Revised Common Lectionary (Complementary)
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
9 ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”
14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”
16 ದೇವರು ದುಷ್ಟರಿಗೆ ಹೀಗೆನ್ನುವನು:
“ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
ಯೆಹೋವನಿಗೆ ದಯೆ ಕರುಣೆಗಳು ಬೇಕಾಗಿವೆ
7 ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು. 2 ಬೇತೇಲಿನ ಜನರು ಸರೆಚರ್, ರೆಗೆಮ್ ಮೆಲೆಕ್ ಮತ್ತು ಅವರ ಜನರನ್ನು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಲು ಕಳುಹಿಸಿದರು. 3 ಅವರು ಸರ್ವಶಕ್ತನಾದ ಯೆಹೋವನ ಆಲಯದಲ್ಲಿದ್ದ ಯಾಜಕರ ಬಳಿಗೂ ಪ್ರವಾದಿಗಳ ಬಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರ್ಷಗಳಿಂದ ಆಲಯವು ಕೆಡವಲ್ಪಟ್ಟದ್ದಕ್ಕಾಗಿ ನಮ್ಮ ದುಃಖವನ್ನು ತೋರಿಸಿದೆವು. ಪ್ರತೀ ವರ್ಷದ ಐದನೇ ತಿಂಗಳಿನಲ್ಲಿ ಉಪವಾಸಕ್ಕಾಗಿ ಮತ್ತು ರೋದಿಸುವುದಕ್ಕಾಗಿ ನಾವು ಪ್ರತ್ಯೇಕ ಸಮಯವನ್ನು ನೇಮಿಸುತ್ತಿದ್ದೆವು. ನಾವು ಇದನ್ನು ಹೀಗೆಯೇ ಮುಂದುವರಿಸಬೇಕೋ?”
4 ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಈ ಸಂದೇಶವು ದೊರಕಿತು: 5 “ಯಾಜಕರಿಗೂ, ದೇಶದ ಇತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರ್ಷಗಳ ತನಕ ನೀವು ಐದನೇ ಮತ್ತು ಏಳನೇ ತಿಂಗಳಿನಲ್ಲಿ ನಿಮ್ಮ ದುಃಖವನ್ನು ಉಪವಾಸ ಮಾಡವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಆ ಉಪವಾಸವು ನಿಜವಾಗಿಯೂ ನನಗಾಗಿಯೋ? ಇಲ್ಲ! 6 ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೋ? ಇಲ್ಲ. ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಇತ್ತು. 7 ಇದನ್ನು ತಿಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪಯೋಗಿಸಿದ್ದನು. ಜೆರುಸಲೇಮ್ ಜನಭರಿತವಾದ ಪಟ್ಟಣವಾಗಿದ್ದಾಗ ದೇವರು ಇದನ್ನು ಜನರಿಗೆ ತಿಳಿಸಿದ್ದನು. ಜೆರುಸಲೇಮಿನ ಸುತ್ತಮುತ್ತ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತಿಳಿಸಿದ್ದನು. ನೆಗೆವ್‌ನಲ್ಲಿಯೂ ಪಶ್ಚಿಮದ ಪರ್ವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತಿಳಿಸಿದ್ದನು.”
8 ಇದು ಜೆಕರ್ಯನಿಗೆ ಯೆಹೋವನ ಸಂದೇಶ:
9 “ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
‘ನೀವು ಯಾವದು ನ್ಯಾಯವೋ ಯಾವುದು ಯೋಗ್ಯವೋ ಅದನ್ನು ಮಾಡಬೇಕು.
ನೀವು ಒಬ್ಬರಿಗೊಬ್ಬರು ದಯೆಕರುಣೆಗಳನ್ನು ತೋರಿಸಬೇಕು.
10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ.
ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ.
ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!’”
11 ಆದರೆ ಆ ಜನರು ಈ ಮಾತುಗಳನ್ನು ಕೇಳಲಿಲ್ಲ.
ಆತನು ಹೇಳಿದ ಹಾಗೆ ನಡೆಯಲಿಲ್ಲ.
ದೇವರು ಹೇಳುವುದು ತಮಗೆ ಕೇಳದಂತೆ
ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
12 ಅವರು ಹಠಮಾರಿಗಳಾಗಿದ್ದರು.
ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ.
ಸರ್ವಶಕ್ತನಾದ ಯೆಹೋವನು ತನ್ನ ಆತ್ಮನಿಂದ
ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು.
ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ.
ಆದ್ದರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋಪಗೊಂಡನು.
13 ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ
ಅವರು ನನಗೆ ಕಿವಿಗೊಡಲಿಲ್ಲ.
ಆದ್ದರಿಂದ ಈಗ ಅವರು ನನ್ನನ್ನು ಕರೆದರೂ
ನಾನು ಅವರಿಗೆ ಉತ್ತರಕೊಡುವುದಿಲ್ಲ.
14 ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು.
ಆ ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ.
ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿಹೋಗುವಾಗ
ಆ ಸುಂದರವಾದ ದೇಶವು ನಾಶವಾಗುವದು.”
5 ನೀವು ಈಗಾಗಲೇ ತಿಳಿದುಕೊಂಡಿರುವ ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳಲು ನಾನು ನಿಮಗೆ ಸಹಾಯ ಮಾಡಲಿಚ್ಛಿಸುತ್ತೇನೆ. ಪ್ರಭುವು ತನ್ನ ಜನರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ಅವರನ್ನು ರಕ್ಷಿಸಿದನೆಂಬುದನ್ನು ನೆನಪು ಮಾಡಿಕೊಳ್ಳಿರಿ. ತರುವಾಯ ಪ್ರಭುವು ನಂಬಿಕೆಯಿಲ್ಲದ ಜನರೆಲ್ಲರನ್ನೂ ನಾಶಪಡಿಸಿದನು. 6 ದೇವದೂತರು ಅಧಿಕಾರವನ್ನು ಹೊಂದಿದ್ದರೂ ಅದನ್ನು ಉಳಿಸಿಕೊಳ್ಳಲಾರದೆ ಸ್ವಂತ ವಾಸಸ್ಥಾನವನ್ನು ಬಿಟ್ಟುಹೋದದ್ದನ್ನು ನೆನಸಿಕೊಳ್ಳಿರಿ. ಆದ್ದರಿಂದ ಪ್ರಭುವು ಈ ದೇವದೂತರನ್ನು ಅಂಧಕಾರದಲ್ಲಿಟ್ಟನು. ಅವರನ್ನು ಶಾಶ್ವತವಾದ ಬೇಡಿಗಳಿಂದ ಬಂಧಿಸಲಾಯಿತು. ಮಹಾದಿನದಂದು ಅವರಿಗೆ ತೀರ್ಪು ನೀಡುವುದಕ್ಕಾಗಿ ಆತನು ಅವರನ್ನು ಅಲ್ಲಿಟ್ಟಿದ್ದಾನೆ. 7 ಸೊದೋಮ್ ಮತ್ತು ಗೊಮೋರ ನಗರಗಳನ್ನೂ ಅವುಗಳ ಸುತ್ತಲಿನ ಪಟ್ಟಣಗಳನ್ನೂ ನೆನಪು ಮಾಡಿಕೊಳ್ಳಿರಿ. ಅವುಗಳೂ ಆ ದೇವದೂತರಂತಾದವು. ಆ ಪಟ್ಟಣಗಳಲ್ಲಿ ಲೈಂಗಿಕ ಪಾಪಗಳು ಮತ್ತು ಕೆಟ್ಟಕಾರ್ಯಗಳು ತುಂಬಿಕೊಂಡಿದ್ದವು. ಅವರು ನಿತ್ಯವಾದ ಬೆಂಕಿಯ ದಂಡನೆಯಿಂದ ಸಂಕಟಪಡುವರು. ಅವರಿಗೆ ನೀಡಿದ ದಂಡನೆಯು ನಮಗೊಂದು ದೃಷ್ಟಾಂತವಾಗಿದೆ.
