Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 46

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ಆದಿಕಾಂಡ 2:4-25

ಮಾನವನ ಪ್ರಾರಂಭ

ಇದು ಆಕಾಶದ ಮತ್ತು ಭೂಮಿಯ ಚರಿತ್ರೆ. ದೇವರು ಭೂಮಿಯನ್ನು ಮತ್ತು ಆಕಾಶವನ್ನು ಸೃಷ್ಟಿಸಿದಾಗ ನಡೆದ ಸಂಗತಿಗಳೇ ಈ ಚರಿತ್ರೆ. ಆಗ ಭೂಮಿಯ ಮೇಲೆ ಯಾವ ಮರಗಿಡಗಳೂ ಇರಲಿಲ್ಲ. ಭೂಮಿಯ ಮೇಲೆ ಯಾವ ಸಸಿಯೂ ಬೆಳೆಯುತ್ತಿರಲಿಲ್ಲ; ಯಾಕೆಂದರೆ ಯೆಹೋವನು ಭೂಮಿಯ ಮೇಲೆ ಇನ್ನೂ ಮಳೆಯನ್ನು ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡಲು ಯಾರೂ ಇರಲಿಲ್ಲ.

ಭೂಮಿಯಿಂದ ನೀರು[a] ಚಿಮ್ಮಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು. ಹೀಗಿರಲು ದೇವರಾದ ಯೆಹೋವನು ನೆಲದಿಂದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಸಜೀವಿಯಾದನು. ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು. ದೇವರಾದ ಯೆಹೋವನು ಆ ತೋಟದಲ್ಲಿ ಸುಂದರವಾದ ಪ್ರತಿಯೊಂದು ಮರವನ್ನು ಮತ್ತು ಊಟಕ್ಕೆ ಬೇಕಾದ ಒಳ್ಳೆಯ ಹಣ್ಣುಗಳನ್ನು ಬಿಡುವ ಪ್ರತಿಯೊಂದು ಮರವನ್ನು ಬೆಳೆಸಿದನು. ಇದಲ್ಲದೆ ತೋಟದ ಮಧ್ಯಭಾಗದಲ್ಲಿ ಜೀವದಾಯಕ ಮರವನ್ನೂ ಅಲ್ಲದೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರವನ್ನೂ ಬೆಳೆಸಿದನು.

10 ಏದೆನಿನಿಂದ ಹರಿದುಬರುತ್ತಿದ್ದ ನದಿಯು ತೋಟಕ್ಕೆ ಬೇಕಾದ ನೀರನ್ನು ಒದಗಿಸುತ್ತಿತ್ತು. ಬಳಿಕ ಅದೇ ನದಿಯು ಶಾಖೆಗಳಾಗಿ ಒಡೆದು ನಾಲ್ಕು ಉಪನದಿಗಳಾಯಿತು. 11 ಮೊದಲನೆ ನದಿಯ ಹೆಸರು ಪೀಶೋನ್. ಹವೀಲ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 12 ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಮತ್ತು ಗೋಮೇಧಿಕ ರತ್ನ ಸಹ ದೊರಕುತ್ತಿದ್ದವು. 13 ಎರಡನೆ ನದಿಯ ಹೆಸರು ಗೀಹೋನ್. ಇಥಿಯೋಪಿಯ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 14 ಮೂರನೆ ನದಿಯ ಹೆಸರು ಟೈಗ್ರಿಸ್. ದಕ್ಷಿಣ ಅಸ್ಸೀರಿಯ ದೇಶದಲ್ಲಿ ಹರಿಯುತ್ತಿದ್ದ ನದಿ ಇದೇ. ನಾಲ್ಕನೆ ನದಿಯ ಹೆಸರು ಯೂಫ್ರೇಟೀಸ್.

15 ದೇವರಾದ ಯೆಹೋವನು ಆ ಮನುಷ್ಯನನ್ನು ಏದೆನ್ ತೋಟಕ್ಕೆ ಕರೆದೊಯ್ದು ವ್ಯವಸಾಯ ಮಾಡುವುದಕ್ಕಾಗಿಯೂ ಅದನ್ನು ನೋಡಿಕೊಳ್ಳುವುದಕ್ಕೂ ಅದರಲ್ಲಿರಿಸಿದನು. 16 ದೇವರಾದ ಯೆಹೋವನು ಆ ಮನುಷ್ಯನಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನು ಬೇಕಾದರೂ ನೀನು ತಿನ್ನಬಹುದು. 17 ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಕೂಡದು. ಒಂದುವೇಳೆ ಆ ಮರದ ಹಣ್ಣನ್ನು ತಿಂದರೆ ನೀನು ಸಾಯುವೆ!” ಎಂದು ಆಜ್ಞಾಪಿಸಿದನು.

