Revised Common Lectionary (Complementary)
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!
ಗೋಡೆಯ ಮೇಲೆ ಅದ್ಭುತ ಲೇಖನ
5 ರಾಜನಾದ ಬೇಲ್ಶಚ್ಚರನು ತನ್ನ ಒಂದು ಸಾವಿರ ಜನ ಅಧಿಕಾರಿಗಳಿಗೆ ಒಂದು ಔತಣವನ್ನು ಕೊಟ್ಟನು. ರಾಜನು ಅವರ ಜೊತೆ ದ್ರಾಕ್ಷಾರಸವನ್ನು ಪಾನ ಮಾಡುತ್ತಿದ್ದನು. 2 ಬೇಲ್ಶಚ್ಚರನು ದ್ರಾಕ್ಷಾರಸ ಪಾನ ಮಾಡುವಾಗ, ತನ್ನ ತಂದೆಯಾದ ನೆಬೂಕದ್ನೆಚ್ಚರನು ಜೆರುಸಲೇಮಿನ ಆಲಯದಿಂದ ಎತ್ತಿಕೊಂಡು ಬಂದಿದ್ದ ಬೆಳ್ಳಿಬಂಗಾರಗಳ ಲೋಟಗಳನ್ನು ತೆಗೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ತನ್ನ ಮುಖಂಡರು, ಪತ್ನಿಯರು ಮತ್ತು ಉಪಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾರಸ ಪಾನ ಮಾಡಬೇಕೆಂದು ರಾಜನಾದ ಬೇಲ್ಶಚ್ಚರನ ಅಪೇಕ್ಷೆಯಾಗಿತ್ತು. 3 ಆದ್ದರಿಂದ ಅವರು ಜೆರುಸಲೇಮಿನ ಆಲಯದಿಂದ ತಂದಿದ್ದ ಆ ಪಾತ್ರೆಗಳನ್ನು ತಂದರು. ರಾಜನು, ಅವನ ಅಧಿಕಾರಿಗಳು, ಅವನ ಪತ್ನಿಯರು, ಅವನ ಉಪಪತ್ನಿಯರು ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದರು. 4 ಅವರು ಕುಡಿಯುವಾಗ ತಮ್ಮ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸುತ್ತಿದ್ದರು.
5 ಆಗ ಫಕ್ಕನೆ ಮನುಷ್ಯನ ಕೈಯೊಂದು ಕಾಣಿಸಿಕೊಂಡು ಗೋಡೆಯ ಮೇಲೆ ಬರೆಯುವದಕ್ಕೆ ಪ್ರಾರಂಭಿಸಿತು. ಬೆರಳುಗಳು ಗೋಡೆಯ ಸುಣ್ಣದ ಮೇಲೆ ಅಕ್ಷರಗಳನ್ನು ಕೊರೆದವು. ಆ ಕೈಯು ದೀಪಸ್ತಂಭದ ಹತ್ತಿರ ಅರಮನೆಯ ಗೋಡೆಯ ಮೇಲೆ ಅರಸನ ಕಣ್ಣೆದುರಿನಲ್ಲಿಯೇ ಬರೆಯಿತು.
6 ರಾಜನಾದ ಬೇಲ್ಶಚ್ಚರನು ಬಹಳ ಹೆದರಿದನು. ಭಯದಿಂದ ಅವನ ಮುಖವು ಕಳೆಗುಂದಿತು; ಮತ್ತು ಅವನ ಮೊಣಕಾಲುಗಳು ನಡುಗಿ ಒಂದಕ್ಕೊಂದು ಬಡಿಯುತ್ತಿದ್ದವು. ಅವನ ಕಾಲುಗಳು ತುಂಬ ಬಲಹೀನವಾಗಿ ಅವನಿಗೆ ನಿಲ್ಲಲಾಗಲಿಲ್ಲ. 7 ಆಗ ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ತನ್ನಲ್ಲಿಗೆ ಕರೆಸಿದನು. ಅವನು ಆ ವಿದ್ವಾಂಸರಿಗೆ, “ಈ ಬರವಣಿಗೆಯನ್ನು ಓದಿ ನನಗೆ ಅದರ ಅರ್ಥವನ್ನು ಹೇಳಬಲ್ಲ ಮನುಷ್ಯನಿಗೆ ನಾನು ಬಹುಮಾನವನ್ನು ಕೊಡುತ್ತೇನೆ. ಆ ಮನುಷ್ಯನಿಗೆ ನಾನು ಕಂದು ಬಣ್ಣದ ವಸ್ತ್ರಗಳನ್ನು ಕೊಡುತ್ತೇನೆ. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
8 ಆಸ್ಥಾನದ ವಿದ್ವಾಂಸರೆಲ್ಲರೂ ಬಂದು ನೋಡಿದರು. ಆದರೆ ಆ ಬರಹವನ್ನು ಓದುವುದಕ್ಕಾಗಲಿ ಅದರ ಅರ್ಥವನ್ನು ತಿಳಿದುಕೊಳ್ಳುವುದಕ್ಕಾಗಲಿ ಅವರಿಗೆ ಆಗಲಿಲ್ಲ. 9 ಆಗ ಅರಸನಾದ ಬೇಲ್ಶಚ್ಚರನ ಅಧಿಕಾರಿಗಳಿಗೆ ಏನೂ ತೋಚದಂತಾಯಿತು. ಅರಸನು ಮತ್ತಷ್ಟು ಅಂಜಿದನು ಮತ್ತು ಕಳವಳಪಟ್ಟನು. ಅವನ ಮುಖವು ಭಯದಿಂದ ಕಳೆಗುಂದಿತು.
