Revised Common Lectionary (Semicontinuous)
ರಕ್ಷಣೆಯ ದಿನ
8 ಯೆಹೋವನು ಹೇಳುವುದೇನೆಂದರೆ,
“ನನ್ನ ದಯೆಯನ್ನು ತೋರಿಸಲು ಒಂದು ವಿಶೇಷ ಸಮಯವಿದೆ.
ಆಗ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುವೆನು.
ನಿನ್ನನ್ನು ರಕ್ಷಿಸಲು ಒಂದು ವಿಶೇಷ ಸಮಯವಿದೆ.
ಆಗ ನಾನು ನಿನಗೆ ಸಹಾಯ ಮಾಡುವೆನು,
ನಿನ್ನನ್ನು ಕಾಪಾಡುವೆನು.
ಜನರೊಂದಿಗೆ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ನೀನೇ ಸಾಕ್ಷಿಯಾಗಿರುವೆ.
ದೇಶವು ಈಗ ನಾಶವಾಗಿದೆ,
ಆದರೆ ಈ ಭೂಮಿಯು ಯಾರದಾಗಿತ್ತೋ ಅವರಿಗೆ ನೀನದನ್ನು ಹಿಂದಕ್ಕೆ ಕೊಡುವೆ.
9 ಸೆರೆಮನೆಯಲ್ಲಿರುವವರಿಗೆ ನೀವು,
‘ಸೆರೆಮನೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಅಂಧಕಾರದಲ್ಲಿರುವವರಿಗೆ,
‘ಕತ್ತಲೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಪ್ರಯಾಣದಲ್ಲಿರುವವರು ತಿನ್ನುತ್ತಾ ಹೋಗುವರು.
ಬೋಳುಬೆಟ್ಟಗಳಲ್ಲೂ ನಿಮಗೆ ಆಹಾರ ದೊರೆಯುವದು.
10 ಜನರಿಗೆ ಹಸಿವೆಯಾಗದು, ಬಾಯಾರಿಕೆಯಾಗದು.
ಸೂರ್ಯನ ಉರಿ ಬಿಸಿಲಾಗಲಿ ಗಾಳಿಯಾಗಲಿ ಅವರಿಗೆ ಹಾನಿಮಾಡದು.
ಯಾಕೆಂದರೆ ದೇವರು ತಾನೇ ಅವರನ್ನು ಸಂತೈಸುವನು,
ಅವರನ್ನು ಬುಗ್ಗೆಗಳ ಬಳಿಗೆ ನಡಿಸುವನು.
11 ನಾನು ನನ್ನ ಜನರಿಗೊಂದು ಮಾರ್ಗ ಸಿದ್ಧಮಾಡುವೆನು.
ಬೆಟ್ಟವು ನೆಲದ ಮಟ್ಟಕ್ಕೆ ಇಳಿಯುವುದು;
ತಗ್ಗು ಏರಿಸಲ್ಪಡುವದು.
12 “ಇಗೋ, ದೂರದೇಶಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಉತ್ತರ, ಪಶ್ಚಿಮ ದಿಕ್ಕುಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
ಈಜಿಪ್ಟಿನ ಅಸ್ವಾನಿನಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.”
13 ಭೂಮ್ಯಾಕಾಶಗಳೇ, ಸಂತೋಷಪಡಿರಿ!
ಪರ್ವತಗಳೇ, ಹರ್ಷಧ್ವನಿ ಮಾಡಿರಿ!
ಯಾಕೆಂದರೆ ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ.
ಆತನು ಬಡವರಿಗೆ ಕರುಣೆ ತೋರಿಸುತ್ತಾನೆ.
14 ಆದರೆ ಈಗ ಚೀಯೋನ್ ಹೇಳುವುದೇನೆಂದರೆ, “ಯೆಹೋವನು ನನ್ನನ್ನು ಬಿಟ್ಟುಹೋಗಿದ್ದಾನೆ.
ನನ್ನ ಒಡೆಯನು ನನ್ನನ್ನು ತೊರೆದಿದ್ದಾನೆ.”
15 ಆದರೆ ನಾನು ಹೇಳುವುದೇನೆಂದರೆ,
“ಒಬ್ಬ ತಾಯಿಯು ತನ್ನ ಮಗುವನ್ನು ಮರೆತಾಳೇ?
ತಾನು ಹೆತ್ತ ಶಿಶುವನ್ನು ತಾಯಿಯು ಮರೆತುಬಿಡುವಳೇ? ಇಲ್ಲ.
