Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 24

ರಚನೆಗಾರ: ದಾವೀದ.

24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
    ಲೋಕವೂ ಅದರ ನಿವಾಸಿಗಳೂ ಆತನವೇ.
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
    ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.

ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
    ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
    ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
    ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.

ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
    ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
ಆತನನ್ನು ಅನುಸರಿಸುವವರು ಇಂಥವರೇ.
    ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
ಮಹಿಮಾಸ್ವರೂಪನಾದ ಈ ರಾಜನು ಯಾರು?
    ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
    ಯೆಹೋವನೇ ಆತನು.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
    ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
    ಮಹಿಮಾಸ್ವರೂಪನಾದ ರಾಜನು ಆತನೇ.

ಯೆಶಾಯ 60:8-16

ಜನರನ್ನು ನೋಡು!
    ಆಕಾಶದ ಮೋಡವು ಹಾರಿಹೋಗುವಂತೆ ಅವರು ನಿನ್ನ ಬಳಿಗೆ ತ್ವರಿತವಾಗಿ ಬರುತ್ತಿದ್ದಾರೆ.
    ತಮ್ಮ ಗೂಡುಗಳಿಗೆ ಹಾರುವ ಪಾರಿವಾಳಗಳಂತೆ ಅವರಿರುತ್ತಾರೆ.
ದೂರ ಪ್ರಾಂತ್ಯಗಳು ನನಗಾಗಿ ಕಾದಿವೆ.
    ದೊಡ್ಡ ಸರಕು ಸಾಗಿಸುವ ಹಡಗುಗಳು ಹೊರಡಲು ತಯಾರಾಗಿವೆ.
ಈ ಹಡಗುಗಳು ದೂರ ಪ್ರಾಂತ್ಯದಲ್ಲಿರುವ ನಿನ್ನ ಮಕ್ಕಳನ್ನು ಕರೆತರಲು ತಯಾರಾಗಿವೆ.
    ಅವರು ಬೆಳ್ಳಿಬಂಗಾರಗಳನ್ನು ತಮ್ಮೊಂದಿಗೆ ತಂದು
    ಇಸ್ರೇಲಿನ ಪರಿಶುದ್ಧನಾದ ಯೆಹೋವನನ್ನು ಘನಪಡಿಸುವರು.
ಯೆಹೋವನು ನಿನಗೆ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುವನು.
10 ಬೇರೆ ದೇಶದ ಮಕ್ಕಳು ನಿನ್ನ ಗೋಡೆಗಳನ್ನು ಮತ್ತೆ ಕಟ್ಟುವರು.
    ಅವರ ಅರಸರುಗಳು ನಿನ್ನ ಸೇವೆ ಮಾಡುವರು.

