Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ದಾವೀದ.
141 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
ನನ್ನ ಪ್ರಾರ್ಥನೆಗೆ ಕಿವಿಗೊಡು.
ಬೇಗನೆ ಬಂದು ನನಗೆ ಸಹಾಯಮಾಡು!
2 ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.
3 ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
4 ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
5 ನೀತಿವಂತನು ನನ್ನನ್ನು ಸರಿಪಡಿಸಿದರೆ
ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
6 ಅವರ ಅಧಿಪತಿಗಳು ದೊಬ್ಬಲ್ಪಡಲಿ.
ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.
7 ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
8 ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
9 ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
ಆಗ ನಾನು ತಪ್ಪಿಸಿಕೊಳ್ಳುವೆನು.
21 ದೇವರು ಹೇಳಿದ್ದೇನೆಂದರೆ, “ನಾನು ಮಾಡಿದ್ದನ್ನು ಇತರ ದೇಶಗಳವರು ನೋಡುವಂತೆ ಮಾಡುವೆನು. ಆಗ ಆ ದೇಶದವರು ನನ್ನನ್ನು ಗೌರವಿಸಲು ಪ್ರಾರಂಭಿಸುವರು. ಆ ಶತ್ರುವಿಗೆದುರಾಗಿ ನನ್ನ ಸಾಮರ್ಥ್ಯ ತೋರಿಸಿದುದನ್ನು ಅವರು ನೋಡುವರು. 22 ಆ ದಿವಸದಿಂದ ಇಸ್ರೇಲಿನ ಜನಾಂಗ ನಾನು ಅವರ ಒಡೆಯನಾದ ಯೆಹೋವನೆಂದು ಅರಿಯುವರು. 23 ಎಲ್ಲಾ ಜನಾಂಗಗಳವರಿಗೆ ನಾನು ಯಾಕೆ ಇಸ್ರೇಲರು ಸೆರೆಹಿಡಿಯಲ್ಪಟ್ಟು ಚದರಿಹೋಗುವಂತೆ ಮಾಡಿದೆನು ಎಂದು ತಿಳಿಯುವರು. ನನ್ನ ಜನರು ನನಗೆ ವಿರುದ್ಧವಾಗಿ ತಿರುಗಿ ಬಿದ್ದರು. ಆಗ ನಾನು ಅವರಿಂದ ದೂರ ಹೋದೆನು. ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡಿದೆನು. ಆದ್ದರಿಂದ ಅವರು ರಣರಂಗದಲ್ಲಿ ಮಡಿದರು. 24 ಅವರು ಪಾಪ ಮಾಡಿ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಂಡರು. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆನು. ಅವರಿಂದ ನಾನು ದೂರವಾಗಿ ಅವರಿಗೆ ಸಹಾಯ ಮಾಡಲು ನಿರಾಕರಿಸಿದೆನು.”
25 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಈಗ ನಾನು ಯಾಕೋಬನ ವಂಶದವರನ್ನು ಸೆರೆಯಿಂದ ಬಿಡಿಸಿ ಹಿಂದಕ್ಕೆ ತರುವೆನು. ಇಸ್ರೇಲಿನ ಜನಾಂಗದವರ ಮೇಲೆಲ್ಲಾ ನನ್ನ ದಯೆ ಇರುವದು. ನನ್ನ ಪವಿತ್ರನಾಮದ ಸಲುವಾಗಿ ಅವರನ್ನು ಉದ್ಧರಿಸುವೆನು. 26 ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸ್ವದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ. 