Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
22 ಆದ್ದರಿಂದ ಫರೋಹನು ತನ್ನ ಜನರಿಗೆಲ್ಲಾ, “ಇಬ್ರಿಯರಿಗೆ ಹುಟ್ಟುವ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದುಬಿಡಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳು ಬದುಕಲಿ” ಎಂದು ಆಜ್ಞಾಪಿಸಿದನು.
ಮೋಶೆಯ ಬಾಲ್ಯ
2 ಲೇವಿ ಕುಟುಂಬದ ಒಬ್ಬನು ಲೇವಿ ಕುಟುಂಬಕ್ಕೆ ಸೇರಿದ ಸ್ತ್ರೀಯೊಬ್ಬಳನ್ನು ಮದುವೆಯಾದನು. 2 ಆ ಸ್ತ್ರೀಯು ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮವಿತ್ತಳು. ಮಗುವು ಸುಂದರವಾಗಿತ್ತು. ಆಕೆ ಮೂರು ತಿಂಗಳವರೆಗೆ ಆ ಮಗುವನ್ನು ಬಚ್ಚಿಟ್ಟಳು. 3 ಇನ್ನೂ ಹೆಚ್ಚು ಕಾಲ ಬಚ್ಚಿಡಲಾಗದೆ ಆಕೆ ಒಂದು ಬುಟ್ಟಿಯನ್ನು ಮಾಡಿ ಅದಕ್ಕೆ ರಾಳವನ್ನು ಹಚ್ಚಿದಳು. ಆಕೆ ಮಗುವನ್ನು ಬುಟ್ಟಿಯಲ್ಲಿಟ್ಟು ಆ ಬುಟ್ಟಿಯನ್ನು ನೀರಿನಲ್ಲಿ ಎತ್ತರವಾಗಿ ಬೆಳೆದ ಹುಲ್ಲಿನಲ್ಲಿ ಇಟ್ಟಳು. 4 ಮಗುವಿಗೆ ಏನಾಗುವುದೋ ಎಂದು ನೋಡಲು ಮಗುವಿನ ಅಕ್ಕ ಅಲ್ಲಿದ್ದುಕೊಂಡು ಕಾಯುತ್ತಿದ್ದಳು.
5 ಅದೇ ಸಮಯದಲ್ಲಿ ಫರೋಹನ ಮಗಳು ಸ್ನಾನ ಮಾಡುವುದಕ್ಕೆ ನದಿಗೆ ಹೋದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಎತ್ತರವಾದ ಹುಲ್ಲಿನ ಮೇಲಿದ್ದ ಬುಟ್ಟಿಯನ್ನು ನೋಡಿ ತನ್ನ ಸೇವಕಿಯರಲ್ಲಿ ಒಬ್ಬಳಿಗೆ, “ಹೋಗಿ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು. 6 ರಾಜನ ಮಗಳು ಬುಟ್ಟಿಯನ್ನು ತೆಗೆದು ನೋಡಿದಾಗ ಅಳುತ್ತಿದ್ದ ಗಂಡುಮಗುವನ್ನು ಕಂಡಳು. ಆಕೆಗೆ ಅದರ ಮೇಲೆ ಮರುಕವಾಯಿತು. ಆಕೆ, “ಇದು ಇಬ್ರಿಯರ ಮಗು” ಎಂದು ಹೇಳಿದಳು.
7 ಮಗುವಿನ ಅಕ್ಕ ಆಕೆಯ ಬಳಿಗೆ ಬಂದು, “ಮಗುವಿಗೆ ಹಾಲು ಕುಡಿಸಲು ಒಬ್ಬ ಇಬ್ರಿಯ ಸ್ತ್ರೀಯನ್ನು ಕರೆದುಕೊಂಡು ಬರಲೇ?” ಎಂದು ಕೇಳಿದಳು.
8 ಅರಸನ ಮಗಳು, “ಹೋಗಿ, ಕರೆದುಕೊಂಡು ಬಾ” ಅಂದಳು.
ಆದ್ದರಿಂದ ಆ ಹುಡುಗಿ ಹೋಗಿ ಮಗುವಿನ ಸ್ವಂತ ತಾಯಿಯನ್ನು ಕರೆದುಕೊಂಡು ಬಂದಳು.
9 ರಾಜನ ಮಗಳು ತಾಯಿಗೆ, “ಈ ಮಗುವಿಗೆ ಹಾಲು ಕುಡಿಸಿ ನೋಡಿಕೊ, ನಾನು ನಿನಗೆ ಸಂಬಳ ಕೊಡುವೆನು” ಎಂದು ಹೇಳಿದಳು.
ಆದ್ದರಿಂದ ಆ ಸ್ತ್ರೀ ತನ್ನ ಮಗುವನ್ನು ತೆಗೆದುಕೊಂಡು ಸಾಕಿದಳು. 10 ಮಗುವು ಬೆಳೆಯಿತು. ಸ್ವಲ್ಪಕಾಲದ ನಂತರ ಆ ಸ್ತ್ರೀಯು ಬಾಲಕನನ್ನು ರಾಜನ ಮಗಳ ಬಳಿಗೆ ಕರೆದುಕೊಂಡು ಬಂದಳು. ರಾಜನ ಮಗಳು ಆ ಬಾಲಕನನ್ನು ತನ್ನ ಸ್ವಂತ ಮಗನೆಂದು ಸ್ವೀಕರಿಸಿದಳು. ಆ ಬಾಲಕನನ್ನು ನೀರಿನೊಳಗಿಂದ ಎಳೆದೆನೆಂದು ಆ ಬಾಲಕನಿಗೆ “ಮೋಶೆ” ಎಂದು ಹೆಸರಿಟ್ಟಳು.
23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.
24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.
Kannada Holy Bible: Easy-to-Read Version. All rights reserved. © 1997 Bible League International