Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
Error: 'ಸಿರಾಖನು 35:12-17' not found for the version: Kannada Holy Bible: Easy-to-Read Version
ಯೆರೆಮೀಯ 14:7-10

“ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
    ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
    ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
    ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
    ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
ನೀನು ಸ್ತಬ್ಧನಾಗಿರುವೆ;
    ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
    ನಾವು ನಿನ್ನ ಹೆಸರಿನವರಾಗಿದ್ದೇವೆ.
    ಆದ್ದರಿಂದ ನಮ್ಮನ್ನು ಕೈಬಿಡಬೇಡ.”

10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”

ಯೆರೆಮೀಯ 14:19-22

19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
    ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
    ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
    ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
    ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
    ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
    ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
    ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
    ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
    ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
    ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.

ಕೀರ್ತನೆಗಳು 84:1-7

ರಚನೆಗಾರರು: ಕೋರಹೀಯರು.

84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
    ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
    ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
    ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
    ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
    ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
ಜನರು ದೇವರನ್ನು ಸಂದರ್ಶಿಸಲು
    ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.

2 ತಿಮೊಥೆಯನಿಗೆ 4:6-8

ನನ್ನ ಜೀವಿತವನ್ನು ದೇವರಿಗಾಗಿ ಅರ್ಪಿಸುತ್ತಿದ್ದೇನೆ. ನಾನು ಈ ಲೋಕವನ್ನು ಬಿಟ್ಟುಹೋಗುವ ಕಾಲವು ಸಮೀಪಿಸಿದೆ. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ. ಪಂದ್ಯದಲ್ಲಿ ನನ್ನ ಓಟವನ್ನು ಮುಗಿಸಿದ್ದೇನೆ; ನನ್ನ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರೆಯುವ ಜಯಮಾಲೆಯು ಈಗ ನನಗೆ ಸಿದ್ಧವಾಗಿದೆ. ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಪ್ರಭುವೇ ನನಗೆ ಅದನ್ನು ಆ ದಿನದಂದು ಕೊಡುವನು. ನನಗೆ ಮಾತ್ರವಲ್ಲದೆ ಆತನ ಬರುವಿಕೆಯನ್ನು ಅಪೇಕ್ಷಿಸಿ ಅದಕ್ಕಾಗಿ ಕಾಯುತ್ತಿದ್ದವರಿಗೆಲ್ಲ ಆತನು ಆ ಜಯಮಾಲೆಯನ್ನು ದಯಪಾಲಿಸುವನು.

2 ತಿಮೊಥೆಯನಿಗೆ 4:16-18

16 ಮೊದಲ ಸಲ ನಾನು ನನ್ನನ್ನು ಸಮರ್ಥಿಸಿಕೊಂಡಾಗ ನನಗೆ ಯಾರೂ ಸಹಾಯಮಾಡಲಿಲ್ಲ. ಎಲ್ಲರೂ ನನ್ನನ್ನು ಬಿಟ್ಟುಹೋದರು. ದೇವರು ಅವರನ್ನು ಕ್ಷಮಿಸಲಿ ಎಂದು ಪ್ರಾರ್ಥಿಸುತ್ತೇನೆ. 17 ಆದರೆ ಪ್ರಭುವು ನನ್ನ ಬಳಿಯೇ ಇದ್ದನು. ನಾನು ಸುವಾರ್ತೆಯನ್ನು ಯೆಹೂದ್ಯರಲ್ಲದವರಿಗೆ ಸಂಪೂರ್ಣವಾಗಿ ಬೋಧಿಸಲು ಪ್ರಭುವು ನನಗೆ ಶಕ್ತಿಯನ್ನು ದಯಪಾಲಿಸಿದನು. ಆ ಸುವಾರ್ತೆಯನ್ನು ಯೆಹೂದ್ಯರಲ್ಲದ ಜನರೆಲ್ಲರೂ ಕೇಳುವುದು ಪ್ರಭುವಿನ ಇಷ್ಟವಾಗಿತ್ತು. ಆತನು ನನ್ನನ್ನು ಸಿಂಹದ (ಶತ್ರು) ಬಾಯಿಂದ ರಕ್ಷಿಸಿದನು. 18 ಯಾರಾದರೂ ನನಗೆ ತೊಂದರೆ ಮಾಡಲು ಪ್ರಯತ್ನಿಸಿದರೆ, ಪ್ರಭುವು ನನ್ನನ್ನು ರಕ್ಷಿಸುವನು. ಪ್ರಭುವು ನನ್ನನ್ನು ಸುರಕ್ಷಿತವಾಗಿ ತನ್ನ ಪರಲೋಕರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಪ್ರಭುವಿಗೆ ಮಹಿಮೆಯಾಗಲಿ.

ಲೂಕ 18:9-14

ನೀತಿನಿರ್ಣಯ

ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು. 10 “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು. 11 ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. 12 ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು.

13 “ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು. 14 ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International