Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 104

104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
    ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
    ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
    ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
ಗಾಳಿಯನ್ನು ನಿನ್ನ ದೂತರನ್ನಾಗಿಯೂ
    ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
    ಅದೆಂದಿಗೂ ನಾಶವಾಗದು.
ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
    ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
    ನೀನು ಬರ್ಜಿಸಲು ನೀರು ಓಡಿಹೋಯಿತು.
ಜಲರಾಶಿಗಳು ಬೆಟ್ಟಗಳಿಂದ ಇಳಿದು
    ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
    ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.

10 ನೀನು ನೀರನ್ನು ಬುಗ್ಗೆಗಳಿಂದ ತೊರೆಗಳಿಗೆ ಹರಿಯಮಾಡುವೆ.
    ಬೆಟ್ಟದ ತೊರೆಗಳ ಮೂಲಕ ನೀರು ಹರಿದುಹೋಗುವುದು.
11 ತೊರೆಗಳು ಎಲ್ಲಾ ಕಾಡುಪ್ರಾಣಿಗಳಿಗೆ ನೀರನ್ನು ಕೊಡುತ್ತವೆ.
    ಕಾಡುಕತ್ತೆಗಳು ಸಹ ನೀರಿಗಾಗಿ ಅಲ್ಲಿಗೆ ಬರುತ್ತವೆ.
12 ಕಾಡುಪಕ್ಷಿಗಳು ಬಂದು ನೀರಿನ ಹಳ್ಳಗಳ ಬಳಿಯಲ್ಲಿ ವಾಸಿಸುತ್ತವೆ.
    ಸಮೀಪದ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13 ಆತನು ಬೆಟ್ಟಗಳ ಮೇಲೆ ಮಳೆಯನ್ನು ಸುರಿಸುವನು.
    ಆತನ ಸೃಷ್ಟಿಗಳು ಭೂಮಿಗೆ ಅಗತ್ಯವಾದ ಪ್ರತಿಯೊಂದನ್ನೂ ಒದಗಿಸುತ್ತವೆ.
14 ನೀನು ಪಶುಗಳಿಗೋಸ್ಕರ ಹುಲ್ಲನ್ನು ಬೆಳೆಯ ಮಾಡುವೆ.
ನಾವು ದುಡಿದು ಬೆಳೆಸುವುದಕ್ಕಾಗಿ ಸಸಿಗಳನ್ನು ಕೊಟ್ಟಿರುವೆ.
ಅವು ಬೆಳೆದು ನಮಗೆ ಆಹಾರವನ್ನು ಒದಗಿಸುತ್ತವೆ.
15 ನಮ್ಮನ್ನು ಸಂತೋಷಪಡಿಸುವ ದ್ರಾಕ್ಷಾರಸವನ್ನೂ
    ನಮ್ಮ ಚರ್ಮವನ್ನು ಮೃದುಗೊಳಿಸುವ[b] ಎಣ್ಣೆಯನ್ನೂ
    ನಮ್ಮನ್ನು ಬಲಗೊಳಿಸುವ ಆಹಾರವನ್ನೂ ನಮಗೆ ದೇವರು ಕೊಡುತ್ತಾನೆ.

16 ಲೆಬನೋನಿನ ದೇವದಾರು ವೃಕ್ಷಗಳು ಯೆಹೋವನವೇ,
    ಅವುಗಳನ್ನು ನೆಟ್ಟಾತನು ಯೆಹೋವನೇ.
    ಆತನೇ ಅವುಗಳಿಗೆ ಬೇಕಾದ ನೀರನ್ನು ಒದಗಿಸುವನು.
17 ಪಕ್ಷಿಗಳು ಗೂಡುಗಳನ್ನು ಆ ಮರಗಳಲ್ಲಿ ಕಟ್ಟಿಕೊಳ್ಳುತ್ತವೆ.
    ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.
18 ಎತ್ತರವಾದ ಬೆಟ್ಟಗಳು ಕಾಡುಕುರಿಗಳಿಗೆ ವಾಸಸ್ಥಳವಾಗಿವೆ.
    ದೊಡ್ಡ ಬಂಡೆಗಳು ಬೆಟ್ಟದ ಮೊಲಗಳಿಗೆ ಆಶ್ರಯಸ್ಥಾನಗಳಾಗಿವೆ.

