Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
7 ಆಗ ಯೆಹೋವನು, “ನನ್ನ ಜನರು ಈಜಿಪ್ಟಿನಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದ್ದೇನೆ. ಅಧಿಕಾರಿಗಳು ಅವರನ್ನು ಹಿಂಸಿಸುವಾಗ ಅವರು ಇಟ್ಟ ಮೊರೆಯನ್ನು ಕೇಳಿದ್ದೇನೆ. ಅವರ ದುಃಖವನ್ನೆಲ್ಲಾ ಬಲ್ಲೆನು. 8 ಈಗ ನಾನು ಇಳಿದುಹೋಗಿ ಈಜಿಪ್ಟಿನವರಿಂದ ನನ್ನ ಜನರನ್ನು ರಕ್ಷಿಸುವೆನು. ನಾನು ಅವರನ್ನು ಆ ದೇಶದಿಂದ ಬಿಡುಗಡೆ ಮಾಡಿ ಒಳ್ಳೆಯದಾದ ಮತ್ತು ವಿಶಾಲವಾದ ದೇಶಕ್ಕೆ ಅವರನ್ನು ನಡೆಸುವೆನು. ಅದು ಸಮೃದ್ಧಿಕರವಾದ ದೇಶ.[a] ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ದೇಶ ಅದಾಗಿದೆ. 9 ನಾನು ಇಸ್ರೇಲರ ಮೊರೆಯನ್ನು ಕೇಳಿದ್ದೇನೆ. ಈಜಿಪ್ಟಿನವರು ಅವರಿಗೆ ಕೊಡುವ ಹಿಂಸೆಯನ್ನು ನೋಡಿದ್ದೇನೆ. 10 ಆದ್ದರಿಂದ ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತಿದ್ದೇನೆ. ಹೋಗು! ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಬಿಡುಗಡೆ ಮಾಡು!” ಎಂದು ಹೇಳಿದನು.
11 ಅದಕ್ಕೆ ಮೋಶೆಯು ಯೆಹೋವನಿಗೆ, “ನಾನು ಮಹಾ ವ್ಯಕ್ತಿಯೇನಲ್ಲ! ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕೂ ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬರುವುದಕ್ಕೂ ನಾನೆಷ್ಟರವನು?” ಎಂದು ಹೇಳಿದನು.
12 ಅದಕ್ಕೆ ದೇವರು “ನೀನು ಇದನ್ನು ಮಾಡಬಹುದು; ಯಾಕೆಂದರೆ ನಾನೇ ನಿನ್ನೊಂದಿಗೆ ಇರುವೆನು. ನಿನ್ನನ್ನು ಕಳುಹಿಸಿದವನು ನಾನೇ ಎಂಬುದಕ್ಕೆ ಇದೇ ಸಾಕ್ಷಿಯಾಗಿರುವುದು. ನೀನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಮೇಲೆ, ನೀವು ಈ ಬೆಟ್ಟದ ಬಳಿ ನನ್ನನ್ನು ಆರಾಧಿಸುವಿರಿ” ಎಂದು ಹೇಳಿದನು.
13 ಆಗ ಮೋಶೆಯು ದೇವರಿಗೆ, “ನಾನು ಇಸ್ರೇಲರ ಬಳಿಗೆ ಹೋಗಿ ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದರೆ, ಅವರು ‘ಆತನ ಹೆಸರೇನು?’ ಎಂದು ಕೇಳುವರು. ಆಗ ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು.
