Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 135

135 ಯೆಹೋವನಿಗೆ ಸ್ತೋತ್ರವಾಗಲಿ!
    ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
    ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
    ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.

ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
    ಇಸ್ರೇಲ್, ಆತನಿಗೆ ಸೇರಿದ್ದು.
ಯೆಹೋವನು ಮಹೋನ್ನತನೆಂದೂ
    ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
    ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
    ಮಿಂಚನ್ನೂ ಮಳೆಯನ್ನೂ ಬರಮಾಡುವನು;
    ಗಾಳಿಯನ್ನು ಬೀಸಮಾಡುವನು.
ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
    ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
    ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
    ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.

13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
    ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
    ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
    ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
    ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
    ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
    ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.

19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
    ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
    ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
    ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!

ಯೆಹೋವನಿಗೆ ಸ್ತೋತ್ರವಾಗಲಿ!

ಯೆಹೆಜ್ಕೇಲ 14:1-11

ವಿಗ್ರಹಾರಾಧಕರ ವಿರುದ್ಧ ಎಚ್ಚರಿಕೆ

14 ಇಸ್ರೇಲರ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಲು ಕುಳಿತುಕೊಂಡರು. ಆಗ ಯೆಹೋವನ ವಾಕ್ಯವು ನನಗೆ ಬಂತು. ಆತನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಜನರು ತಮ್ಮ ವಿಗ್ರಹಗಳಿಗೆ ಪ್ರತಿಷ್ಠಿತರಾಗಿದ್ದಾರೆ ಮತ್ತು ಪಾಪಕ್ಕೆ ಬೀಳಲು ತಮಗೆ ತಾವೇ ಅವಕಾಶಮಾಡಿಕೊಡುತ್ತಾರೆ. ಸಹಾಯಕ್ಕಾಗಿ ನನ್ನನ್ನು ಕೇಳಿಕೊಳ್ಳಲು ಅವರಿಗೆ ಅವಕಾಶ ಕೊಡಬೇಕೇ? ಇಲ್ಲ. ಆದರೆ ನಾನು ಅವರಿಗೆ ಉತ್ತರಕೊಡುವೆನು. ಅವರಿಗೆ ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಇಸ್ರೇಲರಲ್ಲಿ ಯಾರಾದರೂ ಪ್ರವಾದಿಯ ಬಳಿಗೆ ಬಂದು ನನ್ನ ಸಲಹೆಯನ್ನು ಕೇಳಿದರೆ, ನಾನೇ ಆ ಮನುಷ್ಯನಿಗೆ ಉತ್ತರ ಕೊಡುವೆನು. ಅವನ ಬಳಿಯಲ್ಲಿ ಹೊಲಸು ವಿಗ್ರಹಗಳಿದ್ದರೂ, ಅವನನ್ನು ಪಾಪದಲ್ಲಿ ಬೀಳುವಂತೆ ಮಾಡಿದ ವಸ್ತುಗಳನ್ನು ಅವನು ಇಟ್ಟುಕೊಂಡಿದ್ದರೂ, ಅವನು ಆ ವಿಗ್ರಹಗಳನ್ನು ಇನ್ನೂ ಪೂಜೆ ಮಾಡುತ್ತಿದ್ದರೂ ನಾನು ಅವನೊಂದಿಗೆ ಮಾತನಾಡುವೆನು. ಅವನ ವಿಗ್ರಹಾರಾಧನೆಗೆ ತಕ್ಕ ಉತ್ತರವನ್ನೇ ಕೊಡುವೆನು. ಯಾಕೆಂದರೆ ನಾನು ಅವರ ಹೃದಯಗಳನ್ನು ಪರಿವರ್ತಿಸಬೇಕು. ಅವರು ನನ್ನನ್ನು ತೊರೆದು ಹೊಲಸು ವಿಗ್ರಹಗಳನ್ನು ಪೂಜಿಸಿದರೂ ನಾನು ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.’ ಇದೇ ನನ್ನ ಉದ್ದೇಶ

