Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 6

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

2 ಪೂರ್ವಕಾಲವೃತ್ತಾಂತ 26:1-21

ಯೆಹೂದದ ಅರಸನಾದ ಉಜ್ಜೀಯ

26 ಆ ಬಳಿಕ ಯೆಹೂದದ ಜನರು ಅಮಚ್ಯನ ಮಗನಾದ ಉಜ್ಜೀಯನನ್ನು ತಮ್ಮ ಅರಸನನ್ನಾಗಿ ಆರಿಸಿಕೊಂಡರು. ಆಗ ಅವನಿಗೆ ಹದಿನಾರು ವರ್ಷ. ಉಜ್ಜೀಯನು ಏಲೋತ್ ಪಟ್ಟಣವನ್ನು ಮತ್ತೆ ಕಟ್ಟಿಸಿ ಯೆಹೂದ ರಾಜ್ಯಕ್ಕೆ ಸೇರಿಸಿದನು. ಅಮಚ್ಯನು ಸತ್ತಾಗ ಉಜ್ಜೀಯನು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದನು.

ಉಜ್ಜೀಯನು ಪಟ್ಟಕ್ಕೆ ಬಂದಾಗ ಹದಿನಾರು ವರ್ಷದವನಾಗಿದ್ದನು. ಅವನು ಐವತ್ತೆರಡು ವರ್ಷ ಕಾಲ ಜೆರುಸಲೇಮಿನಲ್ಲಿ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಕೊಲ್ಯ. ಆಕೆ ಜೆರುಸಲೇಮಿನವಳು. ಉಜ್ಜೀಯನು ತನ್ನ ತಂದೆಯಾದ ಅಮಚ್ಯನಂತೆ ದೇವರ ಮುಂದೆ ಯೋಗ್ಯನಾಗಿ ನಡೆದುಕೊಂಡನು. ಜೆಕರ್ಯನು ಜೀವಿಸುತ್ತಿದ್ದಾಗ ಉಜ್ಜೀಯನು ದೇವರನ್ನು ಅನುಸರಿಸಿದನು. ಅವನು ಉಜ್ಜೀಯನಿಗೆ ದೇವರಿಗೆ ಹೇಗೆ ಭಯಪಡಬೇಕು, ದೇವರನ್ನು ಹೇಗೆ ಗೌರವಿಸಬೇಕೆಂದು ಕಲಿಸಿಕೊಟ್ಟನು. ಉಜ್ಜೀಯನು ದೇವರಿಗೆ ವಿಧೇಯನಾಗಿ ಬಾಳಿದಾಗ ಯೆಹೋವ ದೇವರು ಅವನಿಗೆ ಯಶಸ್ಸನ್ನು ದಯಪಾಲಿಸಿದನು.

ಉಜ್ಜೀಯನು ಫಿಲಿಷ್ಟಿಯರೊಂದಿಗೆ ಯುದ್ಧಮಾಡಿ ಅವರ ಪಟ್ಟಣಗಳಾದ ಗತ್, ಯೆಬ್ನೆ ಮತ್ತು ಅಷ್ಡೋದ್‌ಗಳ ಪೌಳಿಗೋಡೆಗಳನ್ನು ಕೆಡವಿಹಾಕಿದನು. ಅವನು ಅಷ್ಡೋದಿನ ಮತ್ತು ಇತರ ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. ಫಿಲಿಷ್ಟಿಯರೊಂದಿಗೂ ಗೂರ್‌ಬಾಳಿನಲ್ಲಿ ವಾಸಿಸುತ್ತಿದ್ದ ಅರಬಿಯರೊಂದಿಗೂ ಹಾಗೂ ಮೆಗೂನ್ಯರೊಡನೆಯೂ ಯುದ್ಧಮಾಡಲು ದೇವರು ಅವನಿಗೆ ಸಹಾಯ ಮಾಡಿದನು. ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪಕಾಣಿಕೆಯನ್ನು ತಂದುಕೊಟ್ಟರು. ಉಜ್ಜೀಯನು ಬಲಿಷ್ಠನಾಗಿದ್ದುದರಿಂದ ಅವನ ಹೆಸರು ಎಲ್ಲಾ ಕಡೆಗಳಲ್ಲಿ ಈಜಿಪ್ಟಿನ ಮೇರೆಯ ತನಕ ಪ್ರಸಿದ್ಧಿ ಹೊಂದಿತು.

