Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 32:1-7

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.

ಯೆಶಾಯ 1:1-9

ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.

ಸ್ವಜನರ ವಿರುದ್ಧವಾಗಿ ದೇವರ ದೂರು

ಭೂಮ್ಯಾಕಾಶಗಳೇ, ಯೆಹೋವನ ಮಾತನ್ನು ಆಲಿಸಿರಿ! ಯೆಹೋವನು ಹೇಳುತ್ತಿದ್ದಾನೆ:

“ನಾನು ಸಾಕಿ ಸಲಹಿದ ಮಕ್ಕಳೇ
    ನನಗೆ ದ್ರೋಹಮಾಡಿದ್ದಾರೆ.
ಎತ್ತು ತನ್ನ ದಣಿಯನ್ನು ತಿಳಿದದೆ;
    ಕತ್ತೆಯು ತನ್ನ ದಣಿಯ ಕೊಟ್ಟಿಗೆಯನ್ನು ತಿಳಿದದೆ.
ಆದರೆ ಇಸ್ರೇಲರು ನನ್ನನ್ನು ತಿಳಿದೇ ಇಲ್ಲ.
    ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.”

ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.

ನಾನು ನಿಮ್ಮನ್ನು ಯಾಕೆ ಶಿಕ್ಷಿಸುತ್ತಲೇ ಇರಬೇಕು? ನಾನು ನಿಮ್ಮನ್ನು ಶಿಕ್ಷಿಸಿದೆನು, ಆದರೆ ನೀವು ಬದಲಾಗಲಿಲ್ಲ. ನೀವು ನನಗೆ ವಿರುದ್ಧವಾಗಿ ಏಳುತ್ತಲೇ ಇದ್ದೀರಿ. ಈಗ ಪ್ರತಿಯೊಂದು ತಲೆಯೂ ಪ್ರತಿಯೊಂದು ಹೃದಯವೂ ರೋಗಕ್ಕೆ ಬಲಿಯಾಗಿದೆ. ನಿಮ್ಮ ಅಂಗಾಲಿನಿಂದ ಹಿಡಿದು ನಡುನೆತ್ತಿಯವರೆಗೂ ನಿಮ್ಮ ದೇಹದಲ್ಲೆಲ್ಲಾ ಗಾಯಗಳೂ ಬಾಸುಂಡೆಗಳೂ ಹುಣ್ಣುಗಳೂ ತುಂಬಿಕೊಂಡಿವೆ. ಆದರೆ ಆ ಹುಣ್ಣುಗಳಿಗೆ ನೀವು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ; ಅವುಗಳನ್ನು ಒರೆಸಲಿಲ್ಲ, ಕಟ್ಟಲಿಲ್ಲ.

ನಿಮ್ಮ ದೇಶವು ಹಾಳಾಗಿದೆ; ನಿಮ್ಮ ನಗರಗಳು ಬೆಂಕಿಯಿಂದ ಸುಡಲ್ಪಟ್ಟಿವೆ. ನಿಮ್ಮ ಶತ್ರುಗಳು ನಿಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ; ಅನ್ಯದೇಶವು ಶತ್ರುಸೈನ್ಯದಿಂದ ಹಾಳಾಗುವಂತೆಯೇ, ನಿಮ್ಮ ದೇಶವೂ ಹಾಳಾಗಿದೆ.

ಜೆರುಸಲೇಮಿಗೆ ಎಚ್ಚರಿಕೆ

ಚೀಯೋನ್ ನಗರಿಯು ದ್ರಾಕ್ಷಿತೋಟದಲ್ಲಿರುವ ಜನಶೂನ್ಯವಾದ ಡೇರೆಯಂತಿದೆ; ಸೌತೆಯ ಹೊಲದಲ್ಲಿ ಪಾಳುಬಿದ್ದಿರುವ ಮನೆಯಂತಿದೆ; ಶತ್ರುಗಳಿಗೆ ಸೋತುಹೋದ ನಗರದಂತಿದೆ. ಆದರೆ ಸರ್ವಶಕ್ತನಾದ ಯೆಹೋವನು ಸ್ವಲ್ಪ ಮಂದಿಯನ್ನಾದರೂ ಉಳಿಸಿ ಅಲ್ಲಿ ವಾಸಿಸುವಂತೆ ಮಾಡಿದ್ದಾನೆ. ನಾವು ಸೊದೋಮ್ ಗೊಮೋರ ಪಟ್ಟಣಗಳಂತೆ ಸಂಪೂರ್ಣವಾಗಿ ನಾಶವಾಗಲಿಲ್ಲ.

ಯೋಹಾನ 8:39-47

39 ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.

ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40 ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41 ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.

ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.

42 ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43 ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44 ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.

45 “ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47 ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International