Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
110 ಯೆಹೋವನು ನನ್ನ ಒಡೆಯನಿಗೆ,
“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.
2 ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.
4 ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
ಎಂದು ವಾಗ್ದಾನ ಮಾಡಿದ್ದಾನೆ.
ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.
5 ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
6 ಆತನು ಜನಾಂಗಗಳಿಗೆ ತೀರ್ಪು ಮಾಡುವನು.
ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.
7 ರಾಜನು ಮಾರ್ಗದಲ್ಲಿ
ತೊರೆಯ ನೀರನ್ನು ಕುಡಿದು ಬಲ ಹೊಂದುವನು.
22 ಬಹು ಧನಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ. ಬೆಳ್ಳಿಬಂಗಾರಗಳಿಗಿಂತಲೂ ಸನ್ಮಾನಿತರಾಗಿರುವುದೇ ಅಮೂಲ್ಯ.
2 ಐಶ್ವರ್ಯವಂತರಿಗೂ ಬಡವರಿಗೂ ಯಾವ ವ್ಯತ್ಯಾಸವಿಲ್ಲ. ಯಾಕೆಂದರೆ ಎಲ್ಲರನ್ನು ನಿರ್ಮಿಸಿದಾತನು ಯೆಹೋವನೇ.
3 ಜ್ಞಾನಿಗಳು ಕೇಡನ್ನು ಕಂಡು ದೂರವಾಗುತ್ತಾರೆ. ಮೂಢರಾದರೋ ನೇರವಾಗಿ ಹೋಗಿ ಆಪತ್ತಿಗೀಡಾಗುವರು.
4 ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದು ದೀನತೆಯಿಂದಿರು; ಆಗ ನೀನು ಐಶ್ವರ್ಯ, ಸನ್ಮಾನ ಮತ್ತು ನಿಜಜೀವವನ್ನು ಹೊಂದಿಕೊಳ್ಳುವೆ.
5 ವಕ್ರಬುದ್ಧಿಯುಳ್ಳವರು ಅನೇಕ ಆಪತ್ತುಗಳಿಗೆ ಸಿಕ್ಕಿಕ್ಕೊಂಡಿದ್ದಾರೆ. ಆದರೆ ತನ್ನ ಆತ್ಮದ ಬಗ್ಗೆ ಚಿಂತಿಸುವವನು ಆ ಆಪತ್ತುಗಳಿಂದ ದೂರವಿರುವನು.
6 ಮಗನಿಗೆ ಬಾಲ್ಯದಲ್ಲಿಯೇ ಒಳ್ಳೆಯ ಮಾರ್ಗವನ್ನು ಉಪದೇಶಿಸು. ಅವನು ಬೆಳೆದು ದೊಡ್ಡವನಾದಾಗ ಅದೇ ರೀತಿಯಲ್ಲಿ ಜೀವಿಸುವನು.
7 ಬಡವನು ಐಶ್ವರ್ಯವಂತನಿಗೆ ಗುಲಾಮನಾಗಿದ್ದಾನೆ. ಸಾಲ ತೆಗೆದುಕೊಳ್ಳುವವನು ಸಾಲಕೊಡುವವನಿಗೆ ಸೇವಕನಾಗಿದ್ದಾನೆ.
8 ಕೇಡನ್ನು ಬಿತ್ತುವವನು ಕೇಡನ್ನು ಕೊಯ್ಯುವನು. ಅವನ ದುಷ್ಟಶಕ್ತಿಯು ನಾಶವಾಗುವುದು.
9 ಉದಾರಿಯು ತನ್ನ ಆಹಾರವನ್ನು ಬಡವರೊಂದಿಗೆ ಹಂಚಿಕೊಳ್ಳುವುದರಿಂದ ಆಶೀರ್ವಾದ ಹೊಂದುವನು.
ನಿಮ್ಮ ವೈರಿಗಳನ್ನು ಪ್ರೀತಿಸಿರಿ
(ಮತ್ತಾಯ 5:38-48; 7:12)
27 “ನನ್ನ ಮಾತುಗಳನ್ನು ಆಲಿಸುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ: ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ಹೀನೈಸುವ ಜನರಿಗೋಸ್ಕರ ಪ್ರಾರ್ಥಿಸಿರಿ. 29 ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ. 30 ನಿಮ್ಮನ್ನು ಬೇಡುವ ಪ್ರತಿಯೊಬ್ಬನಿಗೆ ಕೊಡಿ. ಒಬ್ಬನು ನಿಮ್ಮಿಂದ ಏನಾದರೂ ತೆಗೆದುಕೊಂಡಾಗ ಅದನ್ನು ಹಿಂದಕ್ಕೆ ಕೊಡೆಂದು ಕೇಳಬೇಡಿ. 31 ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆಸೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.
Kannada Holy Bible: Easy-to-Read Version. All rights reserved. © 1997 Bible League International