ಮೊದಲನೆ ಸ್ತ್ರೀ

18 ಬಳಿಕ ದೇವರಾದ ಯೆಹೋವನು, “ಮನುಷ್ಯನು ಒಬ್ಬಂಟಿಗನಾಗಿರುವುದು ಒಳ್ಳೆಯದಲ್ಲವೆಂದು ನನಗೆ ತೋರುತ್ತದೆ. ಅವನಿಗೆ ಸರಿಹೊಂದುವ ಸಹಕಾರಿಣಿಯನ್ನು ಉಂಟುಮಾಡುವೆನು” ಎಂದುಕೊಂಡನು.

19 ದೇವರಾದ ಯೆಹೋವನು ನೆಲದ ಮಣ್ಣಿನಿಂದ ಭೂಮಿಯ ಮೇಲಿರುವ ಪ್ರತಿಯೊಂದು ಪಶುವನ್ನೂ ಆಕಾಶದಲ್ಲಿರುವ ಪ್ರತಿಯೊಂದು ಪಕ್ಷಿಯನ್ನೂ ನಿರ್ಮಿಸಿ ಮನುಷ್ಯನ ಬಳಿಗೆ ಬರಮಾಡಿದನು. ಅವುಗಳಿಗೆಲ್ಲಾ ಮನುಷ್ಯನು ಹೆಸರಿಟ್ಟನು. 20 ಭೂಮಿಯ ಮೇಲಿನ ಎಲ್ಲಾ ಪಶುಗಳಿಗೂ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೂ ಮತ್ತು ಕಾಡಿನಲ್ಲಿರುವ ಎಲ್ಲಾ ಕ್ರೂರಪ್ರಾಣಿಗಳಿಗೂ ಮನುಷ್ಯನು ಹೆಸರಿಟ್ಟನು. ಮನುಷ್ಯನು ಅನೇಕಾನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಿದನು. ಆದರೆ ಅವುಗಳಲ್ಲಿ ತನಗೆ ಸರಿಹೊಂದುವ ಸಹಕಾರಿಣಿಯನ್ನು ಅವನು ಕಾಣಲಿಲ್ಲ. 21 ಆದ್ದರಿಂದ ದೇವರಾದ ಯೆಹೋವನು ಮನುಷ್ಯನಿಗೆ ಗಾಢವಾದ ನಿದ್ರೆಯನ್ನು ಬರಮಾಡಿ ಅವನ ದೇಹದ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಆ ಪಕ್ಕೆಲುಬಿನ ಸ್ಥಳವನ್ನು ಮಾಂಸದಿಂದ ಮುಚ್ಚಿದನು. 22 ಆತನು ಮನುಷ್ಯನ ಪಕ್ಕೆಲುಬಿನಿಂದ ಸ್ತ್ರೀಯನ್ನು ಸೃಷ್ಟಿಸಿ ಆಕೆಯನ್ನು ಮನುಷ್ಯನ ಬಳಿಗೆ ಕರೆದುಕೊಂಡು ಬಂದನು. 23 ಆಗ ಅವನು ಆಕೆಯನ್ನು ನೋಡಿ,

“ಈಗ ಸರಿ, ಈಕೆ ನನ್ನಂತೆಯೇ ಇದ್ದಾಳೆ.
    ಈಕೆಯ ಎಲುಬುಗಳು ನನ್ನ ಎಲುಬುಗಳಿಂದ ಬಂದಿವೆ.
    ಈಕೆಯ ದೇಹವು ನನ್ನ ದೇಹದಿಂದ ಬಂದಿದೆ.
ಈಕೆ ಮನುಷ್ಯನಿಂದ ಉತ್ಪತ್ತಿಯಾದವಳು.
    ಆದ್ದರಿಂದ ಈಕೆಗೆ ನಾನು ‘ಸ್ತ್ರೀ’ ಎಂದು ಹೆಸರಿಡುವೆ” ಎಂದನು.

24 ಆದ್ದರಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗುವರು.

25 ಆ ಪುರುಷನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ರೋಮ್ನಗರದವರಿಗೆ 9:6-13

ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.

10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(C) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(D) ಎಂದು ಪವಿತ್ರ ಗ್ರಂಥವು ಹೇಳುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International