Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 32:1-7

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.

ಜ್ಞಾನೋಕ್ತಿಗಳು 15:8-11

ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.

ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.

10 ನೀತಿಮಾರ್ಗವನ್ನು ತೊರೆದವನಿಗೆ ಮಹಾದಂಡನೆಯಾಗುವುದು; ಶಿಕ್ಷಣ, ಗದರಿಕೆಯನ್ನು ದ್ವೇಷಿಸುವವನು ನಾಶವಾಗುವನು.

11 ಮೃತ್ಯುಲೋಕದಲ್ಲಿ ನಡೆಯುತ್ತಿರುವುದು ಯೆಹೋವನಿಗೆ ತಿಳಿದಿದೆ. ಜನರ ಹೃದಯಗಳಲ್ಲಿರುವ ಆಲೋಚನೆಗಳು ಸಹ ಆತನಿಗೆ ಗೊತ್ತಿವೆ.

ಜ್ಞಾನೋಕ್ತಿಗಳು 15:24-33

24 ಜ್ಞಾನಿಯ ಕಾರ್ಯಗಳು ಅವನನ್ನು ಯಶಸ್ಸಿಗೆ ನಡೆಸುತ್ತವೆ; ಅವು ಅವನನ್ನು ಮರಣದ ಹಾದಿಯಿಂದ ತಪ್ಪಿಸುತ್ತವೆ.

25 ಅಹಂಕಾರಿಗಳ ಆಸ್ತಿಯನ್ನು ಯೆಹೋವನು ನಾಶಗೊಳಿಸುತ್ತಾನೆ; ಆದರೆ ವಿಧವೆಯರ ಆಸ್ತಿಯನ್ನು ಕಾಪಾಡುವನು.

26 ಯೆಹೋವನು ದುರಾಲೋಚನೆಗಳನ್ನು ದ್ವೇಷಿಸುವನು; ಕನಿಕರದ ಮಾತುಗಳಲ್ಲಾದರೋ ಸಂತೋಷಪಡುವನು.

27 ದುರಾಶೆಪಡುವವನು ತನ್ನ ಕುಟುಂಬಕ್ಕೆ ಆಪತ್ತನ್ನು ಬರಮಾಡಿಕೊಳ್ಳುವನು. ಲಂಚ ತೆಗೆದುಕೊಳ್ಳದವನಿಗೆ ಯಾವ ಸಮಸ್ಯೆಯೂ ಇರುವುದಿಲ್ಲ.

28 ಒಳ್ಳೆಯವರು ಎಚ್ಚರಿಕೆಯಿಂದ ಯೋಚಿಸಿ ಉತ್ತರ ಕೊಡುವರು. ದುಷ್ಟರಾದರೋ ಯೋಚಿಸದೆ ಮಾತಾಡುವರು; ಅದರಿಂದ ಜನರಿಗೆ ಕೇವಲ ತೊಂದರೆಯಷ್ಟೇ.

29 ಯೆಹೋವನು ದುಷ್ಟರಿಗೆ ಬಹುದೂರ. ಶಿಷ್ಟರ ಪ್ರಾರ್ಥನೆಯನ್ನಾದರೋ ಆತನು ಯಾವಾಗಲೂ ಕೇಳುತ್ತಾನೆ.

30 ನಗುಮುಖವು ಜನರನ್ನು ಸಂತೋಷಗೊಳಿಸುವುದು; ಒಳ್ಳೆಯ ಸುದ್ದಿಯಿಂದ ಜನರ ಆರೋಗ್ಯ ಹೆಚ್ಚುವುದು.

31 ತನ್ನ ತಪ್ಪನ್ನು ಎಚ್ಚರಿಕೆಯಿಂದ ಕೇಳುವವನು ಬಹು ಜ್ಞಾನಿ.

32 ಶಿಕ್ಷೆಯನ್ನು ಒಪ್ಪದವನು ತನಗೇ ಕೇಡುಮಾಡಿಕೊಳ್ಳುತ್ತಾನೆ. ಗದರಿಕೆಯನ್ನು ಕೇಳುವವನು ತಿಳುವಳಿಕೆಯನ್ನು ಪಡೆದುಕೊಳ್ಳುವನು.

33 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಜ್ಞಾನಿಯಾಗುತ್ತಿದ್ದಾನೆ. ಸನ್ಮಾನ ಹೊಂದಬೇಕೆನ್ನುವವನು ಮೊದಲು ದೀನನಾಗಿರಬೇಕು.

