Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 98

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

1 ಸಮುವೇಲನು 28:3-19

ಸೌಲನು ಮತ್ತು ಏಂದೋರಿನ ಯಕ್ಷಿಣಿ

ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು.

ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು.

ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು. ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು. ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ. ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು.

ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು.

ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು.

ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು.

10 ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು.

11 ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು.

ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು.

12 ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು.

13 ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು.

ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ[a] ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು.

14 ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು.

ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು.

ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು. 15 ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು.

ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು.

16 ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ? 17 ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು. 18 ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. 19 ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು.

ರೋಮ್ನಗರದವರಿಗೆ 1:18-25

ಎಲ್ಲಾ ಜನರು ತಪ್ಪು ಮಾಡಿದ್ದಾರೆ

18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.

20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.

21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.

24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International