ಒಂದುವೇಳೆ ತಾಯಿ ತನ್ನ ಮಕ್ಕಳನ್ನು ಮರೆತಾಳು,
ಆದರೆ ಯೆಹೋವನಾದ ನಾನು ನಿಮ್ಮನ್ನು ಮರೆಯುವದಿಲ್ಲ.
16 ನೋಡಿ, ನಿಮ್ಮ ಹೆಸರುಗಳನ್ನು ನಾನು ನನ್ನ ಅಂಗೈಗಳಲ್ಲಿ ಕೆತ್ತಿರುತ್ತೇನೆ.
ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
ಮಾಡಲು ನಾನು ಪ್ರಯತ್ನಿಸುವುದಿಲ್ಲ.
2 ನಾನು ಸಮಾಧಾನದಿಂದಿರುವೆ.
ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.
3 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಈಗಲೂ ಆತನಲ್ಲಿ ಭರವಸವಿಡು.
ಎಂದೆಂದಿಗೂ ಆತನಲ್ಲಿ ಭರವಸವಿಡು!
ಕ್ರಿಸ್ತನ ಅಪೊಸ್ತಲರು
4 ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರು ತನ್ನ ರಹಸ್ಯವಾದ ಸತ್ಯಗಳನ್ನು ನಮಗೆ ವಹಿಸಿಕೊಟ್ಟಿದ್ದಾನೆಂತಲೂ ಎಣಿಸಬೇಕು. 2 ಹೀಗಿರಲು, ಜವಾಬ್ದಾರಿಕೆಯನ್ನು ವಹಿಸಿಕೊಂಡವರು ತಾವು ತಮ್ಮ ಕೆಲಸದಲ್ಲಿ ನಂಬಿಗಸ್ತರೆಂಬುದನ್ನು ತೋರಿಸಬೇಕು. 3 ನೀವೇ ನನಗೆ ವಿಚಾರಣೆ ಮಾಡಿದರೂ ಯಾವುದೇ ಮಾನವ ನೇಮಿತ ನ್ಯಾಯಾಲಯದಲ್ಲಿ ನನಗೆ ವಿಚಾರಣೆಯಾದರೂ ನಾನು ಚಿಂತಿಸುವುದಿಲ್ಲ. ಅಲ್ಲದೆ ನನಗೆ ನಾನೇ ವಿಚಾರಣೆ ಮಾಡಿಕೊಳ್ಳುವುದಿಲ್ಲ. 4 ನಾನು ತಪ್ಪುಮಾಡಿದ್ದೇನೆಂದು ನನ್ನ ಮನಸ್ಸಾಕ್ಷಿಗೆ ತೋರುತ್ತಿಲ್ಲ. ಅದು ನನ್ನನ್ನು ನಿರ್ದೋಷಿಯನ್ನಾಗಿ ಮಾಡಲಾರದು. ನನಗೆ ನ್ಯಾಯನಿರ್ಣಯ ಮಾಡುವವನು ಪ್ರಭುವೊಬ್ಬನೇ. 5 ಆದ್ದರಿಂದ ಸರಿಯಾದ ಸಮಯಕ್ಕಿಂತ ಮೊದಲೇ ತೀರ್ಪುಮಾಡಬೇಡಿ. ಪ್ರಭುವು ಬರುವ ತನಕ ಕಾದುಕೊಂಡಿರಿ. ಕತ್ತಲೆಯಲ್ಲಿ ಅಡಗಿಕೊಂಡಿರುವವುಗಳ ಮೇಲೆ ಆತನು ಬೆಳಕನ್ನು ಬೆಳಗಿಸುವನು. ಮನುಷ್ಯರ ಹೃದಯಗಳ ರಹಸ್ಯವಾದ ಉದ್ದೇಶಗಳನ್ನು ಆತನು ಬಹಿರಂಗಪಡಿಸುವನು. ಆಗ ಪ್ರತಿಯೊಬ್ಬನಿಗೂ ಬರತಕ್ಕ ಹೊಗಳಿಕೆಯು ದೇವರಿಂದಲೇ ಬರುವುದು.
24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.
ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ
(ಲೂಕ 12:22-34)
25 “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ. 26 ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ. 27 ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.
28 “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ. 29 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ. 30 ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೋ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ!
31 “‘ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ. 32 ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. 33 ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು. 34 ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.
Kannada Holy Bible: Easy-to-Read Version. All rights reserved. © 1997 Bible League International