Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

ಯೋಬನು 21:1

ಯೋಬನ ಉತ್ತರ

21 ಬಳಿಕ ಯೋಬನು ಉತ್ತರಕೊಟ್ಟನು:

ಯೋಬನು 21:17-34

17 ಎಷ್ಟು ಸಲ ದುಷ್ಟರ ದೀಪವು ಆರಿಹೋಯಿತು?
    ಎಷ್ಟು ಸಲ ದುಷ್ಟರಿಗೆ ನಾಶನವು ಬರುವುದು?
    ದೇವರು ಎಷ್ಟು ಸಲ ಅವರ ಮೇಲೆ ಕೋಪಗೊಂಡು ಅವರನ್ನು ದಂಡಿಸುವನು?
18 ಗಾಳಿಯು ಹುಲ್ಲನ್ನೂ ಬಿರುಗಾಳಿಯು ಹೊಟ್ಟನ್ನೂ ಬಡಿದುಕೊಂಡು ಹೋಗುವಂತೆ
    ದೇವರು ದುಷ್ಟರನ್ನು ಎಷ್ಟು ಸಲ ಬಡಿದುಕೊಂಡು ಹೋಗುವನು?
19 ‘ದುಷ್ಟನ ಮಕ್ಕಳಿಗೆ ದೇವರು ದಂಡನೆಯನ್ನು ಶೇಖರಿಸಿಡುತ್ತಾನೆ’ ಎಂದು ನೀವು ಹೇಳುತ್ತೀರಿ.
    ಇಲ್ಲ! ದೇವರು ದುಷ್ಟನನ್ನೇ ದಂಡಿಸಲಿ.
    ಆಗ, ತನ್ನ ಸ್ವಂತ ಪಾಪಗಳಿಗಾಗಿ ತನಗೆ ದಂಡನೆಯಾಯಿತೆಂದು
    ಅವನು ತಿಳಿದುಕೊಳ್ಳುವನು.
20 ದುಷ್ಟನು ತನ್ನ ಸ್ವಂತ ನಾಶನವನ್ನು ತಾನೇ ನೋಡಲಿ;
    ಸರ್ವಶಕ್ತನಾದ ದೇವರ ಕೋಪವನ್ನು ಅನುಭವಿಸಲಿ.
21 ದುಷ್ಟನ ಜೀವಿತವು ಮುಗಿದುಹೋದ ಮೇಲೆ,
    ತಾನು ಬಿಟ್ಟುಹೋಗಿರುವ ತನ್ನ ಕುಟುಂಬದ ಬಗ್ಗೆ ಅವನು ಚಿಂತಿಸುವುದಿಲ್ಲ.

22 “ದೇವರಿಗೆ ಜ್ಞಾನವನ್ನು ಉಪದೇಶಿಸಲು ಯಾರಿಂದಲೂ ಆಗದು.
    ಮೇಲಿನ ಲೋಕದಲ್ಲಿರುವ ಜನರಿಗೂ ಸಹ ದೇವರು ನ್ಯಾಯತೀರಿಸುವನು.
23 ಒಬ್ಬನು ತನ್ನ ಜೀವಮಾನವೆಲ್ಲಾ ಯಶಸ್ವಿಯಾಗಿ ಬಾಳಿ ಸಾಯುವನು.
    ಅವನು ಸುರಕ್ಷಿತವೂ ಸುಖಕರವೂ ಆದ ಬಾಳ್ವೆಯನ್ನು ನಡೆಸಿದನು.
24 ಅವನ ದೇಹವು ಚೆನ್ನಾಗಿ ಪೋಷಿಸಲ್ಪಟ್ಟಿತು,
    ಅವನ ಎಲುಬುಗಳು ಮಜ್ಜೆಯಿಂದ ಇನ್ನೂ ಸಾರವಾಗಿರುವುದು.
25 ಆದರೆ ಮತ್ತೊಬ್ಬನು ಕಷ್ಟಕರವಾದ ಜೀವನದ ನಂತರ ಮನಗುಂದಿದವನಾಗಿ ಸಾಯುವನು.
    ಅವನು ಯಾವ ಸುಖವನ್ನೂ ಅನುಭವಿಸಲಿಲ್ಲ.
26 ಕೊನೆಯಲ್ಲಿ ಅವರಿಬ್ಬರೂ ಧೂಳಿನಲ್ಲಿ ಒಟ್ಟಿಗೆ ಮಲಗಿಕೊಳ್ಳುವರು.
    ಹುಳಗಳು ಅವರಿಬ್ಬರನ್ನೂ ಮುತ್ತಿಕೊಳ್ಳುವವು.