8 ನಿಮ್ಮ ಸಭೆಯಲ್ಲಿ ಪ್ರವೇಶಿಸಿರುವ ಜನರಿಗೂ ಇದೇ ರೀತಿಯಾಗುವುದು. ಅವರ ಕನಸುಗಳೇ ಅವರಿಗೆ ಮಾರ್ಗದರ್ಶಿಯಾಗಿವೆ. ಅವರು ಪಾಪಗಳಿಂದಲೇ ತಮ್ನನ್ನು ಮಲಿನ ಮಾಡಿಕೊಳ್ಳುತ್ತಾರೆ. ಅವರು ಪ್ರಭುವಿನ ಅಧಿಕಾರವನ್ನು ತಿರಸ್ಕರಿಸುತ್ತಾರೆ; ಪ್ರಭಾವದಿಂದ ಕೂಡಿದ ದೇವದೂತರ ವಿರುದ್ಧ ಕೆಟ್ಟದ್ದನ್ನು ಹೇಳುತ್ತಾರೆ. 9 ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.
10 ಆದರೆ ಈ ಜನರು ತಮಗೆ ಅರ್ಥವಾಗದ್ದನ್ನೂ ಟೀಕಿಸುತ್ತಾರೆ. ಅವರಿಗೂ ಸ್ವಲ್ಪ ಅರ್ಥವಾಗುತ್ತದೆ. ಆದರೆ ಅವರು ವಿವೇಕಶೂನ್ಯ ಪ್ರಾಣಿಗಳಂತೆ ಸಹಜಪ್ರವೃತ್ತಿಯಿಂದ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಹೊರತು ವಿವೇಚನೆಯಿಂದ ಅರ್ಥಮಾಡಿಕೊಳ್ಳುವುದಿಲ್ಲ. ಇವುಗಳೇ ಅವರನ್ನು ನಾಶಮಾಡುತ್ತವೆ. 11 ಅವರಿಗೆ ದುರ್ಗತಿಯಾಗುವುದು. ಈ ಜನರು ಕಾಯಿನನ ಮಾರ್ಗವನ್ನು ಅನುಸರಿಸುತ್ತಾರೆ. ಇವರು ದ್ರವ್ಯ ಸಂಪಾದನೆಗಾಗಿ, ಬಿಳಾಮನ ತಪ್ಪುಮಾರ್ಗದಲ್ಲಿ ನಡೆಯಲು ತಮ್ಮನ್ನೇ ಒಪ್ಪಿಸಿಕೊಟ್ಟಿದ್ದಾರೆ. ಕೋರಹನು ಮಾಡಿದಂತೆ ಈ ಜನರೂ ದೇವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಅವರು ಕೋರಹನಂತೆ ನಾಶವಾಗುತ್ತಾರೆ.
12 ನಿಮ್ಮ ಅನ್ಯೋನ್ಯತೆಯ ಭೋಜನದಲ್ಲಿ ಈ ಜನರು ಮುಳುಗಿಹೋದ ಬಂಡೆಗಳಂತಿದ್ದಾರೆ. ಅವರು ಭಯವಿಲ್ಲದೆ ನಿಮ್ಮ ಜೊತೆಯಲ್ಲಿ ತಿನ್ನುತ್ತಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಕುರುಬರಾಗಿದ್ದಾರೆ. ಅವರು ನೀರಿಲ್ಲದ ಮೋಡಗಳಂತಿದ್ದಾರೆ. ಗಾಳಿಯು ಆ ಮೋಡಗಳನ್ನು ಬಡಿದುಕೊಂಡು ಹೋಗುವುದು. ಅವರು ಕಾಲಕ್ಕೆ ತಕ್ಕಂತೆ ಫಲಬಿಡದ ಮತ್ತು ಬೇರುಸಹಿತ ಕಿತ್ತುಬಂದು ಉರುಳಿಹೋದ ಮರಗಳಿಂತಿದ್ದಾರೆ. 13 ಇವರು ಸಮುದ್ರದಲ್ಲಿನ ಭೀಕರವಾದ ಅಲೆಗಳಂತಿದ್ದಾರೆ. ಈ ಅಲೆಗಳು ನೊರೆಯನ್ನು ಕಾರುವಂತೆ ಇವರು ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುತ್ತಾರೆ. ಈ ಜನರು ಆಕಾಶದಲ್ಲಿ ಅಲೆಯುವ ನಕ್ಷತ್ರಗಳಂತಿದ್ದಾರೆ. ಇವರಿಗಾಗಿ ಶಾಶ್ವತವಾದ ಕಾರ್ಗತ್ತಲಿನ ಸ್ಥಳವನ್ನು ಕಾದಿರಿಸಲಾಗಿದೆ.
