Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ದಾವೀದ.
141 ಯೆಹೋವನೇ, ಸಹಾಯಕ್ಕಾಗಿ ನಿನಗೆ ಮೊರೆಯಿಡುತ್ತಿದ್ದೇನೆ.
ನನ್ನ ಪ್ರಾರ್ಥನೆಗೆ ಕಿವಿಗೊಡು.
ಬೇಗನೆ ಬಂದು ನನಗೆ ಸಹಾಯಮಾಡು!
2 ನನ್ನ ಪ್ರಾರ್ಥನೆಯು ನಿನಗೆ ಧೂಪದಂತೆಯೂ
ಸಾಯಂಕಾಲದ ಯಜ್ಞದಂತೆಯೂ ಸಮರ್ಪಕವಾಗಲಿ.
3 ಯೆಹೋವನೇ, ನನ್ನ ಮಾತುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೂ
ವಿವೇಚಿಸಿ ನುಡಿಯುವುದಕ್ಕೂ ನನಗೆ ಸಹಾಯ ಮಾಡು.
4 ಕೆಟ್ಟದ್ದನ್ನು ಮಾಡಲು ನನಗೆ ಅವಕಾಶಕೊಡಬೇಡ.
ಕೆಟ್ಟವರೊಂದಿಗೆ ಸೇರಿ ಕೆಟ್ಟದ್ದನ್ನು ಮಾಡದಂತೆ ನನ್ನನ್ನು ಕಾಪಾಡು.
ಅವರು ಹರ್ಷಿಸುವಂಥವುಗಳಲ್ಲಿ ನಾನು ಪಾಲುಗಾರನಾಗದಂತೆ ನೋಡಿಕೋ.
5 ನೀತಿವಂತನು ನನ್ನನ್ನು ಸರಿಪಡಿಸಿದರೆ
ಅದು ನನಗೇ ಒಳ್ಳೆಯದು.
ನಿನ್ನ ಭಕ್ತರು ನನ್ನನ್ನು ಗದರಿಸಿದರೆ
ಅದು ನನಗೇ ಒಳ್ಳೆಯದು.
ಆದರೆ ಕೆಟ್ಟವರ ಕೆಟ್ಟಕೃತ್ಯಗಳ ವಿರೋಧವಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
6 ಅವರ ಅಧಿಪತಿಗಳು ದೊಬ್ಬಲ್ಪಡಲಿ.
ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.
7 ಜನರು ಹೊಲವನ್ನು ಉತ್ತು ಹೆಂಟೆಗಳನ್ನು ಪುಡಿಮಾಡಿ ಚದರಿಸುವಂತೆಯೇ
ಕೆಟ್ಟವರ ಎಲುಬುಗಳು ಅವರ ಸಮಾಧಿಗಳಲ್ಲಿ ಹರಡಿಕೊಂಡಿರುತ್ತವೆ.
8 ನನ್ನ ಒಡೆಯನಾದ ಯೆಹೋವನೇ, ಸಹಾಯಕ್ಕಾಗಿ ನಿನ್ನನ್ನೇ ಎದುರುನೋಡುವೆನು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ದಯವಿಟ್ಟು ನನ್ನನ್ನು ಮರಣಕ್ಕೀಡು ಮಾಡಬೇಡ.
9 ಕೆಟ್ಟವರು ನನಗೆ ಬಲೆಗಳನ್ನು ಒಡ್ಡಿದ್ದಾರೆ.
ಅವರ ಬೋನುಗಳಿಂದ ನನ್ನನ್ನು ತಪ್ಪಿಸು.
10 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಬೀಳಲಿ.
ಆಗ ನಾನು ತಪ್ಪಿಸಿಕೊಳ್ಳುವೆನು.
ಜೆರುಸಲೇಮಿನ ಚದರಿಸಲ್ಪಟ್ಟ ಜನರ ಕುರಿತು ಪ್ರವಾದನೆ
14 ಯೆಹೋವನ ಸಂದೇಶ ನನಗೆ ದೊರೆಯಿತು: 15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.
16 “ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು. 17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು. 18 ನನ್ನ ಜನರು ಹಿಂದಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನ್ನು ತೆಗೆದುಹಾಕುವರು. 19 ಅವರನ್ನು ಹಿಂದಕ್ಕೆ ಬರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನ್ನು ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನ್ನು ತೆಗೆದು ಮೃದುವಾದ ಹೃದಯವನ್ನಿಡುವೆನು. 20 ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’”
ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು
21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು. 22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನ್ನು ಚಾಚಿ ಆಕಾಶದಲ್ಲಿ ಹಾರಿಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು. 23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಬೆಟ್ಟದ ಮೇಲೆ ನಿಂತಿತು. 24 ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು. 25 ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.
25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(A) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
Kannada Holy Bible: Easy-to-Read Version. All rights reserved. © 1997 Bible League International