Revised Common Lectionary (Complementary)
4 “ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
2 “ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ.
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಪ್ರತಿಯೊಬ್ಬರು ದುಡಿಯಲಿ
6 ಸಹೋದರ ಸಹೋದರಿಯರೇ, ಕೆಲಸ ಮಾಡದ ವಿಶ್ವಾಸಿಯಿಂದ ನೀವು ದೂರವಿರಬೇಕೆಂದು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಧಿಕಾರದಿಂದ ನಿಮಗೆ ಆಜ್ಞಾಪಿಸುತ್ತಿದ್ದೇವೆ. ನಾವು ನೀಡಿದ ಉಪದೇಶವನ್ನು ಅವರು ಅನುಸರಿಸುವುದಿಲ್ಲ. 7 ನಾವು ಜೀವಿಸುವಂತೆಯೇ ನೀವೂ ಜೀವಿಸಬೇಕೆಂದು ನಿಮಗೆ ಗೊತ್ತಿದೆ. ನಾವು ನಿಮ್ಮ ಜೊತೆಯಲ್ಲಿದ್ದಾಗ ಸೋಮಾರಿಗಳಾಗಿರಲಿಲ್ಲ; 8 ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು. 9 “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು. 10 ನಾವು ನಿಮ್ಮ ಸಂಗಡವಿದ್ದಾಗ, “ಕೆಲಸ ಮಾಡದವನು ಊಟವನ್ನೂ ಮಾಡಕೂಡದು” ಎಂಬ ನಿಯಮವನ್ನು ವಿಧಿಸಿದೆವು.
11 ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ. 12 ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ. 13 ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.
ದೇವಾಲಯದ ನಾಶನ
(ಮತ್ತಾಯ 24:1-14; ಮಾರ್ಕ 13:1-13)
5 ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.
6 ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.
7 ಶಿಷ್ಯರಲ್ಲಿ ಕೆಲವರು ಯೇಸುವಿಗೆ, “ಗುರುವೇ, ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಆ ಸಮಯವನ್ನು ಯಾವ ಸೂಚನೆಗಳಿಂದ ತಿಳಿದುಕೊಳ್ಳಬೇಕು?” ಎಂದು ಕೇಳಿದರು.
8 ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ. 9 ಯುದ್ಧಗಳ ಬಗ್ಗೆ ಮತ್ತು ದಂಗೆಗಳ ಬಗ್ಗೆ ನೀವು ಕೇಳುವಾಗ ಹೆದರಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಆ ಕೂಡಲೇ ಅಂತ್ಯ ಬರುವುದಿಲ್ಲ” ಎಂದು ಹೇಳಿದನು.
10 ಬಳಿಕ ಯೇಸು ಅವರಿಗೆ, “ಜನಾಂಗಗಳು ಬೇರೆ ಜನಾಂಗಗಳಿಗೆ ವಿರುದ್ಧವಾಗಿ ಹೋರಾಡುವವು. ರಾಜ್ಯಗಳು ಬೇರೆ ರಾಜ್ಯಗಳಿಗೆ ವಿರುದ್ಧವಾಗಿ ಹೋರಾಡುವವು. 11 ಭೀಕರ ಭೂಕಂಪಗಳಾಗುವವು. ಕ್ಷಾಮಗಳೂ ಉಪದ್ರವಗಳೂ ತಲೆದೋರುವವು. ಭಯಂಕರ ಘಟನೆಗಳೂ ಆಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವವು.
12 “ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು. 13 ಆದರೆ ನನ್ನ ಕುರಿತು ಹೇಳುವುದಕ್ಕೆ ನಿಮಗೆ ಅದು ಸುಸಂದರ್ಭವಾಗಿರುವುದು. 14 ನೀವು ಏನು ಹೇಳಬೇಕೆಂದು ಚಿಂತಿಸಬೇಡಿರಿ. 15 ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ. 16 ನಿಮ್ಮ ತಂದೆತಾಯಿಗಳು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ಸಹ ನಿಮಗೆ ವಿರುದ್ಧವಾಗುವರು. ನಿಮ್ಮಲ್ಲಿ ಕೆಲವರನ್ನು ಅವರು ಕೊಲ್ಲುವರು. 17 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. 18 ಆದರೆ ಇವುಗಳಿಂದ ನೀವೇನೂ ನಾಶವಾಗುವುದಿಲ್ಲ. 19 ನೀವು ನಿಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳುವಿರಿ.
Kannada Holy Bible: Easy-to-Read Version. All rights reserved. © 1997 Bible League International