Revised Common Lectionary (Complementary)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಸೌಲನ ಕುಟುಂಬಕ್ಕಾದ ದಂಡನೆ
21 ದಾವೀದನ ಕಾಲದಲ್ಲಿ ಒಮ್ಮೆ ಮೂರು ವರ್ಷಗಳವರೆಗೆ ಬರಗಾಲವಿತ್ತು. ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಯೆಹೋವನು, “ಸೌಲನು ಮತ್ತು ಕೊಲೆಗಾರರಾದ ಅವನ ಕುಟುಂಬದವರು ಈ ಬರಗಾಲಕ್ಕೆ ಕಾರಣ. ಸೌಲನು ಗಿಬ್ಯೋನ್ಯರನ್ನು ಕೊಂದದ್ದರಿಂದ ಈಗಿನ ಬರಗಾಲವು ಬಂದಿದೆ” ಎಂದು ಹೇಳಿದನು. 2 (ಗಿಬ್ಯೋನ್ಯರು ಇಸ್ರೇಲರಲ್ಲ, ಅವರು ಇನ್ನೂ ಜೀವಂತವಾಗಿ ಉಳಿದಿರುವ ಅಮೋರಿಯರ ಕುಟುಂಬದವರು. ಗಿಬ್ಯೋನ್ಯರನ್ನು ಹಿಂಸಿಸುವುದಿಲ್ಲವೆಂದು ಇಸ್ರೇಲರು ಪ್ರಮಾಣ ಮಾಡಿದ್ದರು. ಆದರೆ ಸೌಲನು ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ಹೆಚ್ಚಿನ ಅಭಿಮಾನವನ್ನಿಟ್ಟಿದ್ದನು. ಆದ್ದರಿಂದ ಅವನು ಗಿಬ್ಯೋನ್ಯರನ್ನು ಕೊಲ್ಲಲು ಪ್ರಯತ್ನಿಸಿದನು.)
ರಾಜನಾದ ದಾವೀದನು ಗಿಬ್ಯೋನ್ಯರನ್ನು ಒಟ್ಟಾಗಿ ಕರೆದು ಅವರೊಂದಿಗೆ ಮಾತನಾಡಿದನು. 3 ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಏನು ಮಾಡಲಿ? ಇಸ್ರೇಲಿನ ಪಾಪವನ್ನು ತೆಗೆದುಹಾಕಲು, ಯೆಹೋವನ ಜನರನ್ನು ನೀವು ಹರಸಲು, ನಾನು ನಿಮಗೆ ಏನು ಮಾಡಬೇಕು?” ಎಂದು ಕೇಳಿದನು.
4 ಗಿಬ್ಯೋನ್ಯರು ದಾವೀದನಿಗೆ, “ಸೌಲನ ಬೆಳ್ಳಿಬಂಗಾರವಾಗಲಿ ಅವನ ಮನೆಯಾಗಲಿ ನಮಗೆ ಬೇಕಾಗಿಲ್ಲ ಮತ್ತು ಇಸ್ರೇಲಿನ ಯಾವ ವ್ಯಕ್ತಿಯನ್ನೂ ಕೊಲ್ಲಲು ನಮಗೆ ಹಕ್ಕಿಲ್ಲ” ಎಂದು ಹೇಳಿದರು.
ದಾವೀದನು, “ಆದರೆ ನಿಮಗಾಗಿ ನಾನು ಏನು ಮಾಡಲಿ?” ಎಂದನು.
5 ಗಿಬ್ಯೋನ್ಯರು ರಾಜನಾದ ದಾವೀದನಿಗೆ, “ಸೌಲನು ನಮ್ಮ ವಿರುದ್ಧ ಯೋಜಿಸಿ ಇಸ್ರೇಲಿನ ದೇಶದಲ್ಲಿ ಉಳಿದಿದ್ದ ನಮ್ಮ ಜನರನ್ನೆಲ್ಲ ನಾಶಪಡಿಸಲು ಪ್ರಯತ್ನಿಸಿದನು. 6 ಅವನ ಏಳು ಮಂದಿ ಗಂಡುಮಕ್ಕಳನ್ನು ನಮ್ಮ ಬಳಿಗೆ ಕಳುಹಿಸು. ಸೌಲನು ವಾಸವಾಗಿದ್ದ ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕುತ್ತೇವೆ” ಎಂದು ಹೇಳಿದರು.
ರಾಜನಾದ ದಾವೀದನು, “ಆ ಗಂಡುಮಕ್ಕಳನ್ನು ನಾನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದನು. 7 ಆದರೆ ಯೋನಾತಾನನ ಮಗನಾದ ಮೆಫೀಬೋಶೆತನನ್ನು ರಾಜನು ರಕ್ಷಿಸಿದನು. (ಯೋನಾತಾನನು ಸೌಲನ ಮಗ.) ದಾವೀದನು ಯೆಹೋವನ ಹೆಸರಿನಲ್ಲಿ ಯೋನಾತಾನನಿಗೆ ವಾಗ್ದಾನ ಮಾಡಿದ್ದನು.[a] ಆದ್ದರಿಂದ ಮೆಫೀಬೋಶೆತನಿಗೆ ಅವರಿಂದ ತೊಂದರೆಯಾಗದಂತೆ ನೋಡಿಕೊಂಡನು. 8 ಆದರೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಸೌಲನ ಗಂಡುಮಕ್ಕಳಾದ ಅರ್ಮೋನ್ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಗಂಡುಮಕ್ಕಳನ್ನೂ ಮೆಹೋಲದ ಬರ್ಜಿಲ್ಲೈಯ ಮಗನಾದ ಅದಿಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ್ದ ಐದು ಮಂದಿ ಗಂಡುಮಕ್ಕಳನ್ನೂ ತೆಗೆದುಕೊಂಡು ಗಿಬ್ಯೋನ್ಯರಿಗೆ ಒಪ್ಪಿಸಿದನು. 9 ಗಿಬ್ಯೋನ್ಯರು ಈ ಏಳು ಮಂದಿ ಗಂಡುಮಕ್ಕಳನ್ನು ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿ ಒಟ್ಟಿಗೆ ಸತ್ತರು. ಅವರನ್ನು ಸುಗ್ಗಿಯ ಆರಂಭದ ದಿನಗಳಲ್ಲಿ ಕೊಲ್ಲಲಾಯಿತು. (ಬಾರ್ಲಿಯ ಸುಗ್ಗಿಯು ಆಗ ತಾನೇ ಆರಂಭವಾಗಿತ್ತು.)
