Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 24

ರಚನೆಗಾರ: ದಾವೀದ.

24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
    ಲೋಕವೂ ಅದರ ನಿವಾಸಿಗಳೂ ಆತನವೇ.
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
    ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.

ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
    ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
    ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
    ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.

ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
    ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
ಆತನನ್ನು ಅನುಸರಿಸುವವರು ಇಂಥವರೇ.
    ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
ಮಹಿಮಾಸ್ವರೂಪನಾದ ಈ ರಾಜನು ಯಾರು?
    ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
    ಯೆಹೋವನೇ ಆತನು.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
    ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
    ಮಹಿಮಾಸ್ವರೂಪನಾದ ರಾಜನು ಆತನೇ.

ಯೆಶಾಯ 33:17-23

17 ನಿಮ್ಮ ಕಣ್ಣುಗಳು ಸೌಂದರ್ಯ ಪ್ರಭಾವಗಳಿಂದ ತುಂಬಿದ ರಾಜನನ್ನು (ದೇವರನ್ನು) ನೋಡುವವು. ನೀವು ಮಹಾ ದೊಡ್ಡ ದೇಶವನ್ನು ನೋಡುವಿರಿ. 18-19 ಹಿಂದಿನ ಕಾಲದಲ್ಲಿ ನೀವು ಅನುಭವಿಸಿದ ಸಂಕಟಗಳನ್ನು ನೆನಪುಮಾಡಿಕೊಳ್ಳುವಿರಿ. ನೀವು ಹೀಗೆ ಭಾವಿಸಿಕೊಳ್ಳುವಿರಿ: “ಬೇರೆ ದೇಶಗಳಿಂದ ಬಂದ ಜನರೆಲ್ಲಿದ್ದಾರೆ? ನಮಗೆ ಅರ್ಥವಾಗದಂಥ ಭಾಷೆಯಲ್ಲಿ ಅವರು ಮಾತಾಡುತ್ತಿದ್ದರು. ಪರದೇಶದ ಅಧಿಕಾರಿಗಳು, ತೆರಿಗೆ ಎತ್ತುವವರು ಎಲ್ಲಿ? ನಮ್ಮ ಕೋಟೆಗಳನ್ನು, ಬುರುಜುಗಳನ್ನು ಲೆಕ್ಕಿಸಲು ಬಂದ ಗೂಢಚಾರರೆಲ್ಲಿ? ಅವರೆಲ್ಲಾ ಹೋಗಿಬಿಟ್ಟರು. ನೀವೆಂದೂ ಆ ಜನರನ್ನು ಕಾಣದೆ ಇರುವಿರಿ.”

ದೇವರು ಜೆರುಸಲೇಮನ್ನು ರಕ್ಷಿಸುತ್ತಾನೆ

20 ನಮ್ಮ ಹಬ್ಬಗಳನ್ನು ಆಚರಿಸುವ ನಗರವಾದ ಚೀಯೋನನ್ನು ನೋಡಿರಿ. ಮನೋಹರವಾದ ವಿಶ್ರಾಂತಿ ಸ್ಥಳವಾದ ಜೆರುಸಲೇಮನ್ನು ನೋಡಿರಿ. ಜೆರುಸಲೇಮು ಎಂದಿಗೂ ಕದಲದ ಗುಡಾರವಾಗಿದೆ. ಆಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಗೂಟಗಳು ಎಂದಿಗೂ ಕೀಳಲ್ಪಡುವದಿಲ್ಲ. ಆಕೆಯ ಹಗ್ಗಗಳು ಎಂದಿಗೂ ತುಂಡಾಗುವದಿಲ್ಲ. 21-23 ಕೆಂದರೆ ಬಲಿಷ್ಠನಾದ ಯೆಹೋವನು ಅಲ್ಲಿದ್ದಾನೆ. ಆ ದೇಶವು ತೊರೆಗಳೂ ಅಗಲವಾಗಿ ಹರಿಯುವ ನದಿಗಳೂ ಇರುವ ದೇಶವಾಗಿದೆ. ಆದರೆ ಆ ನದಿಯಲ್ಲಿ ವೈರಿಯ ದೋಣಿಯಾಗಲಿ, ಹಡಗುಗಳಾಗಲಿ ಇರುವದಿಲ್ಲ. ಆ ಹಡುಗುಗಳಲ್ಲಿ ಕೆಲಸಮಾಡುವವರೇ, ನೀವು ಅದರ ಹಗ್ಗಗಳಲ್ಲಿ ಕೆಲಸಮಾಡುವದನ್ನು ಬಿಟ್ಟುಬಿಡಿರಿ. ಹಡಗಿನ ಸ್ತಂಭವನ್ನು ನೀವು ಬಲಪಡಿಸಲಾರಿರಿ. ಹಡಗಿನ ಹಾಯಿಗಳನ್ನು ನಿಮ್ಮಿಂದ ತೆರೆಯಲು ಆಗುವದಿಲ್ಲ. ಯಾಕೆಂದರೆ ದೇವರೇ ನಮ್ಮ ನ್ಯಾಯಾಧೀಶನು. ಆತನು ಧರ್ಮಶಾಸ್ತ್ರವನ್ನು ಸಿದ್ಧಪಡಿಸಿದಾತನು. ಯೆಹೋವನೇ ನಮ್ಮ ಅರಸನು. ಆತನೇ ನಮ್ಮನ್ನು ರಕ್ಷಿಸುವನು, ನಮಗೆ ಸಂಪತ್ತನ್ನು ದಯಪಾಲಿಸುವನು. ಕೈಕಾಲು ಊನವಾದವರೂ ಸಹ ಯುದ್ಧದಲ್ಲಿ ಸಂಪತ್ತನ್ನು ಗಳಿಸುವರು.

ಪ್ರಕಟನೆ 22:8-21

ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.

10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ. 11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.

12 “ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. 13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.

14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು. 15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.

16 “ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”

17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.

18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ. 19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.

20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ.

ಆಮೆನ್! ಪ್ರಭು ಯೇಸುವೇ, ಬಾ!

21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International