27 “ಆದರೆ, ನಿಮ್ಮ ಆಲೋಚನೆಗಳನ್ನು ಬಲ್ಲೆ,
    ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ನಾನು ಬಲ್ಲೆ.
28 ‘ನೀತಿವಂತನ ಮನೆಯು ಎಲ್ಲಿದೆ?
    ದುಷ್ಟನು ವಾಸವಾಗಿರುವುದು ಎಲ್ಲಿ?’ ಎಂದು ನೀವು ಕೇಳಬಹುದು.

29 “ನೀವು ಖಂಡಿತವಾಗಿಯೂ ಪ್ರಯಾಣಿಕರನ್ನು ಕೇಳಿದ್ದೀರಿ.
    ನೀವು ಖಂಡಿತವಾಗಿಯೂ ಅವರ ವರದಿಯನ್ನು ಒಪ್ಪಿಕೊಳ್ಳುವಿರಿ.
30 ಅಪಾಯ ಬಂದಾಗ ದುಷ್ಟನು ಪಾರಾಗುವನು;
    ದೇವರ ಕೋಪವು ತೋರಿಬರುವ ದಿನದಲ್ಲಿ ಅವನು ತಪ್ಪಿಸಿಕೊಳ್ಳುವನು.
31 ದುಷ್ಟನ ಕೆಟ್ಟಕಾರ್ಯದ ಬಗ್ಗೆ ಅವನ ಮುಖದೆದುರಿನಲ್ಲಿ ಯಾರೂ ಟೀಕಿಸುವುದಿಲ್ಲ.
    ಅವನು ಮಾಡಿದ ಕೇಡಿಗಾಗಿ ಯಾರೂ ಅವನನ್ನು ದಂಡಿಸುವುದಿಲ್ಲ.
32 ದುಷ್ಟನನ್ನು ಸಮಾಧಿಗೆ ಹೊತ್ತುಕೊಂಡು ಹೋದಾಗ
    ಅವನ ಸಮಾಧಿಯ ಸಮೀಪದಲ್ಲಿ ಕಾವಲುಗಾರರು ನಿಂತುಕೊಳ್ಳುವರು.
33 ಆ ದುಷ್ಟನಿಗೆ ಕಣಿವೆಯ ಮಣ್ಣು ಸಿಹಿಯಾಗಿರುವುದು.
    ಅವನ ಶವಸಂಸ್ಕಾರದ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಳ್ಳುವರು.

34 “ಆದ್ದರಿಂದ ನೀವು ನಿಮ್ಮ ಬರಿದಾದ ಮಾತುಗಳಿಂದ ನನ್ನನ್ನು ಸಂತೈಸಲಾರಿರಿ.
    ನಿಮ್ಮ ಉತ್ತರಗಳು ಕೇವಲ ಸುಳ್ಳೇ ಆಗಿವೆ.”

2 ಯೋಹಾನ

ಸಭಾಹಿರಿಯನು, ದೇವರಿಂದ ಆಯ್ಕೆಯಾದ ಅಮ್ಮನವರಿಗೆ ಮತ್ತು ಆಕೆಯ ಮಕ್ಕಳಿಗೆ ಬರೆಯುವ ಪತ್ರ.

