Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 147:1-11

147 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
    ನಮ್ಮ ದೇವರನ್ನು ಸಂಕೀರ್ತಿಸಿರಿ.
    ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
ಯೆಹೋವನು ಜೆರುಸಲೇಮನ್ನು ಕಟ್ಟಿದನು.
    ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
    ಅವರ ಗಾಯಗಳನ್ನು ಕಟ್ಟುವನು.
ಆತನು ನಕ್ಷತ್ರಗಳನ್ನು ಎಣಿಸುವನು.
    ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
    ಆತನ ಜ್ಞಾನವು ಅಪರಿಮಿತವಾಗಿದೆ.
ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
    ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
    ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
ದೇವರು ಪ್ರಾಣಿಗಳಿಗೂ
    ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
    ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.

ಕೀರ್ತನೆಗಳು 147:20

20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
    ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.

ಯೆಹೋವನಿಗೆ ಸ್ತೋತ್ರವಾಗಲಿ!

ಯೋಬನು 36:1-23

36 ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:

“ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು.
    ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ.
    ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ.
    ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.

“ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ.
    ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ.
    ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
ನೀತಿವಂತರನ್ನು ದೇವರು ಪರಿಪಾಲಿಸುವನು;
    ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು;
    ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು
    ಸಂಕಟಪಡುತ್ತಿದ್ದರೆ,
ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ
    ಅವರಿಗೆ ತಿಳಿಯಪಡಿಸುವನು.
10 ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು;
    ಪಾಪಮಾಡಕೂಡದೆಂದು ಆಜ್ಞಾಪಿಸುವನು.
11 ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ, ಆತನು ಅವರನ್ನು ಅಭಿವೃದ್ಧಿಪಡಿಸುವನು;
    ಆಗ ಅವರ ಜೀವನವು ಸುಖಕರವಾಗುವುದು.
12 ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು;
    ಮೂಢರಂತೆ ಸಾಯುವರು.

13 “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು.
    ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
14 ಅವರು ಯೌವನ ಪ್ರಾಯದಲ್ಲೇ
    ಪುರುಷಗಾಮಿಗಳಂತೆ ಸಾಯುವರು.
15 ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು.
    ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.

16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ
    ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು
    ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
17 ಯೋಬನೇ, ಈಗಲಾದರೋ ನೀನು ದೋಷಿಯೆಂದು ನಿರ್ಣಯಿಸಲ್ಪಟ್ಟಿರುವೆ; ದುಷ್ಟನಂತೆ ದಂಡಿಸಲ್ಪಟ್ಟಿರುವೆ.
18 ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ;
    ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.
19 ನಿನ್ನ ಎಲ್ಲಾ ಹಣವು ಈಗ ನಿನಗೆ ಸಹಾಯ ಮಾಡಲಾರದು;
    ನಿನ್ನಲ್ಲಿರುವ ಶಕ್ತಿಸಾಮರ್ಥವು ಸಹ ನಿನಗೆ ಸಹಾಯ ಮಾಡಲಾರದು.
20 ಜನಾಂಗಗಳು ಇದ್ದಕ್ಕಿದ್ದಂತೆ
    ಕಾಣೆಯಾಗುವ ರಾತ್ರಿಗಾಗಿ ಬಯಸಬೇಡ.
21 ಯೋಬನೇ, ನೀನು ಬಹಳ ಸಂಕಟಪಟ್ಟಿರುವೆ.
    ಆದ್ದರಿಂದ ಕೆಡುಕನ್ನು ಆರಿಸಿಕೊಳ್ಳಬೇಡ; ತಪ್ಪು ಮಾಡದಂತೆ ಎಚ್ಚರಿಕೆಯಾಗಿರು.