“ಆದ್ದರಿಂದ ಇಸ್ರೇಲ್ ಜನರಿಗೆ ಈ ವಿಷಯವನ್ನು ತಿಳಿಸು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಿಮ್ಮ ಹೊಲಸು ವಿಗ್ರಹಗಳನ್ನು ತೊರೆದುಬಿಟ್ಟು ನನ್ನ ಬಳಿಗೆ ಹಿಂತಿರುಗಿರಿ. ಆ ಭಯಂಕರ ಸುಳ್ಳು ದೇವರಿಂದ ತೊಲಗಿರಿ. ಯೆಹೋವನಾದ ನಾನೇ ಸ್ವತಃ ಪ್ರತಿಯೊಬ್ಬನಿಗೂ ಉತ್ತರಿಸುವೆನು ಅಂದರೆ ಅವನು ತನ್ನನ್ನು ಪಾಪಕ್ಕೆ ಬೀಳಿಸುವ ವಿಗ್ರಹಗಳನ್ನು ಹೊಂದಿದ್ದರೂ ಆ ವಿಗ್ರಹಗಳನ್ನು ಪೂಜಿಸುತ್ತಿದ್ದರೂ ಮತ್ತು ನನ್ನಿಂದ ತನ್ನನ್ನು ಬೇರ್ಪಡಿಸಿಕೊಳ್ಳುತ್ತಿದ್ದರೂ ನನ್ನ ಉಪದೇಶಕ್ಕಾಗಿ ನನ್ನ ಬಳಿಗೆ ಬಂದರೆ ಅವನು ಇಸ್ರೇಲನಾಗಿದ್ದರೂ ಇಸ್ರೇಲಿನಲ್ಲಿ ವಾಸವಾಗಿರುವ ಪರದೇಶಿಯಾಗಿದ್ದರೂ ನಾನು ಶಾಪವೆಂಬ ಉತ್ತರ ಕೊಡುವೆನು. ನಾನು ಅವನ ವಿರುದ್ಧವಾಗಿ ತಿರುಗಿ ಅವನನ್ನು ನಾಶಮಾಡುವೆನು. ಅವನು ಇಸ್ರೇಲರಿಗೆ ನಿದರ್ಶನವಾಗಿರಬೇಕು, ಜನರು ಅವನನ್ನು ನೋಡಿ ನಗಾಡುವರು. ನಾನು ಅವನನ್ನು ನನ್ನ ಜನರ ಮಧ್ಯದಿಂದ ತೆಗೆದು ಬಿಡುವೆನು. ಆಗ ನೀವು ನಾನೇ ಯೆಹೋವನೆಂದು ತಿಳಿಯುವಿರಿ. ಆದರೆ ಒಬ್ಬ ಪ್ರವಾದಿಯು ಅವನಿಗೆ ತನ್ನದೇ ಆದ ಉತ್ತರವನ್ನು ಕೊಡುವಷ್ಟು ಮೂರ್ಖನಾಗಿದ್ದರೆ, ಆಗ ನಾನು, ಅವನು ಎಂಥಾ ಮೂರ್ಖನಾಗಿದ್ದಾನೆಂದು ತೋರಿಸುವೆನು. ಅವನ ಮೇಲೆ ನನ್ನ ಸಾಮರ್ಥ್ಯವನ್ನು ಪ್ರಯೋಗಿಸುವೆನು. ಅವನನ್ನು ನಾಶಮಾಡಿ ನನ್ನ ಜನರ ಮಧ್ಯದಿಂದ ಅವನನ್ನು ತೆಗೆದುಬಿಡುವೆನು. 10 ಹೀಗೆ, ಸಲಹೆ ಕೇಳಲು ಬಂದ ಮನುಷ್ಯನೂ ಅವನಿಗೆ ಉತ್ತರಕೊಟ್ಟ ಪ್ರವಾದಿಯೂ ಒಂದೇ ಶಿಕ್ಷೆಯನ್ನು ಹೊಂದುವರು. 11 ಆಗ ಇಸ್ರೇಲಿನ ಜನರು ಇನ್ನೆಂದಿಗೂ ನನ್ನ ನಾಯಕತ್ವವನ್ನು ತೊರೆದು ಅಲೆದಾಡುವದಿಲ್ಲ. ಹೀಗೆ, ಅವರು ತಮ್ಮ ದಂಗೆಕೋರತನದ ಮಾರ್ಗಗಳಿಂದ ಇನ್ನೆಂದಿಗೂ ತಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುವುದಿಲ್ಲ. ಆಗ ಅವರು ನಿಜವಾಗಿಯೂ ನನ್ನ ಜನರಾಗಿರುವರು ಮತ್ತು ನಾನು ಅವರ ದೇವರಾಗಿರುವೆನು.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.

ಅಪೊಸ್ತಲರ ಕಾರ್ಯಗಳು 3:1-10

ಪೇತ್ರನಿಂದ ಗುಣಹೊಂದಿದ ಕುಂಟ

ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.

ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,

ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International