Revised Common Lectionary (Semicontinuous)
ರಚನೆಗಾರ: ದಾವೀದ.
69 ದೇವರೇ, ನನ್ನನ್ನು ರಕ್ಷಿಸು!
ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
2 ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
3 ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
ನನ್ನ ಕಣ್ಣುಗಳು ನೋಯುತ್ತಿವೆ.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36 ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.
17 ಕಾಯಿನ ಮತ್ತು ಅವನ ಹೆಂಡತಿಗೆ ಒಂದು ಗಂಡುಮಗು ಹುಟ್ಟಿತು. ಅವರು ಆ ಮಗುವಿಗೆ ಹನೋಕ ಎಂದು ಹೆಸರಿಟ್ಟರು. ಕಾಯಿನನು ಒಂದು ಊರನ್ನು ಕಟ್ಟಿದನು. ಆ ಊರಿಗೆ ಅವನು ತನ್ನ ಮಗನ ಹೆಸರನ್ನೇ ಇಟ್ಟನು.
18 ಹನೋಕನು ಈರಾದ್ ಎಂಬ ಮಗನನ್ನು ಪಡೆದನು. ಈರಾದನು ಮೆಹೂಯಾಯೇಲ ಎಂಬ ಮಗನನ್ನು ಪಡೆದನು. ಮೆಹೂಯಾಯೇಲನು ಮೆತೂಷಾಯೇಲ ಎಂಬ ಮಗನನ್ನು ಪಡೆದನು. ಮೆತೂಷಾಯೇಲನು ಲೆಮೆಕ ಎಂಬ ಮಗನನ್ನು ಪಡೆದನು.
19 ಲೆಮೆಕನು ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಂಡನು. ಮೊದಲನೆ ಹೆಂಡತಿಯ ಹೆಸರು ಆದಾ; ಎರಡನೆ ಹೆಂಡತಿಯ ಹೆಸರು ಚಿಲ್ಲಾ. 20 ಆದಳಿಗೆ ಯಾಬಾಲ ಎಂಬ ಮಗನು ಹುಟ್ಟಿದನು. ಗುಡಾರಗಳಲ್ಲಿದ್ದುಕೊಂಡು ಪಶುಗಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದ ಜನರಿಗೆ ಯಾಬಾಲನೇ ಮೂಲಪಿತೃ. 21 ಆದಳಿಗೆ ಮತ್ತೊಬ್ಬ ಮಗ ಹುಟ್ಟಿದನು. ಅವನೇ ಯೂಬಾಲ. ಕಿನ್ನರಿಕೊಳಲುಗಳನ್ನು ನುಡಿಸುವ ಜನರಿಗೆ ಯೂಬಾಲನೇ ಮೂಲಪಿತೃ.
22 ಚಿಲ್ಲಾಳಿಗೆ ತೂಬಲ್‌ಕಾಯಿನ ಎಂಬ ಮಗನು ಹುಟ್ಟಿದನು. ಕಬ್ಬಿಣ ಮತ್ತು ತಾಮ್ರಗಳಿಂದ ಉಪಕರಣ ಮಾಡುತ್ತಿದ್ದವರಿಗೆ ತೂಬಲ್‌ಕಾಯಿನನೇ ಮೂಲಪಿತೃ. ತೂಬಲ್‌ಕಾಯಿನನ ತಂಗಿ ನಯಮಾ.
23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
“ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿ!
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಕೇಳಿ.
ಒಬ್ಬನು ನನಗೆ ಗಾಯ ಮಾಡಿದ,
ಆದ್ದರಿಂದ ನಾನು ಅವನನ್ನು ಕೊಂದೆ,
ಒಬ್ಬ ಯುವಕನು ನನ್ನನ್ನು ಹೊಡೆದ,
ಆದ್ದರಿಂದ ನಾನು ಅವನನ್ನು ಕೊಂದೆ.