19 ವಿಶೇಷಕಾಲಗಳ ಸೂಚನೆಗಾಗಿ ನೀನು ನಮಗೆ ಚಂದ್ರನನ್ನು ಕೊಟ್ಟಿರುವೆ.
    ಸೂರ್ಯನಿಗೆ ತಾನು ಮುಳುಗತಕ್ಕ ಸಮಯವು ಯಾವಾಗಲೂ ತಿಳಿದಿದೆ.
20 ನೀನು ಕತ್ತಲೆಯನ್ನು ರಾತ್ರಿಯನ್ನಾಗಿ ಮಾಡಿದೆ.
    ಕಾಡುಪ್ರಾಣಿಗಳು ರಾತ್ರಿಯಲ್ಲಿ ಹೊರಬಂದು ಸುತ್ತಮುತ್ತ ಓಡಾಡುತ್ತವೆ.
21 ಸಿಂಹಗಳು ಬೇಟೆಯಾಡುವಾಗ ಆಹಾರಕ್ಕಾಗಿ
    ದೇವರನ್ನು ಕೇಳಿಕೊಳ್ಳುತ್ತಿವೆಯೊ ಎಂಬಂತೆ ಬರ್ಜಿಸುತ್ತವೆ.
22 ಸೂರ್ಯನು ಮೇಲೇರುವಾಗ,
    ಪ್ರಾಣಿಗಳು ತಮ್ಮ ಗುಹೆಗಳಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತವೆ.
23 ಬಳಿಕ ಜನರು ಕೆಲಸಕಾರ್ಯಗಳಿಗಾಗಿ ಹೊರಟು
    ಸಾಯಂಕಾಲದವರೆಗೂ ದುಡಿಯುವರು.

24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
    ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
    ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
    ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
    ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
    ಹಡಗು ಸಮುದ್ರದ ಮೇಲೆ ಸಂಚರಿಸುವುದು.

27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
    ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
    ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
    ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
    ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
    ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.

31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
    ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
    ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
    ಅವು ಜ್ವಾಲಾಮುಖಿಗಳಾಗುತ್ತವೆ.

33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
    ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
    ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
    ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!

ಯೆಹೋವನನ್ನು ಕೊಂಡಾಡು!

ಧರ್ಮೋಪದೇಶಕಾಂಡ 32:1-14

32 “ಆಕಾಶವೇ, ನಾನು ಹೇಳುವುದನ್ನು ಕೇಳು.
    ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಆಲಿಸು.
ನನ್ನ ಬೋಧನೆಯು ಮಳೆಯಂತೆ ಬರುವುದು.
    ನೆಲದ ಮೇಲೆ ಬೀಳುವ ಇಬ್ಬನಿಯಂತಿರುವುದು;
ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳೆಯಂತಿರುವುದು;
    ಹಸಿರು ಸಸಿಗಳ ಮೇಲೆ ಬೀಳುವ ಮಳೆಯ ಹನಿಯಂತಿರುವುದು.
ಯೆಹೋವನ ಹೆಸರಿನಲ್ಲಿ
    ಮಾತಾಡುವಂತೆ ಮಾಡಿದ ದೇವರಿಗೆ ಸ್ತೋತ್ರ!

“ಯೆಹೋವನ ಕಾರ್ಯವು ನಿಷ್ಕಳಂಕವಾದದ್ದು.
    ಯಾಕೆಂದರೆ ಆತನ ಮಾರ್ಗವೆಲ್ಲವೂ ಸರಿಯಾದದ್ದೇ.
ದೇವರು ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ.
    ಆತನು ಒಳ್ಳೆಯವನೂ ಪ್ರಾಮಾಣಿಕನೂ ಆಗಿದ್ದಾನೆ.
ನೀವು ದ್ರೋಹಿಗಳೇ, ನೀವು ಆತನ ಮಕ್ಕಳಲ್ಲ.
    ನಿಮ್ಮ ಪಾಪಗಳು ಆತನನ್ನು ಮಲಿನ ಮಾಡುವವು.
    ನೀವು ಡೊಂಕಾದ ಸುಳ್ಳುಗಾರರು.
ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ?
    ಇಲ್ಲ! ನೀವು ಬುದ್ಧಿಹೀನರಾಗಿದ್ದೀರಿ.
ಯೆಹೋವನು ನಿಮ್ಮ ತಂದೆಯಾಗಿದ್ದಾನೆ. ಆತನೇ ನಿಮ್ಮನ್ನು ನಿರ್ಮಿಸಿದಾತನು.
    ಆತನೇ ನಿಮ್ಮನ್ನು ಉಂಟುಮಾಡಿದಾತನು. ಆತನೇ ಆಧಾರ ನೀಡುವಾತನು.

