Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:33-40

33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
    ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
    ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
    ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
    ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
    ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
    ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.

ವಿಮೋಚನಕಾಂಡ 22:21-27

21 “ನೀವು ಮೊದಲು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದದ್ದನ್ನು ಜ್ಞಾಪಕಮಾಡಿಕೊಳ್ಳಿ. ಆದ್ದರಿಂದ ನೀವು ಮೋಸಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥನಿಗೂ ಕೇಡು ಮಾಡಬಾರದು.

22 “ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥ ಮಕ್ಕಳಿಗೆ ಕೇಡುಮಾಡಬಾರದು. 23 ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಡುಮಾಡಿದರೆ, ನಾನು ಅವರ ಗೋಳಾಟವನ್ನು ಕೇಳಿ, 24 ನಿಮ್ಮ ಮೇಲೆ ಕೋಪಗೊಳ್ಳುವೆನು; ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮ ಹೆಂಡತಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.

25 “ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಲವಂತಪಡಿಸಬಾರದು. 26 ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಳುಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು. 27 ಯಾಕೆಂದರೆ ಅವನಿಗೆ ಬೇರೆ ಯಾವ ಹೊದಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಗಿಕೊಳ್ಳುವಾಗ ಚಳಿಯಿಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯೆತೋರುವೆನು.

1 ಕೊರಿಂಥದವರಿಗೆ 10:23-11:1

ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ

23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.

25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(A)

27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.

31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.

11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International