Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:1-9

ರಚನೆಗಾರ: ದಾವೀದ

37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
    ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
    ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
    ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
    ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
    ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
    ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
    ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
    ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
    ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.

2 ರಾಜರುಗಳು 18:1-8

ಹಿಜ್ಕೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

18 ಅಹಾಜನ ಮಗನಾದ ಹಿಜ್ಕೀಯನು ಯೆಹೂದದ ರಾಜನಾದನು. ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಹಿಜ್ಕೀಯನು ಆಳಲಾರಂಭಿಸಿದನು. ಹಿಜ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂಭತ್ತು ವರ್ಷ ವಯಸ್ಸಾಗಿತ್ತು. ಹಿಜ್ಕೀಯನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬ ಹೆಸರಿನವಳು ಅವನ ತಾಯಿ.

ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ, ಯೆಹೋವನು ಯೋಗ್ಯವೆಂದು ಹೇಳಿದ್ದನ್ನು ಮಾಡಿದನು.

ಹಿಜ್ಕೀಯನು ಉನ್ನತಸ್ಥಳಗಳನ್ನು ನಾಶಗೊಳಿಸಿದನು. ಅವನು ಸ್ಮಾರಕಕಲ್ಲುಗಳನ್ನು ಒಡೆದುಹಾಕಿದನು ಮತ್ತು ಅಶೇರ ಕಲ್ಲುಗಳನ್ನು ಕತ್ತರಿಸಿಹಾಕಿದನು. ಆ ಸಮಯದಲ್ಲಿ ಇಸ್ರೇಲರು ಮೋಶೆಯು ಮಾಡಿದ ತಾಮ್ರಸರ್ಪಕ್ಕೆ ಧೂಪವನ್ನು ಸುಡುತ್ತಿದ್ದರು. ಈ ತಾಮ್ರಸರ್ಪವನ್ನು “ನೆಹುಷ್ಟಾನ್” ಎಂದು ಕರೆಯುತ್ತಿದ್ದರು. ಜನರು ಈ ಸರ್ಪವನ್ನು ಆರಾಧಿಸುತ್ತಿದ್ದುದರಿಂದ ಹಿಜ್ಕೀಯನು ಈ ತಾಮ್ರಸರ್ಪವನ್ನು ಒಡೆದು ಚೂರುಚೂರು ಮಾಡಿದನು.

ಹಿಜ್ಕೀಯನು ಇಸ್ರೇಲಿನ ದೇವರಾದ ಯೆಹೋವನಲ್ಲಿ ನಂಬಿಕೆಯಿಟ್ಟನು. ಯೆಹೂದದ ರಾಜರುಗಳಲ್ಲೆಲ್ಲಾ ಹಿಜ್ಕೀಯನಂಥವರು ಅವನ ಮುಂಚೆಯಾಗಲಿ ಅವನ ನಂತರವಾಗಲಿ ಇರಲಿಲ್ಲ. ಹಿಜ್ಕೀಯನು ಯೆಹೋವನಿಗೆ ಬಹಳ ನಂಬಿಕೆಯುಳ್ಳವನಾಗಿದ್ದನು. ಅವನು ಯೆಹೋವನನ್ನು ಅನುಸರಿಸುವುದನ್ನು ನಿಲ್ಲಿಸಲೇ ಇಲ್ಲ. ಯೆಹೋವನು ಮೋಶೆಗೆ ನೀಡಿದ ಆಜ್ಞೆಗಳಿಗೆ ಅವನು ವಿಧೇಯನಾಗಿ ಅನುಸರಿಸಿದನು. ಯೆಹೋವನು ಹಿಜ್ಕೀಯನೊಂದಿಗಿದ್ದನು. ಹಿಜ್ಕೀಯನು ತಾನು ಮಾಡಿದ್ದರಲ್ಲೆಲ್ಲಾ ಜಯಗಳಿಸಿದನು.

ಹಿಜ್ಕೀಯನು ಅಶ್ಶೂರದ ರಾಜನೊಂದಿಗಿದ್ದ ಸಂಬಂಧವನ್ನು ಕಡಿದುಹಾಕಿದನು. ಅಶ್ಶೂರದ ರಾಜನ ಸೇವೆಯನ್ನು ಹಿಜ್ಕೀಯನು ನಿಲ್ಲಿಸಿದನು. ಹಿಜ್ಕೀಯನು ಗಾಜಾ ಪ್ರಾಂತ್ಯದವರೆಗಿದ್ದ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿದ್ದ ಫಿಲಿಷ್ಟಿಯರನ್ನು ಸೋಲಿಸಿದನು. ಅವನು ಫಿಲಿಷ್ಟಿಯರ ಚಿಕ್ಕ ಊರಿನಿಂದಿಡಿದು ದೊಡ್ಡ ನಗರಗಳನ್ನೆಲ್ಲಾ ಸೋಲಿಸಿದನು.

