Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:57-64

57 ಯೆಹೋವನೇ, ನನ್ನ ಪಾಲು ನೀನೇ;
    ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ.
58 ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ.
    ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು.
59 ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ
    ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ.
60 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ತಡಮಾಡದೆ ಬೇಗನೆ ಹಿಂತಿರುಗಿದೆನು.
61 ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ
    ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ.
62 ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು
    ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು.
63 ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ.
    ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ.
64 ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.

ಜ್ಞಾನೋಕ್ತಿಗಳು 25:11-22

11 ನೀನು ಸರಿಸಮಯದಲ್ಲಿ ಒಳ್ಳೆಯದನ್ನು ಹೇಳಿದರೆ, ಅದು ಬೆಳ್ಳಿಯ ತಟ್ಟೆಯಲ್ಲಿರುವ ಚಿನ್ನದ ಸೇಬಿನಂತಿರುವುದು. 12 ಜ್ಞಾನಿಯು ನಿನಗೆ ಕೊಡುವ ಎಚ್ಚರಿಕೆಯು ಚಿನ್ನದ ಉಂಗುರಗಳಿಗಿಂತಲೂ ಬಂಗಾರದ ಆಭರಣಗಳಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.

13 ನಂಬಿಗಸ್ತನಾದ ಸಂದೇಶಕನಿಂದ ಯಜಮಾನನಿಗೆ ಉಲ್ಲಾಸ. ಅವನು ಸುಗ್ಗೀಕಾಲದ ಬಿಸಿಲಿನ ದಿನಗಳಲ್ಲಿರುವ ತಣ್ಣನೆಯ ಹಿಮದಂತಿರುವನು.

14 ದಾನ ಮಾಡುವುದಾಗಿ ಹೇಳಿಯೂ ಮಾಡದವರು ಮಳೆಯನ್ನು ತಾರದ ಮೋಡಗಳಂತೆಯೂ ಗಾಳಿಯಂತೆಯೂ ಇರುವರು.

15 ತಾಳ್ಮೆಯು ಅಧಿಪತಿಯನ್ನು ಸಹ ಮನವೊಪ್ಪಿಸುವುದು. ನಯವಾದ ಮಾತಿಗೆ ಬಹುಬಲ.

16 ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ. 17 ಅಂತೆಯೇ, ನಿನ್ನ ನೆರೆಯವನ ಮನೆಗೆ ಪದೇಪದೇ ಹೋಗಬೇಡ. ನೀನು ಹೋದರೆ, ಅವನು ನಿನ್ನ ಮೇಲೆ ಬೇಸರಗೊಳ್ಳುವನು.

18 ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಅಪಾಯಕಾರಿ. ಅವನು ದೊಣ್ಣೆಯಂತೆಯೂ ಕತ್ತಿಯಂತೆಯೂ ಚೂಪಾದ ಬಾಣದಂತೆಯೂ ಇದ್ದಾನೆ. 19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.

20 ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.

21 ನಿನ್ನ ವೈರಿ ಹಸಿವೆಗೊಂಡಿದ್ದರೆ, ಅವನಿಗೆ ಊಟಕೊಡು. ನಿನ್ನ ವೈರಿ ಬಾಯಾರಿದ್ದರೆ, ಅವನಿಗೆ ನೀರು ಕೊಡು. 22 ಆಗ, ಉರಿಯುವ ಕೆಂಡಗಳನ್ನು ಅವನ ತಲೆಯ ಮೇಲೆ ಇಟ್ಟಂತಾಗುವುದು. ಯೋಹೋವನು ನಿನಗೆ ಅದರ ಪ್ರತಿಫಲವನ್ನು ಕೊಡುವನು.

ರೋಮ್ನಗರದವರಿಗೆ 12:9-21

ನಿಮ್ಮ ಪ್ರೀತಿಯು ಯಥಾರ್ಥವಾಗಿರಲಿ. ದುಷ್ಕೃತ್ಯಗಳನ್ನು ದ್ವೇಷಿಸಿರಿ. ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿರಿ. 10 ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನೀವು ನಿಮಗೋಸ್ಕರ ಬಯಸುವ ಮರ್ಯಾದೆಗಿಂತಲೂ ಹೆಚ್ಚು ಮರ್ಯಾದೆಯನ್ನು ನಿಮ್ಮ ಸಹೋದರ ಸಹೋದರಿಯರಿಗೆ ಕೊಡಿರಿ. 11 ನೀವು ಪ್ರಭುವಿಗೋಸ್ಕರ ಸೇವೆಮಾಡುವುದು ಅಗತ್ಯವಿರುವಾಗ ಸೋಮಾರಿಗಳಾಗಿರಬೇಡಿರಿ. ಆತ್ಮಿಕವಾದ ಉತ್ಸಾಹದಿಂದ ಆತನ ಸೇವೆಮಾಡಿರಿ. 12 ನಿಮಗೆ ನಿರೀಕ್ಷೆಯಿರುವುದರಿಂದ ಸಂತೋಷವಾಗಿರಿ. ನಿಮಗೆ ಸಂಕಟಗಳಿರುವಾಗ ತಾಳ್ಮೆಯಿಂದಿರಿ. ಎಲ್ಲಾ ಸಮಯದಲ್ಲಿ ಪ್ರಾರ್ಥಿಸಿರಿ. 13 ಕೊರತೆಯಲ್ಲಿರುವ ದೇವಜನರಿಗೆ ಸಹಾಯ ಮಾಡಿರಿ. ಅತಿಥಿಸತ್ಕಾರದ ಅಗತ್ಯವಿರುವವರನ್ನು ಗುರುತಿಸಿ, ನಿಮ್ಮ ಮನೆಗಳಿಗೆ ಆಹ್ವಾನಿಸಿರಿ.

14 ನಿಮಗೆ ಕೇಡುಮಾಡುವವರನ್ನು ಶಪಿಸದೆ ಆಶೀರ್ವದಿಸಿರಿ. 15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ. 16 ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.

17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(A) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,

“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
    ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
    ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(B)

21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International