Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
37 ದಾವೀದನು ತನ್ನ ಮಗನಿಗಾಗಿ ಪ್ರತಿನಿತ್ಯವೂ ಗೋಳಾಡುತ್ತಿದ್ದನು.
ಅಬ್ಷಾಲೋಮನು ಗೆಷೂರಿಗೆ ತಪ್ಪಿಸಿಕೊಂಡು ಹೋದದ್ದು
ಗೆಷೂರಿನ ರಾಜನೂ ಅಮ್ಮೀಹೂದನ ಮಗನೂ ಆದ ತಲ್ಮೈನ[a] ಹತ್ತಿರಕ್ಕೆ ಅಬ್ಷಾಲೋಮನು ಓಡಿಹೋದನು. 38 ಅಬ್ಷಾಲೋಮನು ಗೆಷೂರಿಗೆ ಓಡಿಹೋದ ನಂತರ, ಅಲ್ಲಿ ಅವನು ಮೂರು ವರ್ಷಗಳ ಕಾಲ ನೆಲೆಸಿದನು. 39 ಅಮ್ನೋನನ ಮರಣದ ವಿಷಯದಲ್ಲಿ ರಾಜನಾದ ದಾವೀದನು ಸಂತೈಸಿಕೊಂಡನು. ಆದರೆ ಅವನು ಅಬ್ಷಾಲೋಮನನ್ನು ಕಾಣಲು ಬಹಳವಾಗಿ ಹಾತೊರೆಯತೊಡಗಿದನು.
ದಾವೀದನ ಬಳಿಗೆ ಒಬ್ಬ ಬುದ್ಧಿವಂತಳಾದ ಸ್ತ್ರೀಯನ್ನು ಕಳುಹಿಸಿದ್ದು
14 ರಾಜನಾದ ದಾವೀದನಿಗೆ ಅಬ್ಷಾಲೋಮನ ಅಗಲಿಕೆಯಿಂದಾದ ಯಾತನೆಯು ಚೆರೂಯಳ ಮಗನಾದ ಯೋವಾಬನಿಗೆ ತಿಳಿಯಿತು. 2 ಆದ್ದರಿಂದ ಯೋವಾಬನು ಒಬ್ಬ ಬುದ್ಧಿವಂತ ಸ್ತ್ರೀಯನ್ನು ತೆಕೋವದಿಂದ ಕರೆತರಲು ಸಂದೇಶಕರನ್ನು ಅಲ್ಲಿಗೆ ಕಳುಹಿಸಿದನು. ಈ ಬುದ್ಧಿವಂತಳಾದ ಸ್ತ್ರೀಗೆ ಯೋವಾಬನು, “ದಯವಿಟ್ಟು ನಿನ್ನ ಚರ್ಮಕ್ಕಾಗಲಿ ತಲೆಕೂದಲಿಗಾಗಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಡ; ಚೆನ್ನಾಗಿರುವ ವಸ್ತ್ರಗಳನ್ನು ತೊಟ್ಟುಕೊಳ್ಳದೆ ಶೋಕಸೂಚಕ ವಸ್ತ್ರಗಳನ್ನು ಧರಿಸಿಕೋ. ಸತ್ತವನಿಗಾಗಿ ಅನೇಕ ದಿನಗಳಿಂದ ರೋಧಿಸುತ್ತಿರುವ ಸ್ತ್ರೀಯಂತೆ ನಟಿಸು. 3 ರಾಜನ ಬಳಿಗೆ ಹೋಗಿ, ನಾನು ಹೇಳಿಕೊಟ್ಟ ಮಾತುಗಳನ್ನು ಅವನಿಗೆ ಹೇಳು” ಎಂದು ಹೇಳಿದನು. ಯೋವಾಬನು ಬುದ್ಧಿವಂತಳಾದ ಆ ಸ್ತ್ರೀಗೆ ಮಾತಾಡಬೇಕಾದದ್ದನ್ನು ಹೇಳಿಕೊಟ್ಟನು.
4 ತೆಕೋವದ ಆ ಸ್ತ್ರೀಯು ರಾಜನ ಬಳಿಗೆ ಬಂದಾಗ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ರಾಜನೇ, ನನಗೆ ಸಹಾಯಮಾಡು” ಎಂದು ಹೇಳಿದಳು.
5 ರಾಜನಾದ ದಾವೀದನು ಅವಳಿಗೆ, “ನಿನ್ನ ಸಮಸ್ಯೆ ಏನು?” ಎಂದು ಕೇಳಿದನು.
