Revised Common Lectionary (Complementary)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟಿದ್ದು
10 ಕೆರೂಬಿಯರ ತಲೆಗಳ ಮೇಲಿದ್ದ ಗುಮಟದ ಕಡೆಗೆ ನೋಡಿದೆನು. ಆ ಗುಮಟದ ಮೇಲೆ ಇಂದ್ರನೀಲಮಣಿಯಿಂದ ಮಾಡಿದ ಸಿಂಹಾಸನದಂತೆ ಕಾಣುತ್ತಿದ್ದ ಏನೋ ಇತ್ತು. 2 ಆಗ ಸಿಂಹಾಸನದಲ್ಲಿ ಕೂತಿದ್ದಾತನು ನಾರುಮಡಿ ಧರಿಸಿದ್ದವನಿಗೆ, “ಕೆರೂಬಿದೂತರ ಕೆಳಗಿರುವ ಚಕ್ರಗಳ ನಡುವೆ ಹೋಗು. ಕೆರೂಬಿಗಳ ನಡುವೆ ಇರುವ ಉರಿಯುವ ಕೆಂಡಗಳನ್ನು ನಿನ್ನ ಅಂಗೈಗಳಲ್ಲಿ ತುಂಬಿಕೊಂಡು ಜೆರುಸಲೇಮ್ ನಗರದ ಮೇಲೆ ಹರಡು” ಎಂದು ಹೇಳಿದನು.
ನಾನು ನೋಡುತ್ತಿರಲು ಆ ಮನುಷ್ಯನು ಒಳಗೆ ಹೋದನು. 3 ಆ ಮನುಷ್ಯನು ಚಕ್ರಗಳ ನಡುವೆ ಒಳಗೆ ಹೋದಾಗ ಕೆರೂಬಿದೂತರು ಆಲಯದ ದಕ್ಷಿಣಕ್ಕೆ ಇರುವ ಸ್ಥಳದಲ್ಲಿ ನಿಂತಿದ್ದರು. ಒಳಗಿನ ಅಂಗಳವು ಮೋಡದಿಂದ ತುಂಬಿತ್ತು. 4 ಯೆಹೋವನ ಮಹಿಮೆಯು ಕೆರೂಬಿದೂತರ ಮೇಲಿನಿಂದ ಹೊರಟು ಆಲಯದ ಹೊಸ್ತಿಲಿಗೆ ಬಂದಿತು. ಆಗ ಮೋಡವು ಆಲಯದಲ್ಲಿ ತುಂಬಿಕೊಂಡಿತು. ಯೆಹೋವನ ಮಹಿಮೆಯ ಪ್ರಕಾಶವು ಇಡೀ ಅಂಗಳವನ್ನು ತುಂಬಿಕೊಂಡಿತು. 5 ಕೆರೂಬಿದೂತರ ರೆಕ್ಕೆಗಳ ಬಡಿತದ ಶಬ್ದವು ಹೊರಗಿನ ಪ್ರಾಕಾರದ ತನಕ ಕೇಳುತ್ತಿತ್ತು. ಅದು ತುಂಬಾ ಗಟ್ಟಿಯಾದ ಶಬ್ದವಾಗಿತ್ತು. ಸರ್ವಶಕ್ತನಾದ ದೇವರು ಮಾತನಾಡುವಾಗ ಆಗುವ ಗುಡುಗಿನ ಶಬ್ದದಂತಿತ್ತು.
6 ನಾರುಮಡಿ ಧರಿಸಿಕೊಂಡಿದ್ದವನಿಗೆ ದೇವರು, “ಕೆರೂಬಿದೂತರ ಮಧ್ಯದೊಳಗಿಂದ, ಚಕ್ರಗಳ ಮಧ್ಯೆ ಪ್ರವೇಶಿಸಿ ಅಲ್ಲಿಂದ ಉರಿಯುವ ಕೆಂಡಗಳನ್ನು ತೆಗೆದುಕೊ” ಎಂದು ಆಜ್ಞಾಪಿಸಿದಾಗ, ಆ ಮನುಷ್ಯನು ಅಲ್ಲಿಗೆ ಹೋಗಿ ಚಕ್ರಗಳ ಸಮೀಪದಲ್ಲಿ ನಿಂತುಕೊಂಡನು. 7 ಕೆರೂಬಿದೂತರಲ್ಲೊಬ್ಬನು ಅವರ ಮಧ್ಯೆಯಿದ್ದ ಉರಿಯುವ ಕೆಂಡದಲ್ಲಿ ಸ್ವಲ್ಪವನ್ನು ಆ ಮನುಷ್ಯನ ಕೈಗೆ ಸುರಿದನು. ಆ ಮನುಷ್ಯನು ಅಲ್ಲಿಂದ ಹೊರಟನು. 8 ಕೆರೂಬಿದೂತರ ರೆಕ್ಕೆಯ ಕೆಳಗೆ ಮನುಷ್ಯರ ಕೈಗಳಂತೆ ಕಾಣುತ್ತಿದ್ದ ಕೈಗಳಿದ್ದವು.
