Revised Common Lectionary (Complementary)
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
9 ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”
14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”
16 ದೇವರು ದುಷ್ಟರಿಗೆ ಹೀಗೆನ್ನುವನು:
“ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
ನೆಹೆಮೀಯನ ಕಡೇ ಆಜ್ಞೆಗಳು
13 ಆ ದಿವಸ ಎಲ್ಲಾ ಜನರಿಗೆ ಕೇಳಿಸುವಂತೆ ಮೋಶೆಯ ಗ್ರಂಥಗಳನ್ನು ಓದಲಾಯಿತು. ಅದರಲ್ಲಿ ಈ ಆಜ್ಞೆಯು ಬರೆಯಲ್ಪಟ್ಟಿದ್ದನ್ನು ಕಂಡುಕೊಂಡರು. ಅದೇನೆಂದರೆ: ದೇವರ ಸಭೆಯಲ್ಲಿ ಯಾವ ಅಮ್ಮೋನ್ಯನಾಗಲಿ ಮೋವಾಬ್ಯನಾಗಲಿ ಇರಕೂಡದು. 2 ಯಾಕೆಂದರೆ ಅವರು ಇಸ್ರೇಲರಿಗೆ ಆಹಾರವನ್ನಾಗಲಿ ನೀರನ್ನಾಗಲಿ ಕೊಟ್ಟಿರಲಿಲ್ಲ. ಅಲ್ಲದೆ ಅವರು ಬಿಳಾಮನಿಗೆ ಹಣಕೊಟ್ಟು ಇಸ್ರೇಲರನ್ನು ಶಪಿಸುವಂತೆ ಮಾಡಿದರು. ಆದರೆ ನಮ್ಮ ದೇವರು ಆ ಶಾಪವನ್ನು ನಮಗೆ ಆಶೀರ್ವಾದವಾಗುವಂತೆ ಮಾಡಿದರು. 3 ಇಸ್ರೇಲರು ದೇವರ ಕಟ್ಟಳೆಯನ್ನು ಕೇಳಿ ಅದಕ್ಕೆ ವಿಧೇಯರಾದರು. ಅನ್ಯರ ಸಂತತಿಯವರಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡರು.
23 ಆ ದಿನಗಳಲ್ಲಿ ಕೆಲವು ಮಂದಿ ಯೆಹೂದ್ಯರು ಅಷ್ಡೋದ್, ಅಮ್ಮೋನ್, ಮೋವಾಬ್ ಊರುಗಳಿಂದ ಹೆಣ್ಣನ್ನು ತಂದು ಮದುವೆ ಮಾಡಿಕೊಂಡದ್ದು ನನ್ನ ನೆನಪಿಗೆ ಬಂತು. 24 ಅವರಿಗೆ ಹುಟ್ಟಿದ ಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಯೆಹೂದ್ಯರ ಭಾಷೆಯ ಜ್ಞಾನವೇ ಇರಲಿಲ್ಲ. ಅವರು ಅಷ್ಡೋದ್, ಅಮ್ಮೋನ್, ಮೋವಾಬ್, ದೇಶಗಳ ಭಾಷೆಗಳನ್ನಾಡುತ್ತಿದ್ದರು. 25 “ನೀವು ತಪ್ಪು ಕೆಲಸಮಾಡಿದಿರಿ” ಎಂದು ಅವರನ್ನು ಶಪಿಸಿದೆನು. ಕೆಲವರಿಗೆ ಹೊಡೆದೆನು; ಕೆಲವರ ಕೂದಲು ಎಳೆದು ಕಿತ್ತುಬಿಟ್ಟೆನು. ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಲು ಅವರನ್ನು ಒತ್ತಾಯಪಡಿಸಿ, “ನೀವು ಆ ಜನರ ಹೆಣ್ಣುಮಕ್ಕಳನ್ನು ಮದುವೆಯಾಗಬಾರದು. ಅನ್ಯರ ಹೆಣ್ಣುಮಕ್ಕಳು ನಿಮ್ಮ ಗಂಡುಮಕ್ಕಳನ್ನು ಮದುವೆಯಾಗದಂತೆ ನೋಡಿಕೊಳ್ಳಿರಿ. 