“ಹಿಂದೆ ಏನಾಯಿತೆಂದು ಜ್ಞಾಪಕಕ್ಕೆ ತಂದುಕೊಳ್ಳಿರಿ.
    ಬಹಳ ವರ್ಷಗಳ ಹಿಂದೆ ನಡೆದದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ.
ನಿಮ್ಮ ತಂದೆಗಳನ್ನು ಕೇಳಿ, ಅವರು ಹೇಳುವರು.
    ನಿಮ್ಮ ಹಿರಿಯರನ್ನು ವಿಚಾರಿಸಿ, ಅವರು ಹೇಳುವರು.
ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ಪ್ರತ್ಯೇಕಿಸಿದನು.
    ಪ್ರತಿಯೊಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟನು.
ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟನು.
    ಇಸ್ರೇಲರಲ್ಲಿ ಎಷ್ಟು ಜನರು ಇದ್ದಾರೋ ಅಷ್ಟು ಜನಾಂಗಗಳಿವೆ.
ಯೆಹೋವನ ಪಾಲು ಆತನ ಜನರೇ.
    ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.

10 “ಮರುಭೂಮಿಯಲ್ಲಿ ಯೆಹೋವನು ಇಸ್ರೇಲನನ್ನು ಕಂಡನು.
    ಅದು ಬರಿದಾದ ಗಾಳಿ ಬೀಸುತ್ತಿದ್ದ ಸ್ಥಳವಾಗಿತ್ತು.
ಯೆಹೋವನು ಅದನ್ನು ಸುತ್ತುವರಿದು ಇಸ್ರೇಲನ್ನು ಸಂರಕ್ಷಿಸಿದನು;
    ತನ್ನ ಕಣ್ಣುಗುಡ್ಡೆಯಂತೆ ಅವರನ್ನು ಕಾಪಾಡಿದನು.
11 ಇಸ್ರೇಲರಿಗೆ ಯೆಹೋವನು ಹದ್ದಿನಂತಿರುವನು!
    ಹದ್ದು ತನ್ನ ಮರಿಗಳಿಗೆ ಹಾರಲು ಕಲಿಸಲು ಗೂಡಿನಿಂದ ಕೆಳಕ್ಕೆ ತಳ್ಳುವುದು.
ಮರಿಗಳು ಕೆಳಗೆ ಬೀಳದಂತೆ ಅವುಗಳ ಜೊತೆಯಲ್ಲಿ ಹಾರಾಡುವುದು.
    ಅವುಗಳು ಬೀಳುವಾಗ ತನ್ನ ರಕ್ಕೆಯನ್ನು ಚಾಚಿ ಬೀಳದಂತೆ ಮಾಡುವದು.
ನಂತರ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದು.
    ಯೆಹೋವನು ಅದರಂತೆಯೇ.
12 ಯೆಹೋವನೇ ಇಸ್ರೇಲನ್ನು ನಡೆಸಿದನು.
    ಅನ್ಯದೇವರು ಸಹಾಯ ಮಾಡಲಿಲ್ಲ.
13 ಬೆಟ್ಟಗುಡ್ಡಗಳ ಪ್ರಾಂತ್ಯವನ್ನು ವಶಪಡಿಸಲು ಇಸ್ರೇಲನ್ನು ನಡೆಸಿದನು.
    ಹೊಲದ ಬೆಳೆಯನ್ನು ಇಸ್ರೇಲ್ ಕೊಯಿಲು ಮಾಡಿದನು.
ಬಂಡೆಯಿಂದ ಜೇನನ್ನು ಯೆಹೋವನು ಇಸ್ರೇಲಿಗೆ ಕೊಟ್ಟನು.
    ಗಟ್ಟಿಯಾದ ಬಂಡೆಯಿಂದ ಎಣ್ಣೆಯು ಹೊರಡುವಂತೆ ಮಾಡಿದನು.
14 ಯೆಹೋವನು ಇಸ್ರೇಲಿಗೆ ಹಿಂಡಿನಿಂದ ಬೆಣ್ಣೆಯನ್ನೂ ಹಾಲನ್ನೂ ಕೊಟ್ಟನು.
    ಆತನು ಕೊಬ್ಬಿದ ಕುರಿಮರಿಗಳನ್ನೂ ಆಡುಗಳನ್ನೂ
ಬಾಷಾನಿನ ಅತ್ಯುತ್ತಮವಾದ ಟಗರುಗಳನ್ನೂ ಕೊಟ್ಟನು.
ಜೊತೆಗೆ ಉತ್ತಮವಾದ ಗೋಧಿಯನ್ನೂ ಕೊಟ್ಟನು.
    ಇಸ್ರೇಲಿನ ಜನರು ಕೆಂಪು ದ್ರಾಕ್ಷಿಯಿಂದ ಮಾಡಿದ ಉತ್ತಮ ದ್ರಾಕ್ಷಾರಸವನ್ನು ಕುಡಿದರು.

ಇಬ್ರಿಯರಿಗೆ 10:32-39

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(A)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International