2 ರಾಜರುಗಳು 18:28-36

28 ನಂತರ ಸೇನಾಧಿಪತಿಯು ಯೂದಾಯ ಭಾಷೆಯಲ್ಲಿ ಗಟ್ಟಿಯಾಗಿ,

“ಅಶ್ಶೂರದ ಮಹಾರಾಜನ ಈ ಸಂದೇಶವನ್ನು ಕೇಳಿರಿ! 29 ‘ನಿಮ್ಮನ್ನು ಮೂರ್ಖರನ್ನಾಗಿಸಲು ಹಿಜ್ಕೀಯನಿಗೆ ಅವಕಾಶ ಕೊಡಬೇಡಿ! ನನ್ನ ಶಕ್ತಿಯಿಂದ ಅವನು ನಿಮ್ಮನ್ನು ರಕ್ಷಿಸಲಾಗುವುದಿಲ್ಲ. 30 ಯೆಹೋವನನ್ನು ನೀವು ನಂಬುವಂತೆ ಮಾಡಲು ಹಿಜ್ಕೀಯನಿಗೆ ಅವಕಾಶ ನೀಡಬೇಡಿ! ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ! ಅಶ್ಶೂರದ ರಾಜನು ಈ ನಗರವನ್ನು ಸೋಲಿಸಲಾಗುವುದಿಲ್ಲ!’ ಎಂದು ಹಿಜ್ಕೀಯನು ಹೇಳುತ್ತಾನೆ. 31 ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಎಂದು ಹೇಳಿದನು. ಅಶ್ಶೂರದ ರಾಜ ಹೀಗೆ ಹೇಳುತ್ತಾನೆ:

“‘ನನ್ನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿರಿ. ನಂತರ ಪ್ರತಿಯೊಬ್ಬರೂ ತನ್ನ ಸ್ವಂತ ದ್ರಾಕ್ಷಿಯನ್ನು ತಿನ್ನಬಹುದು; ತನ್ನ ಸ್ವಂತ ಅಂಜೂರವನ್ನು ತಿನ್ನಬಹುದು; ತನ್ನ ಸ್ವಂತ ಬಾವಿಯಿಂದ ನೀರನ್ನು ಕುಡಿಯಬಹುದು. 32 ನಾನು ಬಂದು, ನಿಮ್ಮನ್ನು ಈ ದೇಶಕ್ಕೆ ಸಮಾನವಾದ ಬೇರೊಂದು ದೇಶಕ್ಕೆ ಕರೆದೊಯ್ಯುವವರೆಗೆ ನೀವು ಹೀಗೆ ಮಾಡಬಹುದು. ಆ ದೇಶವು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಆಲೀವ್ ಮರ ಮತ್ತು ಜೇನುತುಪ್ಪ ಮುಂತಾದವುಗಳಿಂದ ಸಮೃದ್ಧಿಯಾಗಿದೆ. ನೀವು ಅಲ್ಲಿ ಸಾಯದೆ ಜೀವಿಸಬಹುದು. ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಅವನು ನಿಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ. “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಅವನು ಹೇಳುತ್ತಾನೆ. 33 ಬೇರೆ ಜನಾಂಗಗಳ ದೇವರುಗಳು ಅವರ ದೇಶಗಳನ್ನು ಅಶ್ಶೂರದ ರಾಜನಿಗೆ ಸಿಗದಂತೆ ರಕ್ಷಿಸಿದನೇ? ಇಲ್ಲ! 34 ಹಮಾತ್ ಮತ್ತು ಅರ್ಪಾದ್ ದೇವರುಗಳು ಎಲ್ಲಿವೆ? ಸೆಫರ್ವಯಿಮ್, ಹೇನ, ಇವ್ವಾದ ದೇವರುಗಳು ಎಲ್ಲಿವೆ? ಸಮಾರ್ಯವನ್ನು ನನ್ನ ಕೈಗೆ ಸಿಗದಂತೆ ಅವು ರಕ್ಷಿಸಿದವೇ? ಇಲ್ಲ! 35 ಬೇರೆ ಜನಾಂಗಗಳ ದೇವತೆಗಳು ಯಾವುದಾದರೂ ತಮ್ಮ ದೇಶವನ್ನು ನನ್ನಿಂದ ರಕ್ಷಿಸುತ್ತವೆಯೇ? ಇಲ್ಲ! ಜೆರುಸಲೇಮನ್ನು ಯೆಹೋವನು ನನ್ನಿಂದ ರಕ್ಷಿಸುತ್ತಾನೆಯೇ ಇಲ್ಲ!’”

36 ಆದರೆ ಜನರೆಲ್ಲರೂ ಸುಮ್ಮನಿದ್ದರು, ರಾಜನಾದ ಹಿಜ್ಕೀಯನು ಜನರಿಗೆ ಆಜ್ಞಾಪಿಸಿದ್ದರಿಂದ ಅವರು ಸೇನಾಧಿಪತಿಯೊಂದಿಗೆ ಒಂದು ಮಾತನ್ನೂ ಆಡಲಿಲ್ಲ. “ಅವನಿಗೆ ಏನನ್ನೂ ಹೇಳಬೇಡಿ” ಎಂದು ಹಿಜ್ಕೀಯನು ಹೇಳಿದ್ದನು.

ಪ್ರಕಟನೆ 2:8-11

ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.

“ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.

11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International