10 ಆಗ ರಾಜನ ತಾಯಿಯು ಆ ಔತಣ ಶಾಲೆಗೆ ಬಂದಳು. ರಾಜನು ಮತ್ತು ಅವನ ಅಧಿಕಾರಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಅವಳು, “ರಾಜನೇ, ಚಿರಂಜೀವಿಯಾಗಿರು, ಭಯಪಡಬೇಡ. ಭಯದಿಂದ ನಿನ್ನ ಮುಖ ಅಷ್ಟೊಂದು ಬಿಳುಚಿಕೊಳ್ಳಲು ಬಿಡಬೇಡ. 11 ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ. ದೇವರ ಜ್ಞಾನಕ್ಕೆ ಸಮಾನವಾದ ಜ್ಞಾನವೂ ಬುದ್ಧಿಯೂ ರಹಸ್ಯವನ್ನು ತಿಳಿದುಕೊಳ್ಳುವ ಶಕ್ತಿಯೂ ತನಗಿರುವುದಾಗಿ ಅವನು ನಿನ್ನ ತಂದೆಯ ಕಾಲದಲ್ಲಿಯೇ ತೋರಿಸಿಕೊಟ್ಟಿದ್ದಾನೆ. ನಿನ್ನ ತಂದೆಯಾದ ನೆಬೂಕದ್ನೆಚ್ಚರನು ಈ ಮನುಷ್ಯನನ್ನು ಎಲ್ಲ ವಿದ್ವಾಂಸರ ಅಧ್ಯಕ್ಷನನ್ನಾಗಿ ನೇಮಿಸಿದ್ದನು. ಎಲ್ಲ ಜೋಯಿಸರಿಗೆ, ಮಂತ್ರವಾದಿಗಳಿಗೆ, ಶಾಕುನಿಕರಿಗೆ ಮತ್ತು ಪಂಡಿತರಿಗೆ ಇವನು ಮುಖ್ಯಸ್ಥನಾಗಿದ್ದನು. 12 ನಾನು ಹೇಳುತ್ತಿರುವ ಮನುಷ್ಯನ ಹೆಸರು ದಾನಿಯೇಲ. ರಾಜನು ಅವನಿಗೆ ಬೇಲ್ತೆಶಚ್ಚರನೆಂದು ಹೆಸರಿಟ್ಟಿದ್ದನು. ಬೇಲ್ತೆಶಚ್ಚರನು ಬಹಳ ಚಾಣಾಕ್ಷ ಮತ್ತು ಅನೇಕ ವಿಷಯಗಳನ್ನು ಬಲ್ಲವನು, ಅವನು ಕನಸುಗಳ ಅರ್ಥವನ್ನು ಹೇಳಬಲ್ಲನು, ರಹಸ್ಯಗಳನ್ನು ವಿವರಿಸಬಲ್ಲನು; ಕಠಿಣವಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲನು. ದಾನಿಯೇಲನನ್ನು ಕರೆಯಿಸು. ಅವನು ಗೋಡೆಯ ಮೇಲಿನ ಬರಹದ ಅರ್ಥವನ್ನು ನಿನಗೆ ಹೇಳುತ್ತಾನೆ” ಎಂದು ಹೇಳಿದಳು.
ದೇವರ ಮಂದೆ
5 ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. 2 ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. 3 ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. 4 ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.
5 ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.
“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)
6 ಆದ್ದರಿಂದ ದೇವರ ಶಕ್ತಿಯುತವಾದ ಹಸ್ತದ ಕೆಳಗೆ ನಮ್ರತೆಯಿಂದಿರಿ. ಯೋಗ್ಯಕಾಲವು ಸಮೀಪಿಸಿದಾಗ ಆತನು ನಿಮ್ಮನ್ನು ಮೇಲೆತ್ತುವನು. 7 ಆತನು ನಿಮ್ಮನ್ನು ಪರಿಪಾಲಿಸುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಆತನಿಗೆ ಒಪ್ಪಿಸಿರಿ.
8 ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ. 9 ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
10 ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು. 11 ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International