ಉಜ್ಜೀಯನು ಜೆರುಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನಬಾಗಿಲು ಮತ್ತು ಪೌಳಿಗೋಡೆ ತಿರುಗುವ ಭಾಗ ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿದನು. 10 ಮರುಭೂಮಿಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು; ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ಬಯಲಿನಲ್ಲಿಯೂ ಬೆಟ್ಟಪ್ರದೇಶಗಳಲ್ಲಿಯೂ ಅಸಂಖ್ಯಾತ ಪಶುಗಳಿದ್ದವು. ಪರ್ವತ ಪ್ರಾಂತ್ಯಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಹುಲುಸಾದ ಬೆಳೆಯನ್ನು ಬೆಳೆಯಿಸಿದನು. ಬಯಲುಗಳಲ್ಲಿ ಕೆಲಸಮಾಡಲು ಅವನು ರೈತರನ್ನು ಕೂಲಿಗೆ ನೇಮಿಸಿಕೊಂಡನು; ಬೆಟ್ಟಗಳಲ್ಲಿಯೂ ಕಾರ್ಮೆಲಿನಲ್ಲಿಯೂ ಇದ್ದ ತನ್ನ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ಕೆಲಸಗಾರರನ್ನು ಕೂಲಿಗೆ ತೆಗೆದುಕೊಂಡನು.

11 ಉಜ್ಜೀಯನ ಬಳಿ ಒಳ್ಳೆಯ ತರಬೇತಿ ಹೊಂದಿದ ಸೈನ್ಯವಿತ್ತು. ಕಾರ್ಯದರ್ಶಿಯಾದ ಯೆಗೀಯೇಲ್ ಮತ್ತು ಅಧಿಕಾರಿಯಾದ ಮಾಸೇಯರು ಅವರನ್ನು ಗುಂಪುಗುಂಪಾಗಿ ವಿಂಗಡಿಸಿದರು. ಹನನ್ಯನು ರಾಜನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. 12 ಸೈನ್ಯಕ್ಕೆ ಒಟ್ಟು ಎರಡು ಸಾವಿರದ ಆರುನೂರು ಮಂದಿ ಸೇನಾಪತಿಗಳಿದ್ದರು. 13 ಅವರು ಕುಟುಂಬದ ನಾಯಕರಾಗಿದ್ದು ಅವರ ಅಧೀನದಲ್ಲಿ ಯುದ್ಧವೀರರಾದ ಮೂರು ಲಕ್ಷದ ಏಳು ಸಾವಿರದ ಐನೂರು ಸೈನಿಕರಿದ್ದರು. ಇವರು ವೈರಿಯೊಂದಿಗೆ ಕಾದಾಡಿ ಅರಸನಿಗೆ ಜಯಗಳಿಸಿದರು. 14 ಉಜ್ಜೀಯನು ಸೈನಿಕರಿಗೆ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು ಮತ್ತು ಕವಣೆಗೆ ಕಲ್ಲುಗಳನ್ನು ಒದಗಿಸಿದನು. 15 ಜೆರುಸಲೇಮಿನಲ್ಲಿ ವಿಜ್ಞಾನಿಗಳು ರೂಪಿಸಿದ ಯಂತ್ರಗಳನ್ನು ಉಜ್ಜೀಯನು ತಯಾರಿಸಿದನು. ಇವುಗಳನ್ನು ಪೌಳಿಗೋಡೆಯ ಮೇಲೆ ಇರಿಸಿದನು. ಇವು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ವೈರಿಗಳ ಮೇಲೆ ಹಾರಿಸಬಲ್ಲವಾಗಿದ್ದವು. ಉಜ್ಜೀಯನು ತುಂಬಾ ಪ್ರಸಿದ್ಧಿ ಹೊಂದಿದ್ದನು. ಬಹುದೂರದ ತನಕ ಅವನ ಹೆಸರು ಹಬ್ಬಿತು. ಅವನು ದೇವರ ವಿಶೇಷ ಸಹಾಯ ಪಡೆದುಕೊಂಡು ಬಲಿಷ್ಠನಾದನು.