“ನಾನು ಕೋಪಗೊಂಡಾಗ ನಿನ್ನನ್ನು ಬಾಧಿಸಿದೆನು.
    ಆದರೆ ಈಗ ನಿನಗೆ ಕರುಣೆ ತೋರುವೆನು.
    ನಿನ್ನನ್ನು ಆದರಿಸುವೆನು.
11 ನಿನ್ನ ದ್ವಾರಗಳು ಯಾವಾಗಲೂ ತೆರೆಯಲ್ಪಡುತ್ತವೆ.
    ಅವು ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಮುಚ್ಚಲ್ಪಡುವದಿಲ್ಲ.
ರಾಜ್ಯಗಳೂ ರಾಜರುಗಳೂ ತಮ್ಮ ಐಶ್ವರ್ಯವನ್ನು ನಿನ್ನ ಬಳಿಗೆ ತರುವರು.
12 ನಿನ್ನ ಸೇವೆಮಾಡದ ಯಾವ ರಾಜ್ಯವಾಗಲಿ ನಾಶಮಾಡಲ್ಪಡುವದು.
    ಹೌದು, ಆ ರಾಜ್ಯಗಳು ಸರ್ವನಾಶವಾಗುವವು.
13 ಲೆಬನೋನಿನ ಎಲ್ಲಾ ಅಮೂಲ್ಯವಸ್ತುಗಳನ್ನು ನಿನಗೆ ಕೊಡಲಾಗುವುದು.
    ಜನರು ದೇವದಾರು ಮರಗಳನ್ನೂ ಇತರ ವಿಶೇಷ ಮರಗಳನ್ನೂ ನಿನಗೆ ತಂದುಕೊಡುವರು.
ಈ ಮರಗಳಿಂದ ತೊಲೆಗಳನ್ನು ಮಾಡಿ
    ನನ್ನ ಪವಿತ್ರ ಆಲಯವನ್ನು ಸೌಂದರ್ಯಗೊಳಿಸುವರು.
ಅದು ನನ್ನ ಸಿಂಹಾಸನದ ಮುಂದಿರುವ ಪಾದಪೀಠದಂತಿರುವದು.
    ಅದಕ್ಕೆ ನಾನು ಹೆಚ್ಚಾದ ಗೌರವ ಕೊಡುವೆನು.
14 ಹಿಂದಿನ ದಿವಸಗಳಲ್ಲಿ ಜನರು ನಿನಗೆ ಹಿಂಸೆ ಕೊಟ್ಟರು.
    ಆ ಜನರು ಈಗ ನಿನ್ನ ಮುಂದೆ ಅಡ್ಡಬೀಳುವರು.
ಗತಿಸಿದ ದಿವಸಗಳಲ್ಲಿ ಜನರು ನಿನ್ನನ್ನು ದ್ವೇಷಿಸಿದರು.
    ಆದರೆ ಈಗ ಅವರು ನಿನ್ನ ಕಾಲಿನ ಮುಂದೆ ಬೀಳುವರು.
ಅವರು ನಿನ್ನನ್ನು ‘ಯೆಹೋವನ ಪಟ್ಟಣ,’ ‘ಇಸ್ರೇಲಿನ ಪರಿಶುದ್ಧನಾದ ಯೆಹೋವನ ಚೀಯೋನ್’ ಎಂದು ಕರೆಯುವರು.

15 “ನೀನು ಮತ್ತೆಂದಿಗೂ ಒಬ್ಬಂಟಿಗಳಾಗಿರುವದಿಲ್ಲ.
    ನೀನು ಮತ್ತೆಂದಿಗೂ ದ್ವೇಷಿಸಲ್ಪಡುವದಿಲ್ಲ.
    ನೀನು ತಿರುಗಿ ಬರಿದಾಗುವುದಿಲ್ಲ.
ನಿನ್ನನ್ನು ಶಾಶ್ವತವಾದ ಮಹೋನ್ನತಳನ್ನಾಗಿ ಮಾಡುವೆನು.
    ನೀನು ನಿತ್ಯಕಾಲಕ್ಕೂ ಸಂತೋಷದಲ್ಲಿರುವೆ.
16 ಜನಾಂಗಗಳು ನಿನಗೆ ಬೇಕಾದದ್ದೆಲ್ಲವನ್ನು ಕೊಡುವರು.
    ಒಂದು ಮಗು ಹೇಗೆ ತಾಯಿಯ ಹಾಲನ್ನು ಕುಡಿಯುವದೋ
ಅದೇ ರೀತಿಯಲ್ಲಿ ಅರಸರುಗಳಿಂದ ನೀನು ಧನವನ್ನು ಕುಡಿಯುವಿ.
    ಆಗ ಯೆಹೋವನಾದ ನಾನೇ ನಿನ್ನನ್ನು ರಕ್ಷಿಸಿದೆನೆಂದು ತಿಳಿದುಕೊಳ್ಳುವಿ.
    ಆಗ ಯಾಕೋಬ್ಯರ ಮಹಾದೇವರು ನಿಮ್ಮನ್ನು ಕಾಪಾಡುವನೆಂದು ತಿಳಿದುಕೊಳ್ಳುವಿರಿ.

ಲೂಕ 1:1-4

ಯೇಸುವಿನ ಜೀವನದ ಬಗ್ಗೆ ಲೂಕನ ಬರಹ

ಸನ್ಮಾನ್ಯ ಥೆಯೊಫಿಲನೇ,

ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International