9 ಆಗ ನಾನು ಅಲ್ಲಿ ನಾಲ್ಕು ಚಕ್ರಗಳಿರುವದನ್ನು ಕಂಡೆನು. ಪ್ರತಿಯೊಬ್ಬ ಕೆರೂಬಿದೂತನ ಬಳಿ ಒಂದು ಚಕ್ರವಿತ್ತು. ಆ ಚಕ್ರಗಳು ಹೊಳೆಯುವ ಹಳದಿ ರತ್ನದಂತೆ ಕಂಡವು. 10 ಅಲ್ಲಿದ್ದ ನಾಲ್ಕು ಚಕ್ರಗಳೂ ಒಂದೇ ಪ್ರಕಾರವಾಗಿದ್ದವು. ಅವು ಚಕ್ರದೊಳಗೆ ಚಕ್ರಗಳಿದ್ದಂತೆ ತೋರುತ್ತಿದ್ದವು. 11 ಅವು ಚಲಿಸುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗಾದರೂ ಅತ್ತಿತ್ತ ತಿರುಗದೆ ಚಲಿಸುತ್ತಿದ್ದವು. 12 ಅವರ ಶರೀರದ ಮೇಲೆಲ್ಲಾ ಕಣ್ಣುಗಳಿದ್ದವು. ಅವರ ಬೆನ್ನಿನ ಮೇಲೆ, ಕೈಗಳ ಮೇಲೆ, ರೆಕ್ಕೆಗಳ ಮೇಲೆ, ಅವರ ಚಕ್ರಗಳ ಮೇಲೆ ಕಣ್ಣುಗಳಿದ್ದವು. ಹೌದು, ಅವರ ನಾಲ್ಕು ಚಕ್ರಗಳ ಮೇಲೂ ಕಣ್ಣುಗಳಿದ್ದವು. 13 ಈ ಚಕ್ರಗಳಿಗೆ “ಚರಕ ಚಕ್ರ” ಎಂಬುದಾಗಿ ಕರೆಯುತ್ತಾರೆಂದು ನನಗೆ ಕೇಳಿಸಿತು.
14 ಪ್ರತೀ ಕೆರೂಬಿದೂತನಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯದು ಮನುಷ್ಯನ ಮುಖ, ಮೂರನೆಯ ಸಿಂಹದ ಮುಖ ಮತ್ತು ನಾಲ್ಕನೆಯ ಗರುಡನ ಮುಖ. 15 ಈ ಜೀವಿಗಳು ಮೊದಲು ನಾನು ಕೆಬಾರ್ ನದಿಯ ಬಳಿ ಕಂಡ ದರ್ಶನದಲ್ಲಿದ್ದ ಕೆರೂಬಿಯರೇ ಆಗಿರಬೇಕು ಎಂದು ಆಗ ನನಗೆ ಮನದಟ್ಟಾಯಿತು. ಬಳಿಕ ಕೆರೂಬಿಗಳು ಮೇಲಕ್ಕೆ ಏರಿದವು. 16 ಅವುಗಳೊಂದಿಗೆ ಚಕ್ರಗಳು ಎತ್ತಲ್ಪಟ್ಟವು. ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಗಾಳಿಯಲ್ಲಿ ಹಾರಿದಾಗ ಅವುಗಳ ಪಕ್ಕದಲ್ಲಿದ್ದ ಚಕ್ರಗಳು ತಮ್ಮ ಸ್ಥಳವನ್ನು ಬದಲಾಯಿಸಲಿಲ್ಲ. 17 ಕೆರೂಬಿದೂತರು ಗಾಳಿಯಲ್ಲಿ ಹಾರಾಡಿದಾಗ ಚಕ್ರಗಳೂ ಅವರೊಂದಿಗೆ ಹೋದವು. ಅವು ನಿಂತಾಗ ಚಕ್ರಗಳೂ ನಿಂತುಬಿಡುತ್ತಿದ್ದವು. ಯಾಕೆಂದರೆ ಜೀವಿಗಳನ್ನು ಹತೋಟಿಯಲ್ಲಿಡುವ ಆತ್ಮವು ಚಕ್ರಗಳಲ್ಲಿತ್ತು.
18 ಆಗ ಆಲಯದ ಹೊಸ್ತಿಲಿನ ಮೇಲಿನಿಂದ ಯೆಹೋವನ ಮಹಿಮೆಯು ಎದ್ದು ಕೆರೂಬಿದೂತರು ನಿಂತಿದ್ದ ಸ್ಥಳದ ಮೇಲೆ ನಿಂತುಕೊಂಡಿತು. 19 ಕೆರೂಬಿದೂತರು ರೆಕ್ಕೆಗಳನ್ನು ಚಾಚಿ ಹಾರಿದವು. ಅವು ಆಲಯವನ್ನು ಬಿಟ್ಟುಹೋಗುವದನ್ನು ನೋಡಿದೆನು. ಚಕ್ರಗಳು ಅವುಗಳೊಂದಿಗೆ ಹೋದವು. ಅವು ಯೆಹೋವನಾಲಯದ ಪೂರ್ವದ ಬಾಗಿಲ ಬಳಿ ನಿಂತವು. ಇಸ್ರೇಲಿನ ದೇವರ ಮಹಿಮೆಯು ಅವುಗಳ ಮೇಲೆ ಇತ್ತು.
ದೇವರ ರಾಜ್ಯವು ನಿಮ್ಮೊಳಗಿದೆ
(ಮತ್ತಾಯ 24:23-28,37-41)
20 ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು.
ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ. 21 ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.
22 ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ. 23 ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.
ಯೇಸು ತಿರುಗಿ ಬರುವಾಗ ಲೋಕದ ಸ್ಥಿತಿ
24 “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು. 25 ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.
26 “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಈ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು. 27 ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು.
28 “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು. 29 ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು. 30 ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು.
31 “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ. 32 ಲೋಟನ ಹೆಂಡತಿಗೆ[a] ಸಂಭವಿಸಿದ್ದು ಜ್ಞಾಪಕವಿದೆಯೇ?
33 “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 34 ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 35 ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.” 36 [b]
37 ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು.
ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International