Revised Common Lectionary (Semicontinuous)
ರಚನೆಗಾರ: ದಾವೀದ.
6 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ನನ್ನನ್ನು ಕನಿಕರಿಸು!
ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
3 ನನ್ನ ಇಡೀ ದೇಹ ನಡುಗುತ್ತಿದೆ.
ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
4 ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
5 ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
ಆದ್ದರಿಂದ ನನ್ನನ್ನು ಗುಣಪಡಿಸು.
6 ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
7 ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.
8 ದುಷ್ಟರೇ, ತೊಲಗಿಹೋಗಿರಿ.
ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.
10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.
16 “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ.
ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
17 ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ.
ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
18 ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು
ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
19 ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ,
ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.
20 “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ.
ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
21 ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ.
ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
22 ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ;
ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
23 ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ.
ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.
24 “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ
ಯಾರೂ ಕೇಡುಮಾಡುವುದಿಲ್ಲ.
25 ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ.
ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
26 ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು.
ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
27 ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ.
ಸಂಕಟವು ಈಗ ತಾನೆ ಆರಂಭಗೊಂಡಿದೆ.
28 ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ.
ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ
ಒಬ್ಬಂಟಿಗನಾಗಿರುವೆ.
30 ನನ್ನ ಚರ್ಮವು ಕಡುಕಪ್ಪಾಗಿದೆ.
ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
31 ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ.
ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ.
46 ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು. 47 ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು. 48 ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.
49 ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.
50 ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು.
ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು. 51 ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.
52 ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು.
ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.
53 “ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.
54 ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.
Kannada Holy Bible: Easy-to-Read Version. All rights reserved. © 1997 Bible League International