14 ಆದಾಮನ ಏಳನೆಯ ತಲೆಮಾರಿನವನಾದ ಹನೋಕನು ಈ ಜನರನ್ನು ಕುರಿತು ಹೀಗೆ ಹೇಳಿದ್ದಾನೆ: “ಇಗೋ, ಪ್ರಭುವು ತನ್ನ ಲಕ್ಷಾಂತರ ಪರಿಶುದ್ಧ ದೂತರೊಂದಿಗೆ ಬರುತ್ತಿದ್ದಾನೆ. 15 ಪ್ರಭುವು ಪ್ರತಿಯೊಬ್ಬರಿಗೂ ನ್ಯಾಯತೀರಿಸುತ್ತಾನೆ. ಭಕ್ತಿಹೀನರು ತನಗೆ ವಿರುದ್ಧವಾಗಿ ಮಾಡಿದ ಎಲ್ಲಾ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತನಗೆ ವಿರುದ್ಧವಾಗಿ ಆಡಿದ ಎಲ್ಲಾ ದೂಷಣೆಗಳನ್ನು ಖಂಡಿಸಲು ಆತನು ಬರುತ್ತಾನೆ.”
16 ಈ ದುರ್ಬೋಧಕರಾದರೋ ಗುಣುಗುಟ್ಟುವವರೂ ತಪ್ಪು ಹುಡುಕುವವರೂ ದುರಾಶೆಗಳಿಗೆ ಬಲಿಯಾದವರೂ ಬಡಾಯಿಕೊಚ್ಚುವವರೂ ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರೂ ಆಗಿದ್ದಾರೆ.
ಎಚ್ಚರಿಕೆ ಮತ್ತು ಮಾಡಬೇಕಾದ ಕಾರ್ಯಗಳು
17 ಪ್ರಿಯ ಸ್ನೇಹಿತರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಪೊಸ್ತಲರು ಮುಂಚೆ ಏನು ಹೇಳಿದರೆಂಬುದನ್ನು ನೆನಪು ಮಾಡಿಕೊಳ್ಳಿ. 18 ಅಪೊಸ್ತಲರು ನಿಮಗೆ, “ಅಂತ್ಯಕಾಲದಲ್ಲಿ ದೇವರನ್ನು ಕುರಿತು ನಗುವ ಜನರಿರುತ್ತಾರೆ” ಎಂದು ಹೇಳಿದರು. ಈ ಜನರು ತಮ್ಮ ಇಚ್ಛೆಗನುಸಾರವಾದ ಮತ್ತು ದೇವರಿಗೆ ವಿರುದ್ಧವಾದವುಗಳನ್ನು ಮಾತ್ರ ಮಾಡುವವರಾಗಿರುತ್ತಾರೆ. 19 ಈ ಜನರು ನಿಮ್ಮಲ್ಲಿ ಭೇದವನ್ನು ಹುಟ್ಟಿಸುತ್ತಾರೆ. ಈ ಜನರು ತಮ್ಮ ಪಾಪಸ್ವಭಾವದ ಅಪೇಕ್ಷೆಯಂತೆ ಮಾತ್ರ ಮಾಡುತ್ತಾರೆ. ಅವರಲ್ಲಿ ಪವಿತ್ರಾತ್ಮನಿಲ್ಲ.
20 ಆದರೆ ಪ್ರಿಯ ಸ್ನೇಹಿತರೇ, ನೀವು ನಿಮ್ಮ ಅತಿಪರಿಶುದ್ಧ ನಂಬಿಕೆಯ ಮೂಲಕ ದೃಢವಾಗಿರಿ. ಪವಿತ್ರಾತ್ಮಭರಿತರಾಗಿ ಪ್ರಾರ್ಥಿಸಿರಿ. 21 ದೇವರ ಪ್ರೀತಿಯಲ್ಲಿ ನೆಲೆಗೊಂಡಿರಿ. ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಭುವಾದ ಯೇಸು ಕ್ರಿಸ್ತನ ಕರುಣೆಯನ್ನೇ ಎದುರುನೋಡುತ್ತಿರಿ.
Kannada Holy Bible: Easy-to-Read Version. All rights reserved. © 1997 Bible League International