Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 141

ಸ್ತುತಿಗೀತೆ. ರಚನೆಗಾರ: ದಾವೀದ.

141 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
    ಬೇಗನೆ ಬಂದು ನನಗೆ ಸಹಾಯಮಾಡು!
ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
    ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.

ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
    ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
    ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
    ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
ನೀತಿವಂತನು ನನ್ನನ್ನು ಸರಿಪಡಿಸಿದರೆ
    ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
    ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
ಅವರ ಅಧಿಪತಿಗಳು ದೊಬ್ಬಲ್ಪಡಲಿ.
    ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.

ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
    ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
    ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
    ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
    ಆಗ ನಾನು ತಪ್ಪಿಸಿಕೊಳ್ಳುವೆನು.

ಯೆಹೆಜ್ಕೇಲ 43:1-12

ಯೆಹೋವನು ತನ್ನ ಜನರ ಮಧ್ಯದಲ್ಲಿ ವಾಸಿಸುವನು

43 ಆ ಮನುಷ್ಯನು ನನ್ನನ್ನು ಪೂರ್ವದ ದ್ವಾರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಇಸ್ರೇಲ್ ದೇವರ ಮಹಿಮೆಯು ಪೂರ್ವದಿಂದ ಬಂದಿತು. ದೇವರ ಸ್ವರವು ಸಮುದ್ರದ ಶಬ್ದದಂತೆ ಗಟ್ಟಿಯಾಗಿತ್ತು. ದೇವರ ಮಹಿಮಾ ಪ್ರಕಾಶದಿಂದ ನೆಲವು ಬೆಳಕಿನಿಂದ ತುಂಬಿತ್ತು. ನಾನು ನೋಡಿದ ದರ್ಶನವು ಕೆಬಾರ್ ಕಾಲುವೆಯ ಬಳಿ ಕಂಡ ದರ್ಶನದಂತಿತ್ತು. ನಾನು ಸಾಷ್ಟಾಂಗವೆರಗಿದೆನು. ಯೆಹೋವನ ಮಹಿಮೆಯು ಪೂರ್ವದಿಕ್ಕಿನ ದ್ವಾರದ ಮೂಲಕ ಆಲಯದೊಳಗೆ ಬಂದಿತು.

ಆಗ ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಪ್ರಾಕಾರಕ್ಕೆ ತಂದಿತು. ಯೆಹೋವನ ಮಹಿಮೆಯು ಆಲಯವನ್ನು ತುಂಬಿತು. ಆಲಯದೊಳಗಿಂದ ಯಾರೋ ನನ್ನೊಡನೆ ಮಾತನಾಡಿದಂತೆ ಕೇಳಿಸಿತು. ಅವನು ನನ್ನ ಬಳಿಯಲ್ಲಿ ಇನ್ನೂ ನಿಂತುಕೊಂಡಿದ್ದನು. ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ. ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು. ಈಗ ಅವರು ತಮ್ಮ ಲೈಂಗಿಕ ಪಾಪಗಳನ್ನು ತೆಗೆದುಬಿಡಲಿ ಮತ್ತು ತಮ್ಮ ರಾಜರ ಹೆಣಗಳನ್ನೂ ನನ್ನಿಂದ ದೂರಮಾಡಲಿ. ಆಗ ನಾನು ಅವರೊಂದಿಗೆ ನಿರಂತರವಾಗಿ ವಾಸಿಸುವೆನು.

10 “ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು. 11 ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನ್ನು ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಬೇಕೆಂಬುದನ್ನು, ಪ್ರವೇಶ ದ್ವಾರಗಳು ಮತ್ತು ಹೊರಗೆ ಹೋಗುವ ಬಾಗಿಲುಗಳು ಎಲ್ಲಿರಬೇಕೆಂಬುದನ್ನು ಮತ್ತು ಅವುಗಳ ಮೇಲೆ ಇರಬೇಕಾದ ಎಲ್ಲಾ ಚಿತ್ರಗಳನ್ನು ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನ್ನು, ಕಟ್ಟಳೆಗಳನ್ನು ಅವರಿಗೆ ಬೋಧಿಸಿರಿ. ಅವರು ಎಲ್ಲಾ ಧರ್ಮಬೋಧನೆಗಳನ್ನು ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನ್ನು ಬರೆದಿಡಿರಿ. 12 ಇದು ಆಲಯದ ಕಟ್ಟಳೆ: ಪರ್ವತದ ಮೇಲಿನ ಎಲ್ಲಾ ಪ್ರಾಂತ್ಯದ ಮೇರೆಯೊಳಗಿರುವ ಸ್ಥಳವು ಅತಿ ಪರಿಶುದ್ಧವಾದದ್ದು. ಇದು ಆಲಯದ ಕಟ್ಟಳೆ.

ಮತ್ತಾಯ 23:37-24:14

ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ

(ಲೂಕ 13:34-35)

37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”

ನೆಲಸಮವಾಗಲಿರುವ ಮಹಾದೇವಾಲಯ

(ಮಾರ್ಕ 13:1-31; ಲೂಕ 21:5-33)

24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.

ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.

ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.

“ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International