2 ಕೊರಿಂಥದವರಿಗೆ 1:1-11

ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನಾನು ದೇವರ ಚಿತ್ತಾನುಸಾರ ಅಪೊಸ್ತಲನಾಗಿದ್ದೇನೆ. ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಇಡೀ ಅಖಾಯ ಸೀಮೆಯಲ್ಲಿರುವ ದೇವಜನರೆಲ್ಲರಿಗೂ ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ತಿಮೊಥೆಯನೊಡನೆ ಸೇರಿ ಬರೆಯುತ್ತಿದ್ದೇನೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ

ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ದೇವರು ಕನಿಕರದಿಂದ ತುಂಬಿರುವ ತಂದೆಯಾಗಿದ್ದಾನೆ. ಆತನು ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆ. ನಮಗೆ ಸಂಕಷ್ಟವಿರುವಾಗಲೆಲ್ಲಾ ಆತನು ನಮ್ಮನ್ನು ಸಂತೈಸುತ್ತಾನೆ; ಸಂಕಷ್ಟಗಳಲ್ಲಿರುವ ಇತರ ಜನರನ್ನು ಸಂತೈಸಲು ಇದರ ಮೂಲಕ ನಾವು ಸಹ ಶಕ್ತರಾಗುತ್ತೇವೆ. ದೇವರು ನಮ್ಮನ್ನು ಸಂತೈಸುವಂತೆಯೇ ನಾವು ಸಹ ಅವರನ್ನು ಸಂತೈಸಬಲ್ಲವರಾಗುತ್ತೇವೆ. ನಾವು ಕ್ರಿಸ್ತನ ಅನೇಕ ಬಾಧೆಗಳಲ್ಲಿ ಪಾಲುಗಾರರಾಗುತ್ತೇವೆ. ಅದೇ ರೀತಿಯಲ್ಲಿ, ಕ್ರಿಸ್ತನ ಮೂಲಕ ಹೇರಳವಾದ ಆದರಣೆಯು ನಮಗೆ ಬರುತ್ತದೆ. ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ. ನಿಮ್ಮ ವಿಷಯದಲ್ಲಿ ನಮಗೆ ಬಲವಾದ ನಿರೀಕ್ಷೆಯಿದೆ. ನೀವು ನಮ್ಮ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ನಮ್ಮ ಆದರಣೆಯಲ್ಲಿಯೂ ನೀವು ಪಾಲುಗಾರರಾಗುತ್ತೀರಿ ಎಂಬುದು ನನಗೆ ತಿಳಿದಿದೆ.

ಸಹೋದರ ಸಹೋದರಿಯರೇ, ನಾವು ಏಷ್ಯಾ ಪ್ರಾಂತ್ಯದಲ್ಲಿ ಅನುಭವಿಸಿದ ಸಂಕಟದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅಲ್ಲಿ ನಮಗೆ ಅಪಾರವಾದ ಭಾರಗಳಿದ್ದವು. ಆ ಭಾರಗಳು ನಮ್ಮ ಸ್ವಂತ ಶಕ್ತಿಗಿಂತಲೂ ಅಧಿಕವಾಗಿದ್ದವು. ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆಯನ್ನು ಸಹ ನಾವು ಬಿಟ್ಟುಕೊಟ್ಟೆವು. ನಿಜವಾಗಿಯೂ ನಾವು ಸಾಯುತ್ತೇವೆಂದು ನಮ್ಮ ಹೃದಯಗಳಲ್ಲಿ ನಂಬಿಕೊಂಡೆವು. ನಾವು ನಮ್ಮಲ್ಲಿ ಭರವಸೆ ಇಡದಂತೆಯೂ ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವ ದೇವರಲ್ಲಿ ಭರವಸೆ ಇಡಬೇಕೆಂತಲೂ ಇದಾಯಿತು. 10 ಮರಣದ ಈ ಮಹಾ ಅಪಾಯಗಳಿಂದ ದೇವರು ನಮ್ಮನ್ನು ರಕ್ಷಿಸಿದನು. ಮತ್ತು ಇನ್ನು ಮುಂದೆಯೂ ರಕ್ಷಿಸುವನು. ನಾವು ಆತನಲ್ಲಿ ಭರವಸೆ ಇಟ್ಟಿದ್ದೇವೆ. ಆತನು ನಮ್ಮನ್ನು ಇನ್ನು ಮುಂದೆಯೂ ರಕ್ಷಿಸುವನು. 11 ಇದಲ್ಲದೆ ನೀವು ನಿಮ್ಮ ಪ್ರಾರ್ಥನೆಗಳ ಮೂಲಕ ನಮಗೆ ಸಹಾಯ ಮಾಡಬಲ್ಲಿರಿ. ಆಗ, ನಿಮ್ಮ ಪ್ರಾರ್ಥನೆಗಳ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸಿರುವುದನ್ನು ಕಂಡು ಅನೇಕರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International