16 ಬಲಶಾಲಿಯಾದ ಉಜ್ಜೀಯನಲ್ಲಿ ನಾಶಕರವಾದ ಗರ್ವವು ಸೇರಿತು. ಅವನು ತನ್ನ ದೇವರಾದ ಯೆಹೋವನಿಗೆ ದ್ರೋಹ ಮಾಡಿದನು. ಅವನು ದೇವಾಲಯದೊಳಗೆ ಧೂಪವೇದಿಕೆಯಲ್ಲಿ ತಾನೇ ಧೂಪವನ್ನು ಹಾಕಲು ಹೋದನು. 17 ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಸೇವೆಮಾಡುವ ಯಾಜಕರೂ ಉಜ್ಜೀಯನಿಗೆ, 18 “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕುವದು ನಿನ್ನ ಕೆಲಸವಲ್ಲ. ನೀನು ಹೀಗೆ ಮಾಡುವದು ಸರಿಯಲ್ಲ. ಆರೋನನ ಸಂತತಿಯವರಾದ ಯಾಜಕರೇ ಧೂಪ ಹಾಕಬೇಕಾದದ್ದು. ಅವರು ಪವಿತ್ರ ಸೇವೆಗೆ ನೇಮಿಸಲ್ಪಟ್ಟಿದ್ದಾರೆ. ನೀನು ಈ ಮಹಾ ಪವಿತ್ರಸ್ಥಾನದಿಂದ ಹೊರಗೆ ಹೋಗು. ನೀನು ದೇವರಾದ ಯೆಹೋವನಿಗೆ ವಿಧೇಯನಾಗಿಲ್ಲ. ಈ ಕಾರ್ಯವನ್ನು ಮಾಡಿದ್ದರಿಂದ ದೇವರು ನಿನ್ನನ್ನು ಮೆಚ್ಚುವದಿಲ್ಲ” ಎಂದು ಹೇಳಿದರು.

19 ಇದನ್ನು ಕೇಳಿ ಉಜ್ಜೀಯನು ಕೋಪಗೊಂಡನು. ಅವನು ಧೂಪ ಹಾಕಲು ಧೂಪಾರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಅವನು ಯಾಜಕರ ಮೇಲೆ ಕೋಪಿಸಿಕೊಂಡಾಗ ಕುಷ್ಠರೋಗವು ಅವನ ಹಣೆಯಲ್ಲಿ ಕಾಣಿಸಿಕೊಂಡಿತು. ಇದು ಯಾಜಕರ ಮುಂದೆ ದೇವಾಲಯದೊಳಗೆ ಧೂಪವೇದಿಕೆಯ ಬಳಿಯಲ್ಲೇ ಆಯಿತು. 20 ಮಹಾಯಾಜಕನಾದ ಅಜರ್ಯನೂ ಇತರ ಯಾಜಕರೂ ಉಜ್ಜೀಯನನ್ನು ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಾಣಿಸಿದ್ದರಿಂದ ಅವನನ್ನು ಕೂಡಲೇ ದೇವಾಲಯದಿಂದ ಹೊರಕ್ಕೆ ಹಾಕಿದರು. ಯೆಹೋವನು ಅವನನ್ನು ಶಿಕ್ಷಿಸಿದುದರಿಂದ ಉಜ್ಜೀಯನು ತಾನಾಗಿಯೇ ದೇವಾಲಯದೊಳಗಿಂದ ಅವಸರದಿಂದ ಹೊರಬಂದನು. 21 ಅರಸನಾದ ಉಜ್ಜೀಯನು ಕುಷ್ಠರೋಗಿಯಾದುದರಿಂದ ಅವನು ಯೆಹೋವನ ಆಲಯವನ್ನು ಪ್ರವೇಶಿಸಲಾಗಲಿಲ್ಲ. ಅವನು ದೂರದಲ್ಲಿದ್ದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಿದನು. ಅವನ ಮಗನಾದ ಯೋತಾಮನು ಪ್ರಜಾಪಾಲನೆ ಮಾಡಿದನು.

ಅಪೊಸ್ತಲರ ಕಾರ್ಯಗಳು 3:1-10

ಪೇತ್ರನಿಂದ ಗುಣಹೊಂದಿದ ಕುಂಟ

ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.

ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,

ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International