ನಿಮ್ಮಲ್ಲಿ ಒಬ್ಬ ಜ್ಞಾನಿಯೂ ಇಲ್ಲ.
11 ನನ್ನ ಜೀವಿತವು ಮುಗಿದುಹೋಗುತ್ತಿದೆ, ನನ್ನ ಯೋಜನೆಗಳು ನಾಶವಾಗಿವೆ;
    ನನ್ನ ನಿರೀಕ್ಷೆಯು ಇಲ್ಲವಾಗಿದೆ.
12 ರಾತ್ರಿಯನ್ನು ಹಗಲನ್ನಾಗಿ ಪರಿವರ್ತಿಸುವ,
    ಬೆಳಕನ್ನು ಕತ್ತಲೆಯನ್ನಾಗಿ ಮಾಡುವ ನನ್ನ ನಿರೀಕ್ಷೆಗಳು ಇಲ್ಲವಾಗಿವೆ.

13 “ನಾನು ನಿರೀಕ್ಷಿಸುತ್ತಿರುವ ಮನೆಯು ಕೇವಲ ಸಮಾಧಿಯಾಗಿದ್ದರೆ,
    ನನ್ನ ಹಾಸಿಗೆಯನ್ನು ಕತ್ತಲೆಯಲ್ಲಿ ಹಾಸಿಕೊಂಡಿದ್ದರೆ,
14 ನಾನು ಸಮಾಧಿಗೆ, ‘ನೀನೇ ನನ್ನ ತಂದೆ’ಯೆಂದು
    ಹುಳವಿಗೆ, ‘ನೀನೇ ನನ್ನ ತಾಯಿ, ನೀನೇ ನನ್ನ ತಂಗಿ’ ಎಂದು ಹೇಳುವುದಾದರೆ,
15 ನನಗೆ ನಿರೀಕ್ಷೆಯೇ ಇಲ್ಲ.
    ನನ್ನ ನಿರೀಕ್ಷೆಯನ್ನು ಯಾರೂ ನೋಡಲಾರರು.
16 ನನ್ನ ನಿರೀಕ್ಷೆಯು ಮರಣದ ಸ್ಥಳಕ್ಕೆ ಇಳಿದು ಹೋಗುವುದೇ?
    ನಾವು ಒಟ್ಟಾಗಿ ಧೂಳಿಗೆ ಇಳಿದುಹೋಗುತ್ತೇವೋ?”

ಇಬ್ರಿಯರಿಗೆ 3:7-19

ನಾವು ದೇವರನ್ನು ಅನುಸರಿಸಲೇಬೇಕು

ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
    ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
    ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
    ‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
    ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
    ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)

12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:

“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
    ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(B)

16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International