ನಾನು ನಿಮ್ಮೆಲ್ಲರನ್ನು ಸತ್ಯದಲ್ಲಿ ಪ್ರೀತಿಸುತ್ತೇನೆ. ಸತ್ಯವನ್ನು ತಿಳಿದಿರುವ ಜನರೆಲ್ಲರೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ನಿಮಿತ್ತ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಈ ಸತ್ಯವು ನಮ್ಮಲ್ಲಿ ಸದಾಕಾಲ ಇರುವುದು.

ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿ ನಮ್ಮೊಂದಿಗಿರುತ್ತವೆ. ನಾವು ಈ ಆಶೀರ್ವಾದಗಳನ್ನು ಸತ್ಯದ ಮತ್ತು ಪ್ರೀತಿಯ ಮೂಲಕ ಪಡೆಯುತ್ತೇವೆ.

ನಿಮ್ಮ ಮಕ್ಕಳಲ್ಲಿ ಕೆಲವರ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಯಿತು. ತಂದೆಯಾದ ದೇವರು ನಮಗೆ ಆಜ್ಞಾಪಿಸಿದ ಸತ್ಯಮಾರ್ಗವನ್ನು ಅವರು ಅನುಸರಿಸುತ್ತಿರುವುದರಿಂದ ನನಗೆ ಸಂತೋಷವಾಯಿತು. ಪ್ರಿಯ ಅಮ್ಮನವರೇ, ಈಗ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಹೊಸ ಆಜ್ಞೆಯಾಗಿರದೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ. ಆತನು ಆಜ್ಞಾಪಿಸಿದ ಮಾರ್ಗದಲ್ಲಿ ಜೀವಿಸುವುದೇ ಪ್ರೀತಿ. ನೀವು ಪ್ರೀತಿಯಿಂದ ಬಾಳಬೇಕೆಂಬುದೇ ದೇವರ ಆಜ್ಞೆ. ನೀವು ಆರಂಭದಿಂದಲೂ ಈ ಆಜ್ಞೆಯನ್ನು ಕೇಳಿರುವಿರಿ.

ಈಗ ಲೋಕದಲ್ಲಿ ಅನೇಕ ಸುಳ್ಳುಬೋಧಕರಿದ್ದಾರೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಮನುಷ್ಯನಾಗಿ ಬಂದನೆಂಬುದನ್ನು ಈ ಸುಳ್ಳುಬೋಧಕರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದವನು ಸುಳ್ಳುಬೋಧಕನಾಗಿದ್ದಾನೆ ಮತ್ತು ಯೇಸು ಕ್ರಿಸ್ತನ ವೈರಿಯಾಗಿದ್ದಾನೆ. ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.

ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ ಹೋಗುವವನು ದೇವರನ್ನು ಹೊಂದಿಲ್ಲ. ಆದರೆ ಆ ಉಪದೇಶದಲ್ಲಿ ನೆಲೆಗೊಂಡಿರುವವನು ತಂದೆಯನ್ನೂ ಮಗನನ್ನೂ ಹೊಂದಿದ್ದಾನೆ. 10 ನಿಮ್ಮ ಬಳಿಗೆ ಬರುವವನು ಈ ಉಪದೇಶವನ್ನು ಹೊಂದಿಲ್ಲದಿದ್ದರೆ ಅವನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಅವನನ್ನು ಸ್ವಾಗತಿಸಬೇಡಿ. 11 ನೀವು ಅವನನ್ನು ಸ್ವಾಗತಿಸಿದರೆ ಅವನ ಕೆಟ್ಟಕಾರ್ಯಕ್ಕೆ ನೀವೂ ಸಹಾಯ ಮಾಡಿದಂತಾಗುವುದು.

12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ. 13 ದೇವರಿಂದ ಆಯ್ಕೆಗೊಂಡವಳಾದ ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International