Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 84:1-7

ರಚನೆಗಾರರು: ಕೋರಹೀಯರು.

84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
    ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
    ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
    ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
    ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
    ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
ಜನರು ದೇವರನ್ನು ಸಂದರ್ಶಿಸಲು
    ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.

ಯೆರೆಮೀಯ 9:17-26

17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ,
    ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.
18 ‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ.
ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು;
    ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.

19 “ಚೀಯೋನಿನಿಂದ ಮಹಾಗೋಳಾಟವು ಕೇಳಿಸುತ್ತಿದೆ:
    ‘ನಿಜವಾಗಿಯೂ ನಾವು ಹಾಳಾಗಿಹೋದೆವು.
    ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ.
ನಾವು ನಮ್ಮ ನಾಡನ್ನು ಬಿಡಬೇಕು,
    ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.’”

20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ.
    ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ.
ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ.
    ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.
21 ಮೃತ್ಯುವು ಬಂದು ನಮ್ಮ ಕಿಟಕಿಗಳಿಂದ ಇಳಿದಿದೆ.
    ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ.
ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ.
    ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.”

22 ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು:
“‘ಹೊಲಗಳಲ್ಲಿ ಗೊಬ್ಬರ ಬಿದ್ದಂತೆ ಹೆಣಗಳು ಬೀಳುವವು.
    ಆ ಶವಗಳು ಹೊಲ ಕೊಯ್ಯುವವನ ಹಿಂದೆ
    ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.’”

23 ಯೆಹೋವನು ಹೇಳುತ್ತಾನೆ,
“ಜ್ಞಾನಿಗಳು ತಮ್ಮ ಜ್ಞಾನದ ಬಗ್ಗೆ
    ಜಂಬಕೊಚ್ಚಿಕೊಳ್ಳಬಾರದು.
ಬಲಶಾಲಿಗಳು ತಮ್ಮ ಬಲದ ಬಗ್ಗೆ
    ಬಡಾಯಿಕೊಚ್ಚಿಕೊಳ್ಳಬಾರದು.
ಶ್ರೀಮಂತರು ತಮ್ಮ ಸಂಪತ್ತಿನ ಬಗ್ಗೆ
    ಜಂಬಕೊಚ್ಚಿಕೊಳ್ಳಬಾರದು.
24 ಯಾವನಾದರೂ ಜಂಬಕೊಚ್ಚಿಕೊಳ್ಳಬೇಕಾದರೆ, ಅವನು ನನ್ನನ್ನು ಅರಿತಿರುವುದಾಗಿಯೂ
    ನನ್ನನ್ನು ತಿಳಿದುಕೊಂಡಿರುವುದಾಗಿಯೂ ಜಂಬಪಡಲಿ.
ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಬಪಡಲಿ.
    ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ,
    ನಾನು ಭೂಲೋಕದಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ.
    ಆಗ ನನಗೆ ಸಂತೋಷವಾಗುವುದು.”
ಇದು ಯೆಹೋವನ ನುಡಿ.

25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ. 26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.

2 ತಿಮೊಥೆಯನಿಗೆ 3:10-15

ಅಂತಿಮ ಸಲಹೆಗಳು

10 ಆದರೆ ನನ್ನನ್ನು ಕುರಿತು ನಿನಗೆ ಎಲ್ಲವೂ ತಿಳಿದಿದೆ. ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸೈರಣೆ ನಿನಗೆ ತಿಳಿದಿವೆ. 11 ನನಗೆ ಸಂಭವಿಸಿದ ಹಿಂಸೆ ಮತ್ತು ಸಂಕಟಗಳ ಬಗ್ಗೆಯೂ ನಿನಗೆ ತಿಳಿದಿದೆ. ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳಲ್ಲಿ ನನಗೆ ಸಂಭವಿಸಿದ ಸಂಗತಿಗಳೆಲ್ಲವೂ ನಿನಗೆ ತಿಳಿದಿವೆ. ನಾನು ಆ ಸ್ಥಳಗಳಲ್ಲಿ ಅನುಭವಿಸಿದ ಹಿಂಸೆಯು ನಿನಗೆ ತಿಳಿದಿದೆ. ಆದರೆ ಆ ಎಲ್ಲ ತೊಂದರೆಗಳಿಂದ ಪ್ರಭುವು ನನ್ನನ್ನು ಕಾಪಾಡಿದನು. 12 ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತಕ್ಕನುಸಾರವಾಗಿ ಜೀವಿಸುವ ಪ್ರತಿಯೊಬ್ಬರೂ ಹಿಂಸೆಗೆ ಒಳಗಾಗುವರು. 13 ದುಷ್ಟರು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನದಿಂದ ದಿನಕ್ಕೆ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.

14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International