Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ಯೋಬನು 25-26

ಯೋಬನಿಗೆ ಬಿಲ್ದದನ ಉತ್ತರ

25 ಬಳಿಕ ಶೂಹ ದೇಶದ ಬಿಲ್ದದನು ಉತ್ತರಕೊಟ್ಟನು:

“ದೇವರು ಸರ್ವಾಧಿಪತಿ.
    ಎಲ್ಲರೂ ತನ್ನಲ್ಲಿ ಭಯಭಕ್ತಿಯುಳ್ಳವರಾಗುವಂತೆ ಆತನು ಮಾಡುತ್ತಾನೆ.
    ಆತನು ತನ್ನ ಪರಲೋಕರಾಜ್ಯದಲ್ಲಿ ಸಮಾಧಾನವನ್ನು ನೆಲೆಗೊಳಿಸುವನು.
ಯಾವನೂ ಆತನ ಸೈನ್ಯಗಳನ್ನು ಲೆಕ್ಕಿಸಲಾರನು.
    ಆತನ ಸೂರ್ಯನು ಜನರೆಲ್ಲರ ಮೇಲೆ ಉದಯಿಸುವನು.
ದೇವರಿಗೆ ಹೋಲಿಸಿದರೆ ಯಾವನೂ ನೀತಿವಂತನಲ್ಲ.
    ಯಾವ ಮನುಷ್ಯನೂ ಪರಿಶುದ್ಧನಾಗಿರಲು ಸಾಧ್ಯವಿಲ್ಲ.
ದೇವರ ದೃಷ್ಟಿಯಲ್ಲಿ ಚಂದ್ರನು ಸಹ ಪ್ರಕಾಶವಾಗಿಲ್ಲ;
    ನಕ್ಷತ್ರಗಳು ಸಹ ಪರಿಶುದ್ಧವಲ್ಲ.
ಹೀಗಿರಲು, ಮನುಷ್ಯನು ಎಷ್ಟೋ ಅಪರಿಶುದ್ಧನು!
    ಅವನು ಕೇವಲ ನಿಷ್ಪ್ರಯೋಜಕವಾದ ಹುಳವಿನಂತಿದ್ದಾನೆ!”

ಬಿಲ್ದದನಿಗೆ ಯೋಬನ ಉತ್ತರ

26 ಆಗ ಯೋಬನು ಹೀಗೆ ಉತ್ತರಕೊಟ್ಟನು:

“ನಿನ್ನಿಂದ ಬಲಹೀನನಿಗೆ ಎಷ್ಟೋ ಸಹಾಯವಾಯಿತು!
    ನೀನು ನನ್ನ ಬಲಹೀನವಾದ ತೋಳುಗಳನ್ನು ಮತ್ತೆ ಬಲಗೊಳಿಸಿದೆ!
ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ!
    ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ.[a]
ಇವುಗಳನ್ನು ತಿಳಿಸಲು ನಿನಗೆ ಯಾರು ಸಹಾಯ ಮಾಡಿದವರು?
    ಯಾರ ಆತ್ಮವು ನಿನ್ನನ್ನು ಪ್ರೇರೇಪಿಸಿತು?

“ಸತ್ತವರ ಆತ್ಮಗಳು
    ಭೂಗರ್ಭದಲ್ಲಿರುವ ಜಲರಾಶಿಗಳಲ್ಲಿ ನಡುಗುತ್ತವೆ.
ದೇವರಿಗೆ ಪಾತಾಳವೂ ಸ್ಪಷ್ಟವಾಗಿ ಕಾಣುತ್ತದೆ;
    ಮರಣವು ಆತನಿಗೆ ಮರೆಯಾಗಿಲ್ಲ.
ದೇವರು ಶೂನ್ಯದ ಮೇಲೆ ಉತ್ತರದಿಕ್ಕಿನ ಆಕಾಶವನ್ನು ವಿಸ್ತರಿಸಿದನು.
    ಆತನು ಭೂಮಿಯನ್ನು ಯಾವ ಆಧಾರವೂ ಇಲ್ಲದೆ ತೂಗುಹಾಕಿದ್ದಾನೆ.
ದೇವರು ಮೋಡಗಳನ್ನು ನೀರಿನಿಂದ ತುಂಬಿಸುವನು.
    ಆದರೆ ಮೋಡಗಳು ನೀರಿನ ಭಾರದಿಂದ ಒಡೆದುಹೋಗದಂತೆ ನೋಡಿಕೊಳ್ಳುವನು.
ದೇವರು ತನ್ನ ಮೋಡಗಳನ್ನು ಹರಡಿ
    ಪೂರ್ಣಚಂದ್ರನನ್ನು ಮರೆಮಾಡುವನು.
10 ದೇವರು ಸಮುದ್ರದ ಮೇಲೆ ಬೆಳಕು ಮತ್ತು ಕತ್ತಲೆಗಳು ಸಂಧಿಸುವ ಸ್ಥಳದಲ್ಲಿ
    ಕ್ಷಿತಿಜವನ್ನು ಗಡಿರೇಖೆಯನ್ನಾಗಿ ಎಳೆದಿದ್ದಾನೆ.
11 ದೇವರು ಗದರಿಸುವಾಗ
    ಆಕಾಶಮಂಡಲದ ಸ್ತಂಭಗಳು ಭಯದಿಂದ ನಡುಗುತ್ತವೆ.
12 ದೇವರ ಶಕ್ತಿಯು ಸಮುದ್ರವನ್ನು ಪ್ರಶಾಂತಗೊಳಿಸುವುದು.
    ದೇವರ ಶಕ್ತಿಯು ರಹಬನ[b] ಸಹಾಯಕರನ್ನು ನಾಶಮಾಡುವುದು.
13 ಆತನ ಉಸಿರು ಆಕಾಶಮಂಡಲವನ್ನು ಶುಭ್ರಗೊಳಿಸುವುದು.
    ಆತನ ಜ್ಞಾನವು ಓಡಿಹೋಗಲು ಪ್ರಯತ್ನಿಸಿದ ರಹಬನನ್ನು ನಾಶಮಾಡುವುದು.
14 ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ.
    ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ.
    ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”

ಯೋಹಾನ 5:19-29

ಯೇಸುವಿಗೆ ದೇವರ ಅಧಿಕಾರವಿದೆ

19 ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ. 20 ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. 21 ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.

22 “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ. 23 ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.

24 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು. 26 ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು, 27 ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.

28 “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ. 29 ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International