ರಿಚ್ಪಳು ತನ್ನ ಮಕ್ಕಳ ದೇಹಗಳನ್ನು ಕಾಯುತ್ತಿದ್ದಳು
10 ಅಯ್ಯಾಹನ ಮಗಳಾದ ರಿಚ್ಪಳು ಶೋಕವಸ್ತ್ರವನ್ನು ಕಲ್ಲಿನ ಮೇಲೆ ಹಾಸಿದಳು. ಸುಗ್ಗಿಯ ಆರಂಭದಿಂದ, ಆ ದೇಹಗಳ ಮೇಲೆ ಮಳೆಯು ಬೀಳುವ ತನಕ, ಆಕೆ ಆ ವಸ್ತ್ರದ ಮೇಲೆ ಕುಳಿತುಕೊಂಡಳು. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಹಗಲು ಹೊತ್ತಿನಲ್ಲಿಯೂ, ಕಾಡಿನ ಪ್ರಾಣಿಗಳು ರಾತ್ರಿಯ ಹೊತ್ತಿನಲ್ಲಿಯೂ ತನ್ನ ಮಕ್ಕಳ ದೇಹಗಳನ್ನು ಮುಟ್ಟಲು ರಿಚ್ಪಳು ಅವಕಾಶಕೊಡಲಿಲ್ಲ.
11 ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡುತ್ತಿರುವುದನ್ನು ಜನರು ದಾವೀದನಿಗೆ ತಿಳಿಸಿದರು. 12 ಆಗ ದಾವೀದನು ಸೌಲನ ಮತ್ತು ಯೋನಾತಾನನ ಮೂಳೆಗಳನ್ನು ತರುವುದಕ್ಕೋಸ್ಕರ ಯಾಬೇಷ್‌ಗಿಲ್ಯಾದಿಗೆ ಹೋದನು. ಸೌಲ ಮತ್ತು ಯೋನಾತಾನರನ್ನು ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವರ ಶವಗಳನ್ನು ಬೇತ್‌ಷೆಯಾನಿನ ಬೀದಿಯಲ್ಲಿ ತೂಗುಹಾಕಿದ್ದರು. ಯಾಬೇಷ್‌ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. 13 ದಾವೀದನು ಯಾಬೇಷ್‌ಗಿಲ್ಯಾದಿನಿಂದ ಸೌಲನ ಮತ್ತು ಅವನ ಮಗನಾದ ಯೋನಾತಾನನ ಮೂಳೆಗಳನ್ನೂ ನೇತುಹಾಕಲ್ಪಟ್ಟಿದ್ದ ಸೌಲನ ಏಳು ಮಂದಿ ಮಕ್ಕಳ ದೇಹಗಳನ್ನೂ ಜನರು ಒಟ್ಟಾಗಿ ಸೇರಿಸಿದರು. 14 ಸೌಲ ಮತ್ತು ಅವನ ಮಗನಾದ ಯೋನಾತಾನರ ಮೂಳೆಗಳನ್ನು ಅವರು ಬೆನ್ಯಾಮೀನಿನ ಪ್ರದೇಶದಲ್ಲಿ ಸಮಾಧಿ ಮಾಡಿದರು. ಸೌಲನ ತಂದೆಯಾದ ಕೀಷನ ಸ್ಮಶಾನದಲ್ಲಿ ಈ ದೇಹಗಳನ್ನು ಜನರು ಸಮಾಧಿ ಮಾಡಿದರು. ರಾಜನು ಆಜ್ಞಾಪಿಸಿದ್ದನ್ನೆಲ್ಲ ಜನರು ಮಾಡಿದರು. ನಂತರ ಆ ದೇಶದ ಜನರ ಪ್ರಾರ್ಥನೆಯನ್ನು ದೇವರು ಆಲಿಸಿದನು.
3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ. 4 ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.
ದೇವರ ತೀರ್ಪನ್ನು ಕುರಿತು ಪೌಲನ ವಿವರಣೆ
5 ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ಆ ರಾಜ್ಯಕ್ಕೋಸ್ಕರವೇ. 6 ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ. 7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಈ ಶಾಂತಿಯನ್ನು ದಯಪಾಲಿಸುತ್ತಾನೆ. 8 ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. 9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ. 10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಆ ಸಮೂಹದಲ್ಲಿರುವಿರಿ.
11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಆ ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಈ ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ. 12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಆ ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.
Kannada Holy Bible: Easy-to-Read Version. All rights reserved. © 1997 Bible League International