Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 69:1-3

ರಚನೆಗಾರ: ದಾವೀದ.

69 ದೇವರೇ, ನನ್ನನ್ನು ರಕ್ಷಿಸು!
    ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
    ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
    ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
    ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
    ನನ್ನ ಕಣ್ಣುಗಳು ನೋಯುತ್ತಿವೆ.

ಕೀರ್ತನೆಗಳು 69:13-16

13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
    ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
    ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
    ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
    ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
    ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
    ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
    ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
    ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.

ಕೀರ್ತನೆಗಳು 69:30-36

30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
    ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
    ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
    ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
    ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
    ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
    ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36     ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
    ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.

ಆದಿಕಾಂಡ 11:1-9

ಪ್ರಪಂಚದ ವಿಭಜನೆ

11 ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು. ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.

ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು.

ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು. ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.

ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.

ಮತ್ತಾಯ 7:13-20

ನಿತ್ಯಜೀವದ ದಾರಿ ಕಷ್ಟಕರ

(ಲೂಕ 13:24)

13 “ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. 14 ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.

ಜನರ ನಡತೆಯನ್ನು ಗಮನಿಸಿ

(ಲೂಕ 6:43-44; 13:25-27)

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International