26 ಇಂಥ ಮದುವೆಗಳಿಂದಾಗಿ ಸೊಲೊಮೋನನು ಪಾಪಕ್ಕೆ ಒಳಗಾದನು ಎಂಬುದು ನಿಮಗೆ ತಿಳಿಯದೋ? ಅವನಂಥ ವೈಭವಶಾಲಿ ಅರಸನು ಯಾವ ರಾಜ್ಯದಲ್ಲಿಯೂ ಇರಲಿಲ್ಲ. ದೇವರು ಸೊಲೊಮೋನನನ್ನು ಪ್ರೀತಿಸಿದನು. ಇಡೀ ಇಸ್ರೇಲಿಗೆ ಅವನನ್ನು ಅರಸನನ್ನಾಗಿ ಮಾಡಿದನು. ಅಂಥವನೂ ಅನ್ಯಸ್ತ್ರೀಯರಿಂದಾಗಿ ಪಾಪ ಮಾಡಿದನು. 27 ಈಗ ನೀವು ಸಹ ಅನ್ಯಸ್ತ್ರೀಯರನ್ನು ಮದುವೆಯಾಗಿ ಭಯಂಕರವಾದ ಪಾಪಗಳನ್ನು ಮಾಡುತ್ತಿದ್ದೀರಿ. ನೀವು ದೇವರಿಗೆ ವಿಧೇಯರಾಗಲಿಲ್ಲ” ಎಂದು ಹೇಳಿದೆನು.
28 ಪ್ರಧಾನ ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನಿನ ಸನ್ಬಲ್ಲಟನಿಗೆ ಅಳಿಯನಾದನು. ನಾನು ಅವನನ್ನು ಆ ಸ್ಥಳದಿಂದ ಹೊರಗೆ ಓಡಿಸಿಬಿಟ್ಟೆನು.
29 ನನ್ನ ದೇವರೇ, ಆ ಮನುಷ್ಯರನ್ನು ಶಿಕ್ಷಿಸು. ಅವರು ಯಾಜಕತ್ವವನ್ನು ಹೊಲಸು ಮಾಡಿದ್ದಾರೆ. ಅದನ್ನು ಅವರು ಸಾಮಾನ್ಯವೆಂದೆಣಿಸಿದ್ದಾರೆ. ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ನೀನು ಮಾಡಿದ ಒಡಂಬಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ. 30 ನಾನು ಯಾಜಕರನ್ನೂ ಲೇವಿಯರನ್ನೂ ಶುದ್ಧರನ್ನಾಗಿ ಮಾಡಿಕೊಳ್ಳುವಂತೆ ಆಜ್ಞಾಪಿಸಿದೆನು. ಅವರಲ್ಲಿದ್ದ ಅನ್ಯರನ್ನು, ಪರರ ಬೋಧನೆಗಳನ್ನು ನಾನು ಅವರಿಂದ ತೆಗೆದುಹಾಕಿದೆನು. ಲೇವಿಯರಿಗೂ ಯಾಜಕರಿಗೂ ಅವರವರ ಕರ್ತವ್ಯಗಳನ್ನೂ ಜವಾಬ್ದಾರಿಕೆಗಳನ್ನೂ ತಿಳಿಸಿದೆನು. 31 ಜನರು ಕಟ್ಟಿಗೆಯನ್ನೂ ಪ್ರಥಮಫಲಗಳನ್ನೂ ಸರಿಯಾದ ಸಮಯದಲ್ಲಿ ತರುವಂತೆ ನಾನು ಆಜ್ಞಾಪಿಸಿದೆನು.
ನನ್ನ ದೇವರೇ, ಈ ಒಳ್ಳೆಯ ಕಾರ್ಯಗಳನ್ನೆಲ್ಲಾ ಮಾಡಿದ ನನ್ನನ್ನು ಮರೆಯಬೇಡ.
9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ. 11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ”(A) ಎಂದು ಪವಿತ್ರ ಗ್ರಂಥ ಹೇಳುತ್ತದೆ.
Kannada Holy Bible: Easy-to-Read Version. All rights reserved. © 1997 Bible League International