24 ಕಾಯಿನನನ್ನು ಕೊಂದವರಿಗೆ ಏಳರಷ್ಟು ಶಿಕ್ಷೆಯಾಗುವುದು!
ಆದರೆ ನನ್ನನ್ನು ಕೊಂದವರಿಗೆ ಎಪ್ಪತ್ತೇಳರಷ್ಟು ಶಿಕ್ಷೆಯಾಗುವುದು!”
ಸೇತ ಮತ್ತು ಎನೋಷ್
25 ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು, ಆಕೆಗೆ ಮತ್ತೊಬ್ಬ ಮಗ ಹುಟ್ಟಿದನು. ಹವ್ವಳು, “ದೇವರು ನನಗೆ ಮತ್ತೊಬ್ಬ ಮಗನನ್ನು ಕೊಟ್ಟನು. ಕಾಯಿನನು ಕೊಂದ ಹೇಬೆಲನಿಗೆ ಬದಲಾಗಿ ದೇವರು ನನಗೆ ಗಂಡುಮಗುವನ್ನು ಕೊಟ್ಟನು” ಎಂದು ಹೇಳಿ ಆ ಮಗುವಿಗೆ ಸೇತ ಎಂದು ಹೆಸರಿಟ್ಟಳು. 26 ಸೇತನು ಒಬ್ಬ ಮಗನನ್ನು ಪಡೆದನು. ಆ ಮಗುವಿಗೆ ಅವನು ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು ಯೆಹೋವನ ಮೇಲೆ ಭರವಸೆ ಇಡಲಾರಂಭಿಸಿದರು.[a]
ಆದಾಮನ ಕುಟುಂಬ ಚರಿತ್ರೆ
5 ಇದು ಆದಾಮನ ಕುಟುಂಬ ಚರಿತ್ರೆ. ದೇವರು ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿ ಮಾಡಿದನು. 2 ದೇವರು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ಉಂಟುಮಾಡಿದನು. ಆತನು ಅವರನ್ನು ನಿರ್ಮಿಸಿದ ದಿನದಲ್ಲೇ ಅವರನ್ನು ಆಶೀರ್ವದಿಸಿ ಅವರಿಗೆ, “ಮನುಷ್ಯ” ಎಂದು ಹೆಸರಿಟ್ಟನು.
3 ಆದಾಮನು 130 ವರ್ಷದವನಾದಾಗ ಮತ್ತೊಬ್ಬ ಮಗನನ್ನು ಪಡೆದನು. ಆ ಮಗನು ರೂಪದಲ್ಲಿ ಆದಾಮನಂತಿದ್ದನು. ಆದಾಮನು ಅವನಿಗೆ ಸೇತ ಎಂದು ಹೆಸರಿಟ್ಟನು. 4 ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು. 5 ಹೀಗೆ ಆದಾಮನು ಒಟ್ಟು 930 ವರ್ಷ ಜೀವಿಸಿ ಮರಣಹೊಂದಿದನು.
ಎಲ್ಲಾ ಜನರು ಅಪರಾಧಿಗಳಾಗಿದ್ದಾರೆ
9 ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ. 10 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
“ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!
11 ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ.
ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.
12 ಎಲ್ಲಾ ಜನರು ದಾರಿ ತಪ್ಪಿದ್ದಾರೆ.
ಎಲ್ಲಾ ಜನರು ಅಯೋಗ್ಯರಾಗಿದ್ದಾರೆ.
ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”(A)
13 “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ.
ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.”(B)
“ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.”(C)
14 “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.”(D)
15 “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.
16 ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.
17 ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.”(E)
18 “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.”(F)
19 ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ. 20 ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.
ದೇವರು ಜನರನ್ನು ನೀತಿವಂತರನ್ನಾಗಿ ಮಾಡುವ ಬಗೆ
21 ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ. 22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ.
Kannada Holy Bible: Easy-to-Read Version. All rights reserved. © 1997 Bible League International