Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17:1-9

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.

ಧರ್ಮೋಪದೇಶಕಾಂಡ 25:5-10

“ಇಬ್ಬರು ಅಣ್ಣತಮ್ಮಂದಿರು ಜೀವಿಸುತ್ತಿರುವಾಗ ಒಬ್ಬನು ಮಕ್ಕಳಿಲ್ಲದೆ ಸತ್ತುಹೋದರೆ ಅವನ ಹೆಂಡತಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. ಅವಳಿಗೆ ಅವನಿಂದ ಹುಟ್ಟುವ ಮೊದಲನೆಯ ಮಗು ಅವಳ ಮೊದಲನೆಯ ಗಂಡನಿಗೆ ಸೇರಿದ್ದೆಂದು ಪರಿಗಣಿಸಲ್ಪಡಬೇಕು. ಹೀಗೆ ಸತ್ತುಹೋದ ಅಣ್ಣನ ವಂಶವು ಮುಂದುವರಿಯುವುದು. ಆದರೆ ಮೈದುನನು, ಸತ್ತುಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡದೆಹೋದಲ್ಲಿ, ಆಕೆಯು ಊರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರನ್ನು ಇಸ್ರೇಲಿನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ ಆಗ ಊರಿನ ಹಿರಿಯರು ಆ ಮೈದುನನನ್ನು ಕರಿಸಿ ಅವನೊಂದಿಗೆ ಮಾತನಾಡಬೇಕು. ಅವನು ತನ್ನ ನಿರ್ಧಾರವನ್ನು ಬದಲಾಯಿಸದೆ, ‘ನನಗೆ ಅವಳನ್ನು ಹೆಂಡತಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, ಅವನ ಅಣ್ಣನ ಹೆಂಡತಿಯು ಮುಂದೆ ಬಂದು ಹಿರಿಯರ ಸಮ್ಮುಖದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಶವನ್ನು ಕೊಡದವನಿಗೆ ಇದೇ ಗತಿ’ ಎಂದು ಹೇಳಬೇಕು. 10 ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು.

ಅಪೊಸ್ತಲರ ಕಾರ್ಯಗಳು 22:22-23:11

22 ಪೌಲನು ಈ ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು. 23 ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು. 24 ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು. 25 ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು.

26 ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು.

27 ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು.

ಪೌಲನು, “ಹೌದು” ಎಂದು ಉತ್ತರಕೊಟ್ಟನು.

28 ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು.

ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು.

29 ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು.

ಪೌಲನು ಯೆಹೂದ್ಯನಾಯಕರೊಂದಿಗೆ ಮಾತಾಡುವನು

30 ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು.

23 ಪೌಲನು ಯೆಹೂದ್ಯರ ನ್ಯಾಯಸಭೆಯನ್ನು ದೃಷ್ಟಿಸಿ ನೋಡಿ, “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿದನು. ಪ್ರಧಾನಯಾಜಕನಾದ ಅನನೀಯನು ಅಲ್ಲಿದ್ದನು. ಪೌಲನು ಹೇಳಿದ್ದನ್ನು ಕೇಳಿದ ಅನನೀಯನು ಪೌಲನ ಪಕ್ಕದಲ್ಲಿ ನಿಂತಿದ್ದವರಿಗೆ ಪೌಲನ ಬಾಯಿಯ ಮೇಲೆ ಹೊಡೆಯಲು ಹೇಳಿದನು. ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.

ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.

ಪೌಲನು, “ಸಹೋದರರೇ, ಈ ಮನುಷ್ಯನು ಪ್ರಧಾನಯಾಜಕನೆಂದು ನನಗೆ ಗೊತ್ತಿರಲ್ಲಿಲ್ಲ. ‘ನಿಮ್ಮ ಜನನಾಯಕರ ಬಗ್ಗೆ ಕೆಟ್ಟಮಾತುಗಳುನ್ನು ಆಡಬಾರದು’(A) ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ” ಎಂದು ಹೇಳಿದನು.

ಸಭೆಯಲ್ಲಿದ್ದ ಜನರಲ್ಲಿ ಕೆಲವರು ಸದ್ದುಕಾಯರಾಗಿದ್ದರು; ಮತ್ತೆ ಕೆಲವರು ಫರಿಸಾಯರಾಗಿದ್ದರು. ಆದ್ದರಿಂದ ಪೌಲನು, “ನನ್ನ ಸಹೋದರರೇ, ನಾನು ಫರಿಸಾಯನು! ನನ್ನ ತಂದೆಯೂ ಫರಿಸಾಯನಾಗಿದ್ದನು! ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!” ಎಂದು ಕೂಗಿ ಹೇಳಿದನು.

ಪೌಲನು ಹೀಗೆ ಹೇಳಿದಾಗ, ಫರಿಸಾಯರಿಗೂ ಸದ್ದುಕಾಯರಿಗೂ ದೊಡ್ಡ ವಾಗ್ವಾದವಾಯಿತು. ಸಭೆಯಲ್ಲಿ ಭೇದ ಉಂಟಾಯಿತು. (ಸತ್ತವರಿಗೆ ಪುನರುತ್ಥಾನವಿಲ್ಲ; ದೇವದೂತರುಗಳಾಗಲಿ ಆತ್ಮಗಳಾಗಲಿ ಇಲ್ಲವೇ ಇಲ್ಲ ಎಂಬುದು ಸದ್ದುಕಾಯರ ನಂಬಿಕೆ. ಫರಿಸಾಯರ ನಂಬಿಕೆ ಇದಕ್ಕೆ ತದ್ವಿರುದ್ಧವಾಗಿದೆ.) ಈ ಯೆಹೂದ್ಯರೆಲ್ಲರೂ ಹೆಚ್ಚುಹೆಚ್ಚು ಗಟ್ಟಿಯಾಗಿ ಆರ್ಭಟಿಸಿತೊಡಗಿದರು. ಫರಿಸಾಯರ ಗುಂಪಿಗೆ ಸೇರಿದ್ದ ಕೆಲವು ಮಂದಿ ಧರ್ಮೋಪದೇಶಕರು ಎದ್ದುನಿಂತುಕೊಂಡು, “ಈ ಮನುಷ್ಯನಲ್ಲಿ ನಮಗೇನೂ ತಪ್ಪು ಕಂಡುಬರುತ್ತಿಲ್ಲ! ದಮಸ್ಕಕ್ಕೆ ಹೋಗುವ ದಾರಿಯಲ್ಲಿ ದೇವದೂತನಾಗಲಿ ಆತ್ಮವಾಗಲಿ ಅವನೊಂದಿಗೆ ಮಾತಾಡಿದ್ದಿರಬೇಕು!” ಎಂದು ವಾದಿಸಿದರು.

10 ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.

11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International