ಆ ಸ್ತ್ರೀಯು, “ನಾನೊಬ್ಬ ವಿಧವೆ. ನನ್ನ ಗಂಡನು ತೀರಿಕೊಂಡಿದ್ದಾನೆ. 6 ನನಗೆ ಇಬ್ಬರು ಗಂಡುಮಕ್ಕಳಿದ್ದರು. ಈ ಇಬ್ಬರು ಗಂಡುಮಕ್ಕಳು ಜಗಳಮಾಡುತ್ತಾ ಹೊರಗೆ ಮೈದಾನದಲ್ಲಿದ್ದರು. ಅವರನ್ನು ತಡೆಯುವ ಬೇರೊಬ್ಬನು ಅಲ್ಲಿರಲಿಲ. ಒಬ್ಬ ಮಗನು ಮತ್ತೊಬ್ಬನನ್ನು ಕೊಂದನು. 7 ಈಗ ನಮ್ಮ ಕುಟುಂಬದವರೆಲ್ಲಾ ನನಗೆ ವಿರುದ್ಧವಾಗಿದ್ದಾರೆ. ಅವರು ನನಗೆ, ‘ತನ್ನ ಸೋದರನನ್ನೇ ಕೊಂದ ಮಗನನ್ನು ಕರೆದುಕೊಂಡು ಬಾ. ಅವನು ತನ್ನ ಸೋದರನನ್ನೇ ಕೊಂದುಹಾಕಿದ್ದರಿಂದ ಅವನನ್ನು ನಾವು ಕೊಂದುಹಾಕುತ್ತೇವೆ’ ಎಂದು ಹೇಳಿದರು. ನನ್ನ ಮಗನನ್ನು ಕೊಲ್ಲಲು ನಾನು ಅವರಿಗೆ ಬಿಟ್ಟುಕೊಟ್ಟರೆ, ತನ್ನ ತಂದೆಯ ಆಸ್ತಿಗೆ ವಾರಸುದಾರನಾದ ಮಗನನ್ನೇ ಕೊಂದುಹಾಕಿದಂತಾಗುತ್ತದೆ. ನನ್ನ ಮಗ ನನ್ನ ಬದುಕಿನ ಕೊನೆಯ ಆಶಾಕಿರಣ. ಆ ಕೊನೆಯ ಆಶಾಕಿರಣವು ಸುಟ್ಟು ನಾಶವಾಗಿಬಿಡುತ್ತದೆ. ನಂತರ ನನ್ನ ಸತ್ತ ಗಂಡನ ಆಸ್ತಿ ಬೇರೊಬ್ಬನಿಗೆ ಹೋಗುತ್ತದೆ ಮತ್ತು ಅವನ ಹೆಸರು ದೇಶದೊಳಗಿಂದ ತೆಗೆದುಹಾಕಲ್ಪಡುತ್ತದೆ” ಎಂದು ಹೇಳಿದಳು.
8 ಆಗ ರಾಜನು ಆ ಸ್ತ್ರೀಗೆ, “ಮನೆಗೆ ಹಿಂದಿರುಗು. ನಾನು ನಿನ್ನ ವಿಷಯದಲ್ಲಿ ಆಜ್ಞೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.
9 ತೆಕೋವದ ಆ ಸ್ತ್ರೀಯು ರಾಜನಿಗೆ, “ರಾಜನಾದ ನನ್ನ ಒಡೆಯನೇ, ದೋಷವೆಲ್ಲವೂ ನನ್ನ ಮೇಲೆಯೇ ಬರಲಿ. ನನ್ನ ಒಡೆಯನಾದ ರಾಜನೇ, ನೀನೂ ನಿನ್ನ ರಾಜ್ಯವೂ ನಿರ್ದೋಷಿಗಳಾಗಿದ್ದೀರಿ” ಎಂದು ಹೇಳಿದಳು.
10 ರಾಜನಾದ ದಾವೀದನು “ನಿನ್ನನ್ನು ದೋಷಿ ಎಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ನಿನಗೆ ಮತ್ತೆ ತೊಂದರೆ ಕೊಡದಂತೆ ನಾನು ನೋಡಿಕೊಳ್ಳುವೆ” ಎಂದು ಹೇಳಿದನು.