27 ಬೇರೆಬೇರೆ ದೇಶಗಳಿಂದ ನಾನು ನನ್ನ ಜನರನ್ನು ಹಿಂದಕ್ಕೆ ತರಿಸುವೆನು. ಅವರ ಶತ್ರುಗಳ ದೇಶದಿಂದ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಅನೇಕ ಜನಾಂಗಗಳು ನಾನು ಎಷ್ಟು ಪವಿತ್ರನೆಂದು ಅರಿತುಕೊಳ್ಳುವರು. 28 ನಾನು ಅವರ ಒಡೆಯನಾದ ಯೆಹೋವನೆಂದು ತಿಳಿಯುವರು. ಯಾಕೆಂದರೆ ನಾನು, ಅವರನ್ನು ಅವರ ಸ್ವದೇಶವನ್ನು ಬಿಟ್ಟು ಸೆರೆಹಿಡಿಯಲ್ಪಟ್ಟವರಾಗಿ ಬೇರೆ ದೇಶಗಳಿಗೆ ಹೋಗುವಂತೆ ಮಾಡಿದೆನು. ಆಮೇಲೆ ತಿರುಗಿ ಅವರನ್ನು ಒಟ್ಟುಗೂಡಿಸಿ ಅವರ ದೇಶಕ್ಕೆ ಹಿಂದಕ್ಕೆ ಕರೆಸಿದೆನು. 29 ನಾನು ಇಸ್ರೇಲ್ ಜನಾಂಗದವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ಅನಂತರ ನಾನು ಎಂದಿಗೂ ಅವರಿಗೆ ವಿಮುಖನಾಗಿರುವದಿಲ್ಲ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಹೊಸ ಆಲಯ
40 ನಾವು ಸೆರೆಹಿಡಿಯಲ್ಪಟ್ಟ ಇಪ್ಪತ್ತೈದನೆ ವರ್ಷದ ಪ್ರಾರಂಭದ ತಿಂಗಳಿನ (ಅಕ್ಟೋಬರ್) ಹತ್ತನೇ ದಿವಸದಲ್ಲಿ ಯೆಹೋವನ ಆತ್ಮನಿಂದ ಪರವಶನಾದೆನು. ಬಾಬಿಲೋನಿಯರು ಜೆರುಸಲೇಮನ್ನು ವಶಪಡಿಸಿಕೊಂಡ ಹದಿನಾಲ್ಕನೇ ವರ್ಷದಲ್ಲಿ ಇದು ಸಂಭವಿಸಿತು. ಆ ದಿವಸದಲ್ಲಿ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನ್ನನ್ನು ಅಲ್ಲಿಗೆ ದರ್ಶನದಲ್ಲಿ ಕೊಂಡೊಯ್ದನು.
2 ದರ್ಶನವೊಂದರಲ್ಲಿ ಯೆಹೋವನು ನನ್ನನ್ನು ಇಸ್ರೇಲ್ ದೇಶಕ್ಕೆ ಒಯ್ದನು. ಆತನು ನನ್ನನ್ನು ಬಹಳ ಉನ್ನತ ಪರ್ವತದ ಬಳಿ ಇರಿಸಿದನು. ನನ್ನೆದುರಿಗಿದ್ದ ಆ ಪರ್ವತ ಒಂದು ನಗರದಂತೆ ಕಂಡಿತು. 3 ಯೆಹೋವನು ನನ್ನನ್ನು ಅಲ್ಲಿಗೆ ಕರೆತಂದನು. ಅಲ್ಲಿ ಒಬ್ಬನು ತಾಮ್ರದಂತೆ ಹೊಳೆಯುತ್ತಿದ್ದನು. ಅವನ ಕೈಯಲ್ಲಿ ಅಳತೆಯ ನೂಲೂ, ಅಳತೆಯ ಕೋಲೂ ಇದ್ದವು. ಅವನು ದ್ವಾರದ ಬಳಿಯಲ್ಲಿ ನಿಂತಿದ್ದನು. 4 ಆಗ ಅವನು ಹೀಗೆ ಹೇಳಿದನು, “ನರಪುತ್ರನೇ, ನೀನು ನಿನ್ನ ಕಣ್ಣು, ಕಿವಿಗಳನ್ನು ಉಪಯೋಗಿಸು, ಇವೆಲ್ಲವನ್ನೂ ಗಮನಿಸಿ ನನ್ನ ಮಾತುಗಳನ್ನು ಕೇಳು. ನಾನು ತೋರಿಸುವ ಪ್ರತಿಯೊಂದು ವಸ್ತುಗಳ ಮೇಲೆ ಚೆನ್ನಾಗಿ ಲಕ್ಷ್ಯವಿಡು. ಯಾಕೆಂದರೆ ಈ ವಿಷಯಗಳನ್ನು ನಿನಗೆ ತೋರಿಸಬೇಕೆಂದೇ ನಿನ್ನನ್ನು ಇಲ್ಲಿಗೆ ತಂದಿರುವೆ. ನೀನು ನೋಡಿದ್ದೆಲ್ಲವನ್ನೂ ಇಸ್ರೇಲ್ ವಂಶದವರಿಗೆ ತಿಳಿಸಬೇಕು.”
ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ
23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.
25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(A)
27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.
31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.
11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.
Kannada Holy Bible: Easy-to-Read Version. All rights reserved. © 1997 Bible League International