22 “ಇಗೋ, ದೇವರು ತನ್ನ ಶಕ್ತಿಯಿಂದ ಮಹಾಕಾರ್ಯವನ್ನು ಮಾಡುವನು!
    ಆತನು ಎಲ್ಲರಿಗೂ ಅತ್ಯಂತ ದೊಡ್ಡ ಉಪದೇಶಕನಾಗಿದ್ದಾನೆ.
23 ದೇವರಿಗೆ ಕೆಲಸವನ್ನು ನೇಮಿಸಲು ಯಾರಿಗೆ ಸಾಧ್ಯ?
    ಆತನಿಗೆ, ‘ನೀನು ತಪ್ಪನ್ನು ಮಾಡಿರುವೆ’ ಎಂದು ಹೇಳಲು ಯಾರಿಗೆ ಸಾಧ್ಯ?

1 ಕೊರಿಂಥದವರಿಗೆ 9:1-16

ಪೌಲನು ಉಪಯೋಗಿಸಿಲ್ಲದ ಹಕ್ಕುಗಳು

ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ. ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.

ಕೆಲವು ಜನರು ನಮ್ಮನ್ನು ವಿಚಾರಣೆ ಮಾಡಲು ಬಯಸುತ್ತಾರೆ. ನಾನು ಅವರಿಗೆ ಕೊಡುವ ಉತ್ತರ ಇಂತಿದೆ: ಊಟಮಾಡುವುದಕ್ಕೆ ಮತ್ತು ಪಾನೀಯಗಳನ್ನು ಕುಡಿಯುವುದಕ್ಕೆ ನಮಗೆ ಹಕ್ಕಿಲ್ಲವೇ? ಕ್ರಿಸ್ತ ವಿಶ್ವಾಸಿಯಾದ ಹೆಂಡತಿಯನ್ನು ನಮ್ಮೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಲು ಉಳಿದ ಅಪೊಸ್ತಲರಂತೆ, ಪ್ರಭುವಿನ ಸಹೋದರರಂತೆ ಮತ್ತು ಕೇಫನಂತೆ ನಮಗೆ ಹಕ್ಕಿಲ್ಲವೇ? ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ? ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.

ಇವುಗಳು ಕೇವಲ ಮಾನುಷ ಉದಾಹರಣೆಗಳಲ್ಲ. ದೇವರ ಧರ್ಮಶಾಸ್ತ್ರವೂ ಈ ಸಂಗತಿಗಳನ್ನು ತಿಳಿಸುತ್ತದೆ. “ಕಣ ತುಳಿಯುವ ಎತ್ತು ಧಾನ್ಯ ತಿನ್ನದಂತೆ ಅದರ ಬಾಯನ್ನು ಕಟ್ಟಬೇಡಿ”(A) ಎಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಹೀಗೆ ಹೇಳಿದಾಗ, ಕಣತುಳಿಯುವ ಎತ್ತಿನ ಬಗ್ಗೆ ಮಾತ್ರ ಆತನು ಆಲೋಚಿಸುತ್ತಿದ್ದನೇ? ಇಲ್ಲ! 10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. 11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ. 12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ. 13 ದೇವಾಲಯದಲ್ಲಿ ಸೇವೆಮಾಡುವ ಜನರು ದೇವಾಲಯದಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಯಜ್ಞವೇದಿಕೆಯ ಬಳಿ ಸೇವೆ ಮಾಡುವವರು ಯಜ್ಞವೇದಿಕೆಯ ಮೇಲೆ ಅರ್ಪಿತವಾದದ್ದರಲ್ಲಿ ಸ್ವಲ್ಪಭಾಗವನ್ನು ಪಡೆದುಕೊಳ್ಳುವರು. 14 ಸುವಾರ್ತೆಯನ್ನು ಬೋಧಿಸುವ ಜನರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸುವಾರ್ತೆಯನ್ನು ಬೋಧಿಸುವವರು ತಮಗೆ ಅಗತ್ಯವಾದುವುಗಳನ್ನು ಈ ಸೇವೆಯ ಮೂಲಕ ಪಡೆದುಕೊಳ್ಳಬೇಕೆಂದು ಪ್ರಭುವು ಆಜ್ಞಾಪಿಸಿದ್ದಾನೆ.

15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು. 16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International