11 ಆ ಸ್ತ್ರೀಯು, “ಅವರು ನನಗೆ ತೊಂದರೆ ಕೊಡದಂತೆ ನೀನು ನೋಡಿಕೊಳ್ಳುವುದಾಗಿ ನಿನ್ನ ದೇವರಾದ ಯೆಹೋವನ ಮೇಲೆ ದಯವಿಟ್ಟು ಪ್ರಮಾಣ ಮಾಡು. ಆಗ ಕೊಲೆಗಾರರನ್ನು ದಂಡಿಸಲು ಇಚ್ಛಿಸುವ ಈ ಜನರು, ನನ್ನ ಮಗನನ್ನು ದಂಡಿಸುವುದಿಲ್ಲ” ಎಂದು ಹೇಳಿದಳು.
ದಾವೀದನು, “ಯೆಹೋವನಾಣೆ, ನಿನ್ನ ಮಗನನ್ನು ಯಾವ ವ್ಯಕ್ತಿಯೂ ತೊಂದರೆಗೊಳಿಸುವುದಿಲ್ಲ. ನಿನ್ನ ಮಗನ ತಲೆಯ ಮೇಲಿನ ಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ” ಎಂದನು.
12 ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಾನು ನಿನಗೆ ಕೆಲವು ಮಾತುಗಳನ್ನು ಹೇಳಲು ಬಿಡು” ಎಂದಳು.
“ಹೇಳು” ಎಂದು ರಾಜನು ಹೇಳಿದನು.
13 ಆಗ ಆ ಸ್ತ್ರೀಯು, “ದೇವರ ಜನರ ವಿರುದ್ಧವಾಗಿ ನೀನು ಈ ಕಾರ್ಯಗಳನ್ನು ಮಾಡಲು ಯೋಚಿಸಿರುವುದಾದರೂ ಏಕೆ? ಹೌದು, ನೀನು ಕೊಟ್ಟ ತೀರ್ಪಿನ ಮೂಲಕ ನೀನು ನನ್ನನ್ನು ತಪ್ಪಿತಸ್ಥನೆಂದು ತೋರಿಸಿ ಕೊಟ್ಟಿರುವೆ. ಏಕೆಂದರೆ ನೀನು ಬಲಾತ್ಕಾರದಿಂದ ಮನೆ ಬಿಡಿಸಿದ ಮಗನನ್ನು ಮನೆಗೆ ಕರೆದು ತಂದಿಲ್ಲ. 14 ನಾವೆಲ್ಲ ಎಂದಾದರೂ ಒಂದು ದಿನ ಸಾಯುತ್ತೇವೆ ಎನ್ನುವುದು ನಿಜ. ನಾವೆಲ್ಲ ನೆಲದ ಮೇಲೆ ಚೆಲ್ಲಿದ ನೀರಿನಂತಿದ್ದೇವೆ. ಈ ನೀರನ್ನು ನೆಲದಿಂದ ಮತ್ತೆ ಒಟ್ಟುಗೂಡಿಸುವುದು ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಆದರೆ ಜೀವವನ್ನು ತೆಗೆದುಬಿಡಲು ದೇವರು ಇಚ್ಛಿಸುವುದಿಲ್ಲ. ಬಲಾತ್ಕಾರವಾಗಿ ಹೊರಗೆ ನೂಕಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನದೇ ಆದ ಉಪಾಯವಿದೆ. 15 ರಾಜನಾದ ನನ್ನ ಒಡೆಯನೇ, ನಾನು ಈ ಮಾತುಗಳನ್ನು ನಿನಗೆ ಹೇಳುವುದಕ್ಕೆಂದೇ ಬಂದೆನು. ಏಕೆಂದರೆ ಜನರು ನನ್ನನ್ನು ಹೆದರಿಸಿದರು. ನಾನು ನನ್ನೊಳಗೆ ಹೀಗೆಂದುಕೊಂಡೆನು. ‘ನಾನು ರಾಜನೊಂದಿಗೆ ಮಾತಾಡುತ್ತೇನೆ. ಬಹುಶಃ ರಾಜನು ನನ್ನ ಮಾತುಗಳನ್ನು ಕೇಳಿ ಸಹಾಯ ಮಾಡಬಹುದು. 16 ರಾಜನು ನನ್ನನ್ನೂ ನನ್ನ ಮಗನನ್ನೂ ಕೊಲ್ಲಲು ಇಚ್ಛಿಸುವ ವ್ಯಕ್ತಿಯಿಂದ ನಮ್ಮಿಬ್ಬರನ್ನೂ ರಕ್ಷಿಸಬಹುದು; ದೇವರು ನಮಗೆ ಕೊಟ್ಟಿರುವ ಸ್ವಾಸ್ತ್ಯವನ್ನು ನಮ್ಮಿಂದ ಕಸಿದುಕೊಳ್ಳದಂತೆ ಕಾಪಾಡಬಹುದು.’ 17 ರಾಜನಾದ ನನ್ನ ಒಡೆಯನ ಮಾತುಗಳು ನನಗೆ ವಿಶ್ರಾಂತಿಯನ್ನು ಕೊಡುತ್ತವೆ ಎಂದು ನನಗೆ ತಿಳಿದಿರುವುದರಿಂದ ನಿನ್ನ ಬಳಿಗೆ ಬಂದಿರುವೆನು. ಏಕೆಂದರೆ ನೀನು ದೇವದೂತನಂತಿರುವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿನಗೆ ತಿಳಿದಿದೆ. ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿರುವನು” ಎಂದು ಹೇಳಿದಳು.
