Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 57

ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ

57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
    ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
    ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
ಆತನು ಪರಲೋಕದಿಂದ ನನಗೆ ಸಹಾಯಮಾಡಿ,
    ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.

ನನ್ನ ಪ್ರಾಣವು ಅಪಾಯದಲ್ಲಿದೆ.
    ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
    ಅವರ ಹಲ್ಲುಗಳು ಬಾಣಗಳಂತಿವೆ;
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.

ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನನ್ನನ್ನು ಬಂಧಿಸಲು
    ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
    ಆದರೆ ಅವರೇ ಅದರಲ್ಲಿ ಬಿದ್ದುಹೋದರು.

ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
    ನಾನು ವಾದ್ಯ ಬಾರಿಸುತ್ತಾ ಹಾಡುವೆನು.
ನನ್ನ ಮನವೇ, ಎಚ್ಚರಗೊಳ್ಳು!
    ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
    ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
    ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
    ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.

1 ಸಮುವೇಲನು 25:36-42

ನಾಬಾಲನ ಮರಣ

36 ಅಬೀಗೈಲಳು ನಾಬಾಲನ ಬಳಿಗೆ ಹಿಂದಿರುಗಿ ಹೋದಳು. ನಾಬಾಲನು ಮನೆಯಲ್ಲಿಯೇ ಇದ್ದನು. ನಾಬಾಲನು ರಾಜನಂತೆ ತಿನ್ನುತ್ತಾ ಕುಡಿದು ಮತ್ತನಾಗಿದ್ದನು. ಆದ್ದರಿಂದ ಅಬೀಗೈಲಳು ಮಾರನೆಯ ದಿನದ ಹೊತ್ತಾರೆಯವರೆಗೆ ನಾಬಾಲನಿಗೆ ಏನನ್ನೂ ಹೇಳಲಿಲ್ಲ. 37 ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು. 38 ಹತ್ತು ದಿನಗಳಾದ ಮೇಲೆ, ಯೆಹೋವನು ನಾಬಾಲನಿಗೆ ಸಾವನ್ನು ಬರಮಾಡಿದನು.

39 ನಾಬಾಲನು ಸತ್ತನೆಂಬುದು ದಾವೀದನಿಗೆ ತಿಳಿಯಿತು. ದಾವೀದನು, “ಯೆಹೋವನಿಗೆ ಸ್ತೋತ್ರವಾಗಲಿ! ನಾಬಾಲನು ನನ್ನ ಬಗ್ಗೆ ಕೆಟ್ಟಮಾತುಗಳನ್ನು ಆಡಿದನು, ಆದರೆ ಯೆಹೋವನು ನನಗೆ ಸಹಾಯ ಮಾಡಿದನು. ನಾನು ತಪ್ಪುಮಾಡದಂತೆ ಯೆಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯೆಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು.

ನಂತರ ದಾವೀದನು ಅಬೀಗೈಲಳಿಗೆ ಒಂದು ಸಂದೇಶವನ್ನು ಕಳುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿಕೊಂಡನು. 40 ದಾವೀದನ ಸೈನಿಕರು ಕರ್ಮೆಲಿಗೆ ಹೋಗಿ ಅಬೀಗೈಲಳಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕೆಂಬುದು ದಾವೀದನ ಅಪೇಕ್ಷೆ” ಎಂದು ಹೇಳಿದರು.

41 ಅಬೀಗೈಲಳು ಸಾಷ್ಟಾಂಗನಮಸ್ಕಾರಮಾಡಿ, “ನಾನು ನಿಮ್ಮ ದಾಸಿ. ನಾನು ನಿಮ್ಮ ಸೇವೆಗೆ ಸಿದ್ಧಳಾಗಿದ್ದೇನೆ. ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯಲು ಸಿದ್ಧಳಾಗಿರುವೆ” ಎಂದಳು.

42 ಅಬೀಗೈಲಳು ಬೇಗನೆ ಒಂದು ಕತ್ತೆಯ ಮೇಲೇರಿ, ದಾವೀದನ ಸಂದೇಶಕರೊಂದಿಗೆ ಹೊರಟುಹೋದಳು. ಅಬೀಗೈಲಳು ಐದು ಜನ ಸೇವಕಿಯರನ್ನು ತನ್ನೊಂದಿಗೆ ಕರೆದುಕೊಂಡು ಹೋದಳು. ಅವಳು ದಾವೀದನ ಹೆಂಡತಿಯಾದಳು.

ಲೂಕ 22:39-46

ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ

(ಮತ್ತಾಯ 26:36-46; ಮಾರ್ಕ 14:32-42)

39 ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40 ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

41 ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42 “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44 ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46 ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International