14 ಆಗ ದೇವರು ಮೋಶೆಗೆ, “ನಾನು ‘ಇರುವಾತನೇ’ ಆಗಿದ್ದೇನೆ. ನೀನು ಇಸ್ರೇಲರ ಬಳಿಗೆ ಹೋದಾಗ ‘ಇರುವಾತನೇ’ ಎಂಬವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳು” ಅಂದನು. 15 ಇದಲ್ಲದೆ ದೇವರು ಮೋಶೆಗೆ, “ನೀನು ಇಸ್ರೇಲರಿಗೆ, ‘ನಿಮ್ಮ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವನು ನಿಮ್ಮಲ್ಲಿಗೆ ನನ್ನನ್ನು ಕಳುಹಿಸಿದ್ದಾನೆ. ಇದೇ ನನ್ನ ಶಾಶ್ವತವಾದ ಹೆಸರು; ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ಹೆಸರು ಇದೇ ಎಂದು ಹೇಳಬೇಕು’” ಅಂದನು.
39 ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.
ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40 ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41 ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.
ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.
42 ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43 ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44 ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.
45 “ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47 ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.
ತನ್ನ ಮತ್ತು ಅಬ್ರಹಾಮನ ಬಗ್ಗೆ ಯೇಸುವಿನ ಹೇಳಿಕೆ
48 ಯೆಹೂದ್ಯರು, “ನಾವು ನಿನ್ನನ್ನು ಸಮಾರ್ಯದವನೆಂದು ಹೇಳುತ್ತೇವೆ! ನಿನ್ನೊಳಗೆ ದೆವ್ವವು ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದು ಉತ್ತರಕೊಟ್ಟರು.
49 ಯೇಸು, “ನನ್ನೊಳಗೆ ದೆವ್ವವಿಲ್ಲ. ನನ್ನ ತಂದೆಗೆ ನಾನು ಗೌರವ ಕೊಡುತ್ತೇನೆ, ಆದರೆ ನೀವು ನನಗೆ ಗೌರವ ಕೊಡುವುದಿಲ್ಲ. 50 ನನಗಾಗಿ ಗೌರವವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತಿಲ್ಲ. ನನಗೆ ಗೌರವ ದೊರೆಯಬೇಕೆಂದು ಬಯಸುವ ಒಬ್ಬಾತನಿದ್ದಾನೆ. ಆತನೇ ನ್ಯಾಯಾಧಿಪತಿ. 51 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ವಾಕ್ಯಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ” ಎಂದು ಉತ್ತರಕೊಟ್ಟನು.
52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. 53 ನಮ್ಮತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೆಂದು ಭಾವಿಸಿಕೊಂಡಿರುವೆಯಾ? ಅಬ್ರಹಾಮನು ಸತ್ತುಹೋದನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಹೀಗಿರಲು, ನೀನು ನಿನ್ನನ್ನು ಯಾರೆಂದು ಭಾವಿಸಿಕೊಂಡಿರುವೆ?” ಎಂದು ಕೇಳಿದರು.
54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ, ಆ ಮಹಿಮೆಗೆ ಯಾವ ಬೆಲೆಯೂ ಇಲ್ಲ. ನನ್ನ ತಂದೆಯೇ ನನ್ನನ್ನು ಮಹಿಮೆಪಡಿಸುವನು. ನೀವು ಆತನನ್ನೇ ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಿ. 55 ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56 ನಾನು ಬರುವ ದಿನವನ್ನು ತಾನು ನೋಡುವುದಾಗಿ ನಿಮ್ಮ ತಂದೆಯಾದ ಅಬ್ರಹಾಮನು ಬಹು ಸಂತೋಷಪಟ್ಟನು. ಅವನು ಆ ದಿನವನ್ನು ಕಂಡು ಬಹು ಸಂತೋಷಗೊಂಡನು” ಎಂದು ಉತ್ತರಕೊಟ್ಟನು.
57 ಯೆಹೂದ್ಯರು ಯೇಸುವಿಗೆ, “ಏನು? ನೀನು ಅಬ್ರಹಾಮನನ್ನು ನೋಡಿರುವಿಯೋ? ನಿನಗೆ ಐವತ್ತು ವರ್ಷವೂ ಆಗಿಲ್ಲ!” ಎಂದು ಹೇಳಿದರು.
58 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು. 59 ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International