18 ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು.
ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.
19 ರಾಜನು, “ಈ ವಿಚಾರಗಳನ್ನೆಲ್ಲ ಹೇಳಲು ಯೋವಾಬನು ನಿನಗೆ ತಿಳಿಸಿದನಲ್ಲವೇ?” ಎಂದನು.
ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ನಿಮ್ಮ ಆಣೆಯಾಗಿಯೂ, ನೀವು ಹೇಳಿದ್ದು ಸರಿ! ನಿಮ್ಮ ಸೇವಕನಾದ ಯೋವಾಬನು ಈ ವಿಷಯಗಳನ್ನು ಹೇಳಲು ನನಗೆ ತಿಳಿಸಿದನು. 20 ಈ ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಯು ಬದಲಾಗಲೆಂಬುದಕ್ಕಾಗಿ ಯೋವಾಬನು ಹೀಗೆ ಮಾಡಿದನು. ನನ್ನ ಒಡೆಯನೇ, ನೀನು ದೇವದೂತನಂತೆ ಬುದ್ಧಿವಂತನಾಗಿರುವೆ. ಈ ಲೋಕದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೀನು ತಿಳಿದಿರುವೆ” ಎಂದಳು.
ಅಬ್ಷಾಲೋಮನು ಜೆರುಸಲೇಮಿಗೆ ಹಿಂದಿರುಗಿದ್ದು
21 ರಾಜನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ. ಈಗ ಯುವಕನಾದ ಅಬ್ಷಾಲೋಮನನ್ನು ಹಿಂದಕ್ಕೆ ಕರೆದುಕೊಂಡು ಬಾ” ಎಂದು ಹೇಳಿದನು.
22 ಯೋವಾಬನು ಅರಸನಾದ ದಾವೀದನಿಗೆ ಸಾಷ್ಟಾಂಗನಮಸ್ಕಾರಮಾಡಿ, “ನಾನು ಕೇಳಿಕೊಂಡದ್ದನ್ನು ನೀನು ನೆರವೇರಿಸಿದ್ದರಿಂದ, ನೀನು ನನ್ನ ವಿಷಯದಲ್ಲಿ ಸಂತೋಷದಿಂದಿರುವೆ ಎಂಬುದು ಇಂದು ನನಗೆ ಗೊತ್ತಾಯಿತು” ಎಂದನು.
23 ನಂತರ ಯೋವಾಬನು ಮೇಲೆದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಜೆರುಸಲೇಮಿಗೆ ಕರೆದುತಂದನು. 24 ಆದರೆ ರಾಜನಾದ ದಾವೀದನು, “ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿ ಹೋಗಲಿ. ಅವನು ನನ್ನನ್ನು ನೋಡಲು ಬರುವುದು ಬೇಡ” ಎಂದನು. ಆದ್ದರಿಂದ ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದನು. ಅಬ್ಷಾಲೋಮನು ರಾಜನನ್ನು ನೋಡಲು ಹೋಗಲಿಲ್ಲ.
15 ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. 2 ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು. 3 ಕ್ರಿಸ್ತನು ಸಹ ತನ್ನ ಜೀವಮಾನದಲ್ಲಿ ತನ್ನ ಹಿತಕ್ಕಾಗಿ ಪ್ರಯತ್ನಿಸಲಿಲ್ಲ. “ನಿನಗೆ ಅವಮಾನ ಮಾಡಿದ ಜನರು ನನಗೂ ಅವಮಾನ ಮಾಡಿದರು”(A) ಎಂಬುದಾಗಿ ಆತನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 4 ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. 5 ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. 6 ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ.
Kannada Holy Bible: Easy-to-Read Version. All rights reserved. © 1997 Bible League International